Advertisement

ಗುಂಡಿಗೆ ಗಟ್ಟಿ ಇದ್ರೆ ಈ ಗುಂಡಿ ರಸ್ತೆಗೆ ಬನ್ನಿ

11:10 AM Jun 25, 2019 | Suhan S |

ಬಂಗಾರಪೇಟೆ: ತಾಲೂಕಿನ ಕಾಮಸಮುದ್ರದಿಂದ ಕನಮನಹಳ್ಳಿ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಭಾರೀ ವಾಹನಗಳ ಓಡಾಟದಿಂದ ತೀವ್ರ ಹದೆಗೆಟ್ಟಿದ್ದು, ಸವಾರರ ಸಂಕಷ್ಟ ಹೇಳ ತೀರದಾಗಿದೆ.

Advertisement

ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ ಕಾಮಸಮುದ್ರದಿಂದ ಕನಮನಹಳ್ಳಿವರೆಗೂ ರಸ್ತೆ ನಿರ್ಮಿಸಲಾಗಿದ್ದು, ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡುತ್ತಿದೆ. ಈ ಮಾರ್ಗದ 15 ಕಿ.ಮೀ. ರಸ್ತೆ ನಿರ್ಮಾಣದ ಹೊಣೆ ಹೊತ್ತಿರುವ ಗುತ್ತಿಗೆದಾರನ ಅಕಾಲಿಕ ನಿಧನದಿಂದ ಕಾಮಗಾರಿಗೆ ನನೆಗುದಿಗೆ ಬಿದ್ದಿದ್ದು, ರಸ್ತೆ ಮತ್ತಷ್ಟು ಹದಗೆಟ್ಟು ವಾಹನಗಳು ಸರ್ಕಸ್‌ ಮಾಡುತ್ತಾ ಓಡಾಡುತ್ತಿವೆ. ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ಸವಾರರು ಗುಂಡಿ ಬಿದ್ದ ರಸ್ತೆಯಲ್ಲಿ ಗುಂಡಿಗೆ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ.

ರಾಜ್ಯದ ಕನಮನಹಳ್ಳಿ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಕಾರಣ ರಸ್ತೆಯಲ್ಲಿ ಪ್ರತಿದಿನ ತಮಿಳುನಾಡು ಲಾರಿಗಳೇ ಓಡಾಡುತ್ತವೆ. ಆ ರಾಜ್ಯದಿಂದ ಅಗತ್ಯಕ್ಕಿಂತ ಹೆಚ್ಚು ಅಕ್ಕಿ, ಭತ್ತ, ಮರಳು ತುಂಬಿಕೊಂಡು ಬರುವ ಲಾರಿಗಳ ಓಡಾಟದಿಂದ ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದಿವೆ.

ತಪಾಸಣೆ ಕೇಂದ್ರ ಇದ್ದರೂ ಪ್ರಯೋಜನವಿಲ್ಲ: ತಮಿಳುನಾಡಿನಿಂದ ಬರುವ ವಾಹನಗಳನ್ನು ತಪಾಸಣೆ ಮಾಡಲು ಕನಮನಹಳ್ಳಿ ಬಳಿ ತಪಾಸಣೆ ಕೇಂದ್ರ ಇದೆ. ಇದ್ದರೂ ಲೆಕ್ಕಕ್ಕೆ ಇಲ್ಲದಂತಾಗಿದೆ. ಭಾರೀ ತೂಕದ ಅಕ್ರಮ ವಾಹನಗಳನ್ನು ತಡೆದರೆ ಮಾತ್ರ ರಸ್ತೆ ಮತ್ತಷ್ಟು ಹದಗೆಡುವುದನ್ನು ತಡೆಯಬಹುದಾಗಿದೆ. ಈ ಮಾರ್ಗ ಬಿಟ್ಟರೇ ಉಳಿದಂತೆ ಬೇರೆ ಕಡೆಯಿಂದ ಅಕ್ರಮವಾಗಿ ಸಂಚಾರ ಮಾಡಲು ಸಾಧ್ಯವಿಲ್ಲದೇ ಇರುವುದರಿಂದ ಇದೇ ರಸ್ತೆಯಲ್ಲಿ ನಿತ್ಯ ಅಕ್ರಮ ಮರಳು, ಕಲ್ಲು ತುಂಬಿದ ವಾಹನಗಳು ಓಡಾಡುತ್ತವೆ.

