ಹಾಸ್ಯ ನಟ ಮಿತ್ರ ನಿರ್ಮಿಸಿ, ಅಭಿನಯಿಸಿರುವ “ರಾಗ’ ಏಪ್ರಿಲ್ ಮೂರನೇ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಇದು ಮಿತ್ರ ನಿರ್ಮಾಣದ ಮೊದಲ ಸಿನಿಮಾ. ಈ ಸಿನಿಮಾ ಮೂಲಕ ಮಿತ್ರ ಹೊಸ ಇಮೇಜ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. “ರಾಗ’ ಕನ್ನಡಕ್ಕೊಂದು ಹೊಸತನದ ಸಿನಿಮಾ ಆಗಲಿದೆ ಎಂಬ ಆಶಯವೂ ಮಿತ್ರ ಅವರಿಗಿದೆ.
ಆರಂಭದಲ್ಲೇ ಶಿವರಾಜ್ ಕುಮಾರ್ ರಿಲೀಸ್ ಮಾಡಿದ ‘ರಾಗ’ದ ಪೋಸ್ಟರ್‌ಗಳು ಮನಸೆಳೆದಿದ್ದವು. ಅದಾದ ಬಳಿಕ ದರ್ಶನ್ ಬಿಡುಗಡೆ ಮಾಡಿದ ಟ್ರೇಲರ್ ಕೂಡ ಭಾರೀ ಮೆಚ್ಚುಗೆ ಪಡೆದಿತ್ತು. ಈಗ ಹಾಡುಗಳ ಸರದಿ. ಕ್ಲಾಸ್ ಮತ್ತು ಮಾಸ್ ಮಂದಿ ಈಗಾಗಲೇ “ರಾಗ’ದ “ಮನಸಿನ ಪುಟದಲಿ’, “ಯಾರೇ ನೀ’ ಮತ್ತು ‘ಆಲಿಸು ಬಾ’ ಹಾಡುಗಳನ್ನು ಮೆಚ್ಚಿಕೊಂಡು ಯುಟ್ಯೂಬ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಟ್ರೇಲರ್ ಬರೋಬ್ಬರಿ 2.65ಲಕ್ಷ ಮಂದಿಯಿಂದ ವೀಕ್ಷಣೆ ಕಂಡಿದೆ. ಹೀಗಾಗಿಯೇ ಮಿತ್ರ ಅವರು ತಮ್ಮ “ರಾಗ’ವನ್ನು ಏಪ್ರಿಲ್ ಮೂರನೇ ವಾರದಲ್ಲಿ ರಿಲೀಸ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ವಿತರಕರ ಜತೆ ಮಾತುಕತೆ ನಡೆದಿದ್ದು, ಇಷ್ಟರಲ್ಲೇ ದಿನಾಂಕ ಅನೌನ್ಸ್ ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ ಮಿತ್ರ. “ರಾಗ’ದ ಇನ್ನೊಂದು ವಿಶೇಷವೆಂದರೆ, ಈಗಾಗಲೇ ಅನ್ಯ ಭಾಷೆಗಳಿಗೆ ಡಬ್ಬಿಂಗ್ ಹಕ್ಕು ಕುರಿತು ಮಾತುಕತೆ ನಡೆದಿದೆ.
ಮಲ್ಟಿಪ್ಲೆಕ್ಸ್‌ನಲ್ಲಿ ತೆರೆ ಕಾಣುವ “ರಾಗ’ ಚಿತ್ರಕ್ಕೆ ಇಂಗ್ಲೀಷ್ ಸಬ್‌ಟೈಟಲ್ ಹಾಕುವ ಕೆಲಸವೂ ಭರದಿಂದ ನಡೆದಿದೆಯಂತೆ. ಇದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ 70 ನೇ ಸಿನಿಮಾ ಎಂಬುದು ಇನ್ನೊಂದು ವಿಶೇಷ. ಇರುವ ಐದು ಹಾಡುಗಳು ಸಹ ಚಿತ್ರದ ತೂಕವನ್ನು ಹೆಚ್ಚಿಸಿವೆ ಎನ್ನುವ ಮಿತ್ರ, ಸದ್ಯಕ್ಕೆ ಸೆನ್ಸಾರ್ ಮಂಡಳಿ ಮುಂದೆ “ರಾಗ’ವನ್ನು ತೋರಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
“ರಾಗ’ ತಮ್ಮ ವೃತ್ತಿ ಬದುಕಿನ ಮೈಲಿಗಲ್ಲು ಎಂದೇ ಭಾವಿಸಿರುವ ಮಿತ್ರ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರಂತೆ. ಬಹುತೇಕ ಕಾಲೇಜ್ ವಿದ್ಯಾರ್ಥಿಗಳು ತಂಡವನ್ನು ಆಹ್ವಾನಿಸಿ, ಟ್ರೇಲರ್,ಹಾಡು ವೀಕ್ಷಿಸಿ, ಸ್ವತಃ ಒಂದೊಂದು “ರಾಗ ಗ್ರೂಪ್’ ಮಾಡಿ ಆ ಮೂಲಕ ಚಿತ್ರದ ಟ್ರೇಲರ್, ಹಾಡು ಶೇರ್ ಮಾಡುವ ಮೂಲಕ ಸಹಕಾರ ನೀಡುತ್ತಿರುವುದರಿಂದ ಚಿತ್ರಕ್ಕೆ ಮತ್ತಷ್ಟು ಬಲ ಬಂದಿದೆ ಎನ್ನುತಾರೆ ಅವರು.
ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಭಾಮಾ ನಾಯಕಿಯಾಗಿದ್ದಾರೆ. ಉಳಿದಂತೆ ಅವಿನಾಶ್, ತಬಲಾನಾಣಿ, ರೂಪಿಕಾ, ರಮೇಶ್ ಭಟ್, ಕಡ್ಡಿಪುಡಿ ಚಂದ್ರು, ಸಿಹಿಕಹಿ, ಚಂದ್ರು, ಸಿಹಿಕಹಿ ಗೀತಾ, ನಂದಿನಿ ಇತರರು ನಟಿಸಿದ್ದಾರೆ. ವೈದಿ ಕ್ಯಾಮೆರಾ ಹಿಡಿದಿದ್ದಾರೆ.