Advertisement

ದೆವ್ವದ ಮನೆಯಲ್ಲಿ ಕಾಮಿಡಿ

08:17 PM Jul 25, 2019 | mahesh |

– ಮನೆ ಮಾರಾಟಕ್ಕಿದೆ …
ಸಾಮಾನ್ಯವಾಗಿ ರಸ್ತೆ ಬದಿಯಿರುವ ಮನೆಯ ಮುಂದೆ ಈ ರೀತಿಯ ಬರಹದೊಂದಿಗೆ ನೇತಾಕಿರುವ ಬೋರ್ಡು ಸಹಜವಾಗಿಯೇ ಕಾಣಸಿಗುತ್ತದೆ ಅಥವಾ ಯಾವುದಾದರೊಂದು ವಾಹಿನಿಯಲ್ಲೋ, ಪತ್ರಿಕೆಯಲ್ಲೋ ಜಾಹಿರಾತು ಕಂಡುಬರುತ್ತೆ. ಅದರಲ್ಲೇನು ವಿಶೇಷ ಎಂಬ ಪ್ರಶ್ನೆ ಕಾಡಬಹುದು. ಆದರೆ, ಚಿತ್ರವೊಂದಕ್ಕೆ “ಮನೆ ಮಾರಾಟಕ್ಕಿದೆ’ ಎಂದು ನಾಮಕರಣ ಮಾಡಿರುವುದು ವಿಶೇಷತೆಯಲ್ಲೊಂದು. ಈ ಚಿತ್ರ ಈಗಾಗಲೇ ಸದ್ದಿಲ್ಲದೆಯೆ ಚಿತ್ರೀಕರಣ ಕೂಡ ಮುಗಿಸಿದೆ ಚಿತ್ರತಂಡ.

Advertisement

ಹೆಸರಲ್ಲೇ ಕುತೂಹಲ ಕೆರಳಿಸಿರುವ ಚಿತ್ರದಲ್ಲಿ ಒಬ್ಬರಲ್ಲ, ಇಬ್ಬರಲ್ಲ, ನಾಲ್ವರು ಹಾಸ್ಯ ನಟರು ಪ್ರಮುಖ ಆಕರ್ಷಣೆ. ಹಾಗಾಗಿ, ಇದೊಂದು ಹಾಸ್ಯಮಯ ಚಿತ್ರ ಅನ್ನುವುದೂ ಅಷ್ಟೇ ಸತ್ಯ. ಮಂಜು ಸ್ವರಾಜ್‌ ಈ ಚಿತ್ರದ ನಿರ್ದೇಶಕರು. ಎಸ್‌.ವಿ.ಬಾಬು ನಿರ್ಮಾಪಕರು. ಸಾಧು ಕೋಕಿಲ, ಚಿಕ್ಕಣ್ಣ, ರವಿಶಂಕರ್‌ ಗೌಡ ಮತ್ತು “ಕುರಿ’ ಪ್ರತಾಪ್‌ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಹೇಳಲೆಂದೇ ಪತ್ರಕರ್ತರ ಎದುರು ಆಗಮಿಸಿದ್ದ ಚಿತ್ರತಂಡ, ಅಂದು “ಮನೆ ಮಾರಾಟಕ್ಕಿದೆ’ ಚಿತ್ರದ ಕುರಿತು ಹೇಳಿಕೊಂಡಿತು.

