ಬೆಂಗಳೂರು: ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕಿಂತ ಮೊದಲೇ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಿದ್ದ ಕಾಮೆಡ್-ಕೆ, ಕೆ-ಸಿಇಟಿ ನಲ್ಲಿ ಸೀಟು ಪಡೆಯುವ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕ ಮರುಪಾವತಿ ಮಾಡುವುದಾಗಿ ಘೋಷಿಸಿದೆ.
ಕರ್ನಾಟಕದ ವಿದ್ಯಾರ್ಥಿಗಳು ಇತರ ರಾಜ್ಯಗಳಲ್ಲಿ ಸೀಟು ಪಡೆಯುವುದನ್ನು ತಪ್ಪಿಸುವುದು ಹಾಗೂ ನಮ್ಮ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಸರಕಾರಿ ಕೋಟ ಸೀಟುಗಳನ್ನು ಪಡೆಯುವ ಅವಕಾಶಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ವಿದ್ಯಾರ್ಥಿಗಳು ಪಾವತಿಸಿರುವ ಶುಲ್ಕವನ್ನು ಮರುಪಾವತಿ ಮಾಡಲು ನಿರ್ಧರಿಸಲಾಗಿದೆ ಎಂದು ಕಾಮೆಡ್-ಕೆ ತಿಳಿಸಿದೆ.
ಶುಲ್ಕ ಮರುಪಾತಿ ಮಾಡುವ ಸಂಬಂಧ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ
ಗಳೊಂದಿಗೆ ಸಭೆ ನಡೆಸಿ ತೀರ್ಮಾನಿಸಿದೆ. ವಿದ್ಯಾರ್ಥಿಗಳಿಗೆ ಅನನುಕೂಲತೆ ಮತ್ತು ಆರ್ಥಿಕ ಹೊಡೆತ ತಪ್ಪಿಸುವುದಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೆ-ಸಿಇಟಿ ನಲ್ಲಿ ಸೀಟು ಪಡೆದುಕೊಂಡಿದ್ದರೆ, ಶೇ. 100 ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಕಾಮೆಡ್-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ| ಎಸ್. ಕುಮಾರ್ ತಿಳಿಸಿದ್ದಾರೆ.
ಎಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆಯನ್ನು ನ. 30ರ ವರೆಗೆ ನಡೆಸಲು ಸುಪ್ರೀಂ ಕೋರ್ಟ್ ಸಮಯ ವಿಸ್ತರಿಸಿದೆ. ಆದ್ದರಿಂದ ಕೆಇಎ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಕಾಮೆಡ್-ಕೆ ಕೌನ್ಸೆಲಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಕನಿಷ್ಠ 15 ದಿನಗಳ ಕಾಲ ಮುಂದೂಡುವಂತೆ ಮನವಿ ಮುಂದೂಡುವಂತೆ ಸಭೆಯಲ್ಲಿ ಸರಕಾರ ಮಾಡಿರುವ ಮನವಿಯನ್ನು ಕಾಮೆಡ್-ಕೆ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.
Related Articles
ಸುಪ್ರೀಂಕೋರ್ಟ್ ಅವಧಿ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಕಾಮೆಡ್-ಕೆ ಅ.21ರಂದು ನಡೆಸುತ್ತಿದ್ದ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ವೇಳಾಪಟ್ಟಿಯನ್ನು ಬದಲಾಯಿಸಿದೆ. ಅ.28ರಂದು ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸುತ್ತಿದೆ. ಅದರ ಮಾರನೆಯ ದಿನ (ಅ.29)ವೇ ಕಾಮೆಡ್-ಕೆ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸುತ್ತಿದೆ. ಇನ್ನು ಸೀಟು ಬ್ಲಾಕಿಂಗ್ ವಿಚಾರವಾಗಿ ಕರ್ನಾಟಕೇತರ ವಿದ್ಯಾರ್ಥಿಗಳು ಸೀಟು ಪಡೆಯದಿದ್ದರೆ, ಶುಲ್ಕದ 5 ಪಟ್ಟು ದಂಡ ವಿಧಿಸುವ ನಿಯಮವನ್ನು ಕೆಇಎ ಮುಂದುವರಿಸಿದೆ.