ದುರಸ್ತಿ ಮಾಡಿದ್ರೂ ಪ್ರಯೋಜನವಿಲ್ಲ: ರಾಜ್ಯದ ಗಡಿಭಾಗದ ಗ್ರಾಮೀಣ ರಸ್ತೆಗಳಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದರು. ಇತ್ತೀಚೆಗೆ ಮಳೆ ಬಂದು ಎಲ್ಲಾ ಗುಂಡಿಗಳು ಸಂಪೂರ್ಣ ಬಾಯಿ ತೆರೆದು ಬಲಿಗಾಗಿ ಕಾಯುತ್ತಿವೆ. ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಸವಾರರು ಓಡಾಡಬೇಕಿದೆ. ಅರ್ಧ ಗಂಟೆಯಲ್ಲಿ ಕ್ರಮಿಸಬಹುದಾದ ರಸ್ತೆಯಲ್ಲಿ ಈಗ 3 ಗಂಟೆ ಸಂಚಾರ ಮಾಡಬೇಕಾಗಿದೆ. ಎಷ್ಟು ಬಾರಿ ರಸ್ತೆ ದುರಸ್ತಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.

Advertisement

ಮಳೆಗಾಲ ಪ್ರಾರಂಭಗೊಂಡರೆ ದ್ವಿಚಕ್ರ ವಾಹನಗಳು ಸೇರಿದಂತೆ ಬಸ್‌ಗಳು ಓಡಾಡಲು ತೀವ್ರ ಕಷ್ಠವೇ ಆಗಿದ್ದರೂ ಸಹ ಕೇಳುವವರೇ ಇಲ್ಲದಂತಾಗಿದೆ. ಈ ಭಾಗದ ಸಾರ್ವಜನಿಕರು ಯಾರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕೋ ಗೊತ್ತಾಗದೇ ತ್ರಿಶಂಕುಸ್ಥಿತಿಯಲ್ಲಿದ್ದಾರೆ.

ಕಿತ್ತು ಹೋದ ಡಾಂಬರ್‌: ರಸ್ತೆಗೆ ಡಾಂಬರು ಹಾಕಿ ವರ್ಷಗಳೇ ಉರುಳಿದ್ದು, ಈಗ ಡಾಂಬರು ಎಲ್ಲಿದೆ ಎಂದು ಹುಡುಕಾಟ ಮಾಡಬೇಕಿದೆ. ಅಲ್ಲ ಕಡೆ ಜಲ್ಲಿ ಕಲ್ಲುಗಳು ಮೇಲೆ ಬಂದು ರಸ್ತೆಯಲ್ಲಿ ಹರಡಿಕೊಂಡಿವೆ. ಇದರಿಂದ ದ್ವಿಚಕ್ರ ವಾಹನಗಳು ಆಯಾ ತಪ್ಪಿ ಬಿದ್ದು, ಸವಾರರು ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ.

ಗುಂಡಿಯಲ್ಲಿ ಮಳೆ ನೀರು: ರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ಈಗ ಮಳೆ ನೀರು ತುಂಬಿಕೊಂಡು ರಸ್ತೆ ಕೆಸರುಗದ್ದೆಯಂತಾಗಿದೆ. ಇದರಿಂದ ವಾಹನ ಸವಾರರಿಗೆ ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ತಿಳಿಯದಂತಾಗಿದೆ.

 

● ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next