ಮೊದಲು ಮಾತಿಗಿಳಿದ ನಿರ್ದೇಶಕ ಮಂಜು ಸ್ವರಾಜ್‌, “ನಾಲ್ವರು ನಟರನ್ನು ಒಂದೇ ಸಿನಿಮಾದಲ್ಲಿ ನಿರ್ವಹಿಸುವುದು ಕಷ್ಟ. ಅದರಲ್ಲೂ ಲೀಡಿಂಗ್‌ ಕಾಮಿಡಿ ನಟರನ್ನು ಇಟ್ಟುಕೊಂಡು ಕೆಲಸ ಮಾಡುವುದು ಹರಸಾಹಸ. ಆದರೂ, ಅವರ ಸಹಕಾರದಿಂದ ಚಿತ್ರ ಯಶಸ್ವಿಯಾಗಿ ಮುಗಿದಿದೆ. ಇದೊಂದು ಕಾಮಿಡಿ ಹಾರರ್‌ ಸಿನಿಮಾ. ಎರಡು ಜಾನರ್‌ ಮಿಕ್ಸ್‌ ಮಾಡಿ ಮಾಡಲಾಗಿದೆ. ಶೇ.90 ರಷ್ಟು ಚಿತ್ರದ ಚಿತ್ರೀಕರಣವನ್ನು ಮೋಹನ್‌ ಬಿ.ಕೆ.ರೆ ಸ್ಟುಡಿಯೋದ ಮನೆಯ ಸೆಟ್‌ ಹಾಕಿ ಚಿತ್ರೀಕರಿಸಲಾಗಿದೆ. ಇಂಥದ್ದೊಂದು ಚಿತ್ರ ಮಾಡಲು ಕಾರಣ, ನಿರ್ಮಾಪಕರು. ಅವರ ಜೊತೆ ಇದು ನನ್ನ ಎರಡನೇ ಚಿತ್ರ. “ಮನೆ ಮಾರಾಟಕ್ಕಿದೆ’ ಚಿತ್ರಕ್ಕೆ “ದೆವ್ವಗಳೇ ಎಚ್ಚರ ‘ ಎಂಬ ಅಡಿಬರಹವಿದೆ. ಇಲ್ಲಿ ದೆವ್ವಗಳಿವೆ. ಹಾಗಂತ, ಇಲ್ಲಿ ಯಾರೂ ಹೆದರಲ್ಲ, ಬದಲಾಗಿ ಆ ನಾಲ್ವರು ಆ ದೆವ್ವವನ್ನೇ ಹೆದರಿಸುತ್ತಾರೆ, ನಗಿಸುತ್ತಾರೆ. ಇಲ್ಲಿ ಗಂಭೀರವಾದ ದೆವ್ವ ಇದ್ದರೂ, ಚಿತ್ರ ಹಾಸ್ಯ ರೂಪದಲ್ಲೇ ಸಾಗುತ್ತೆ’ ಎಂದು ವಿವರ ಕೊಟ್ಟರು ಮಂಜು ಸ್ವರಾಜ್‌.

ಚಿಕ್ಕಣ್ಣ ಅವರಿಗೆ ಮೊದಲ ಸಲ ನಾಲ್ವರು ಲೀಡಿಂಗ್‌ ಕಾಮಿಡಿ ನಟರು ಸೇರಿ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಖುಷಿ ಕೊಟ್ಟಿದೆಯಂತೆ. ಇಡೀ ಸಿನಿಮಾದಲ್ಲಿ ಹಾಸ್ಯ ಹೈಲೈಟ್‌ ಆಗಿರಲಿದೆ. “ಚಿತ್ರದಲ್ಲಿ ಒಬ್ಬರಿಗಿಂತ ಒಬ್ಬರು ನೋಡುಗರನ್ನು ರಂಜಿಸಲಿದ್ದಾರೆ. ಸಿನಿಮಾ ಬಗ್ಗೆ ಎಲ್ಲವನ್ನೂ ಹೇಳಿದರೆ ಮಜ ಇರಲ್ಲ. ಚಿತ್ರಮಂದಿರದಲ್ಲೇ ನೋಡಬೇಕು’ ಎಂದಷ್ಟೇ ಹೇಳಿ ಸುಮ್ಮನಾದರು.

