Advertisement
ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿ ಕಾಮೆಡ್-ಕೆ ಆ. 26ರಿಂದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಲಿದೆ. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇನ್ನೂ ಪ್ರಕ್ರಿಯೆ ಆರಂಭಿಸದಿರುವುದು ಆಕಾಂಕ್ಷಿಗಳ ಆತಂಕಕ್ಕೆ ಕಾರಣವಾಗಿದೆ.
Related Articles
ಸರಕಾರ ಕೂಡ ಪ್ರತೀ ವರ್ಷ ಆಕಾಂಕ್ಷಿಗಳಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಸಿಇಟಿ ದಾಖಲಾತಿ ಪರಿಶೀಲನೆ ಮತ್ತು ಸೀಟು ಹಂಚಿಕೆ ಪ್ರಕ್ರಿಯೆಯನ್ನು ಮೊದಲು ನಡೆಸುತ್ತದೆ. ಅನಂತರ ಕಾಮೆಡ್-ಕೆ ಈ ಪ್ರಕ್ರಿಯೆ ನಡೆಸುತ್ತದೆ. ಆದರೆ ಈ ಬಾರಿ ಈಗಾಗಲೇ ಕಾಮೆಡ್-ಕೆ ಸೀಟು ಹಂಚಿಕೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆ. 18ರಿಂದ ದಾಖಲಾತಿ ಪರಿಶೀಲನೆ ನಡೆಸಲಿದೆ. ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆ. 26ರಿಂದ ಆರಂಭವಾಗಲಿದೆ. ಆ. 30ಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಮಧ್ಯಾಹ್ನ 1 ಗಂಟೆಯೊಳಗೆ ಮೊದಲ ಸುತ್ತಿನಲ್ಲಿ ಸೀಟು ಆಯ್ಕೆ ಮಾಡಿಕೊಳ್ಳದ ಅಭ್ಯರ್ಥಿಗಳು ಸೀಟುಗಳನ್ನು ವಾಪಸ್ ಮಾಡಬೇಕು ಎಂದು ಕಾಮೆಡ್-ಕೆ ತಿಳಿಸಿದೆ.
Advertisement
ಪರಿಸ್ಥಿತಿ ಹೀಗಿದ್ದರೂ ಸೆಪ್ಟಂಬರ್‌ನಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಿದ್ದೇವೆ ಎಂದು ಕೆಇಎ ತಿಳಿಸಿದೆ. ಜತೆಗೆ ಆ. 5ರಿಂದ ಆರಂಭವಾಗಬೇಕಿದ್ದ ದಾಖಲಾತಿ ಪರಿಶೀಲನೆಯನ್ನು ಕೂಡ ಮುಂದೂಡಿದೆ. ಅಷ್ಟರಲ್ಲಿ ಕಾಮೆಡ್- ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ.
ಇದರಿಂದ ಸಿಇಟಿ ಸೀಟುಗಳನ್ನೇ ನಂಬಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಾಮೆಡ್-ಕೆ ಸೀಟು ಆಯ್ಕೆ ಮಾಡಿಕೊಳ್ಳಬೇಕಾದ ಸನ್ನಿವೇಶವನ್ನು ರಾಜ್ಯ ಸರಕಾರ ನಿರ್ಮಿಸಿದೆ.
ಖಾಸಗಿ ಲಾಬಿ:ಹೆತ್ತವರ ಆರೋಪ
ಈ ಬಾರಿ ಖಾಸಗಿ ಕಾಲೇಜುಗಳ ಸೀಟುಗಳು ಭರ್ತಿಯಾದ ಅನಂತರ ಸರಕಾರ ಪ್ರವೇಶ ಪ್ರಕ್ರಿಯೆ ಆರಂಭಿಸಲಿದೆ. ಸರಕಾರ ಖಾಸಗಿ ಕಾಲೇಜುಗಳ ಲಾಬಿಗೆ ಮಣಿದಿದ್ದು, ಹೀಗಾಗಿ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಹೆತ್ತವರು ಮತ್ತು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವ್ಯತ್ಯಾಸವೇನು?
2022-23ನೇ ಸಾಲಿಗೆ ಸಿಇಟಿ ಕೋಟಾ ಮೂಲಕ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಪ್ರವೇಶ ಶುಲ್ಕ 37 ಸಾವಿರ ರೂ. ನಿಗದಿ ಮಾಡಲಾಗಿದೆ. ಅದೇ ಸೀಟನ್ನು ಕಾಮೆಡ್-ಕೆ ಮೂಲಕ ಪಡೆದರೆ 1.58 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಸರಕಾರದ ವಿಳಂಬ ನೀತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಕಮರುವಂತಾ ಗಿದೆ ಎಂದು ಸೀಟು ಆಕಾಂಕ್ಷಿ ವಿದ್ಯಾರ್ಥಿನಿ ಸುಧಾ ಕಳವಳ ವ್ಯಕ್ತಪಡಿಸಿದ್ದಾರೆ. -ಎನ್.ಎಲ್. ಶಿವಮಾದು