ರವಿಶಂಕರ್‌ ಗೌಡ ಅವರಿಗೆ, ಇಲ್ಲೊಂದು ವಿಶೇಷ ಪಾತ್ರವಿದೆಯಂತೆ. “ಚಿತ್ರದ ಪೋಸ್ಟರ್‌ ನೋಡಿದರೆ, ಇದೊಂದು ಕಾಮಿಡಿ ಸಿನಿಮಾ ಅನಿಸುವುದು ಪಕ್ಕಾ. ನಮಗೂ ಅದೇ ಆಶಾಭಾವನೆ ಇದೆ. ಜನರಿಗೆ ಖಂಡಿತ ಇದು ಹಂಡ್ರೆಡ್‌ ಪರ್ಸೆಂಟ್‌ ಮನರಂಜನೆ ಕೊಡಲಿದೆ. ಸಿನಿಮಾ ನೋಡುಗರಿಗೆ ಎಲ್ಲೂ ಮೋಸ ಆಗಲ್ಲ’ ಎಂಬುದು ಅವರ ಮಾತು.

Advertisement

“ಕುರಿ’ ಪ್ರತಾಪ್‌ ಅವರಿಗೆ ಇಲ್ಲೊಂದು ಸಖತ್‌ ಡ್ಯಾನ್ಸ್‌ ಮಾಡುವ ಹಾಡು ಸಿಕ್ಕಿದೆಯಂತೆ. ನಿರ್ಮಾಪಕರ ಬ್ಯಾನರ್‌ನಲ್ಲಿ ಇದು ಅವರಿಗೆ ಎರಡನೇ ಸಿನಿಮಾ ಆಗಿದ್ದು, ಪ್ರತಿ ಪಾತ್ರದಲ್ಲೂ ವಿಶೇಷತೆ ಇದೆ ಎಂಬುದು ಪ್ರತಾಪ್‌ ಮಾತು.

ಸಂಗೀತ ನಿರ್ದೇಶಕ ಅಭಿಮನ್‌ ರಾಯ್‌ ಅವರಿಗೂ ಮೊದಲ ಸಲ ನಾಲ್ವರು ಕಾಮಿಡಿ ನಟರ ಸಿನಿಮಾ ಮಾಡಿದ್ದು, ಮೂರ್‍ನಾಲ್ಕು ಸಿನಿಮಾ ಮಾಡಿದಷ್ಟೇ ಖುಷಿ ಇದೆಯಂತೆ. “ಇಲ್ಲಿ ಮೂರು ಹಾಡುಗಳಿದ್ದು, ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಸ್ಕೋಪ್‌ ಇದೆ. ಎಂಜಾಯ್‌ ಮಾಡಿಕೊಂಡೇ ಕೆಲಸ ಮಾಡಿದ್ದೇನೆ. ಎಲ್ಲರಿಗೂ ಇದು ಇಷ್ಟವಾಗಲಿದೆ ‘ ಎಂದರು ಅಭಿಮನ್‌ರಾಯ್‌.

ನಿರ್ಮಾಪಕ ಎಸ್‌.ವಿ.ಬಾಬು ಅವರಿಗೆ ಒಳ್ಳೆಯ ಚಿತ್ರ ಮಾಡಿದ ತೃಪ್ತಿ ಇದೆಯಂತೆ. ಎಲ್ಲಾ ನಟರು ಬಿಝಿ ಇದ್ದಾರೆ. ಅವರೆಲ್ಲರನ್ನೂ ಒಟ್ಟುಗೂಡಿಸಿ ಚಿತ್ರ ಮಾಡಿದ್ದು ಹೆಮ್ಮೆ. ಚಿಕ್ಕಣ್ಣ ನಮ್ಮ ಬ್ಯಾನರ್‌ನಲ್ಲಿ ಫ‌ಸ್ಟ್‌ ಟೈಮ್‌ ಮಾಡಿದ್ದಾರೆ. ಎಲ್ಲರಿಗೂ ರುಚಿಸುವ ಚಿತ್ರ ಇದಾಗಲಿದೆ’ ಎನ್ನುತ್ತಾರೆ ಎಸ್‌.ವಿ.ಬಾಬು.
ಛಾಯಾಗ್ರಾಹಕ ಸುರೇಶ್‌ಬಾಬು, ವಿನಯ್‌ ಎಸ್‌.ವಿ.ಬಾಬು, ವಿಶ್ವ, ಶ್ರೀನಿವಾಸನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next