ರಾಯಚೂರು:ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ಸತ್ತು ಹೋಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಬಿಟ್ಟು ಬಹಿರಂಗ ಚರ್ಚೆಗೆ ಬರಲಿ. 100 ದಿನದಲ್ಲಿ ನಮ್ಮ ಸರ್ಕಾರ ಏನು ಸಾಧಿಸಿದೆ ಎಂಬುದನ್ನು ತಿಳಿಸುತ್ತೇವೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸವಾಲು ಹಾಕಿದರು.
ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಬಿಡಲಿ. ಬಿಜೆಪಿ ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಈ ಹಿಂದೆ ಅವರದ್ದೇ ಸರ್ಕಾರ ಇದ್ದಾಗ ರಾಜ್ಯಕ್ಕೆ ಎಂಥ ಆಡಳಿತ ನೀಡಿದ್ದಾರೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಆಗ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಅವರ ಮಗನ ವಿರುದ್ಧವೇ ವೈದ್ಯಕೀಯ ಹಗರಣದ ಆರೋಪ ಕೇಳಿ ಬಂದಿತ್ತು. ಆದರೆ, ನಮ್ಮ ಸರ್ಕಾರ 100 ದಿನ ಪೂರೈಸುತ್ತಿದ್ದು, ಒಂದೇ ಒಂದು ಭ್ರಷ್ಟಾಚಾರದ ಆರೋಪಗಳಿಲ್ಲದ ಆಡಳಿತ ನೀಡಿದ್ದೇವೆ ಎಂದರು.
ಮಾಜಿ ಸಚಿವ ಡಿ.ಕೆ. ಶಿವಕುಮಾರ ಬಿಡುಗಡೆ ಆಗಿರುವುದು ಸಿದ್ದರಾಮಯ್ಯ ಅವರಿಗೆ ಸಹಿಸಲಾಗುತ್ತಿಲ್ಲ. ಮಾತು ಮಾತಿಗೆ ಜೈಲಿಗೆ ಹೋಗಿ ಬಂದವರು ಎಂದು ಟೀಕಿಸುತ್ತಿದ್ದರು. ಆದರೆ, ಈಗ ಅವರ ಪಕ್ಷದವರೇ ಜೈಲಿಗೆ ಹೋಗಿ ಬಂದಿರುವುದು ಅವರಿಗೆ ಸಂಕಷ್ಟ ತಂದಿದೆ. ಅವರು ಜೈಲಿಂದ ಬರುವುದು ತಡವಾಗಲಿದೆ ಎಂದೇ ಲೆಕ್ಕಾಚಾರ ಹಾಕಿದ್ದರು. ಡಿಕೆಶಿ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದರ ವಿಡಿಯೋವನ್ನು ರಾಜ್ಯವೇ ನೋಡಿದೆ ಎಂದರು.
ಹಿಂದಿನ ಸರ್ಕಾರಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಹಣ ನೀಡಿತ್ತು. ಬಡವರ ಅಕ್ಕಿಯಲ್ಲೂ ಭ್ರಷ್ಟಾಚಾರ ಮಾಡಿದ ಸರ್ಕಾರ ಅವರದ್ದು. ಮಠಾಧೀಶರ ಫೋನ್ ಕದ್ದಾಲಿಕೆ ಮಾಡಿತ್ತು. ಇಷ್ಟೆಲ್ಲ ಬಿಟ್ಟು ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿರುವುದು ಎಷ್ಟು ಸರಿ? ನೆರೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಹಂತ ಹಂತವಾಗಿ 5 ಲಕ್ಷ ರೂ. ಬಿಡುಗಡೆ ಮಾಡಲಿದೆ. ಜಿಲ್ಲೆಯ ಗಣೇಕಲ್ ಜಲಾಶಯದ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ 189 ಕೋಟಿ ರೂ.ಗೆ ಮಂಜೂರಾತಿ ನೀಡಿದ್ದು, ಟೆಂಡರ್ ಕೂಡ ಆಗಿದೆ. ಅದರ ಜತೆಗೆ ರಿಮ್ಸ್‌ನ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ 37 ಕೋಟಿ ರೂ. ಮಂಜೂರಾತಿ ನೀಡಲಾಗಿದೆ ಎಂದರು.
ಟಿಪ್ಪು ಕೈ ಬಿಡುವುದು ಸಿಎಂಗೆ ಬಿಟ್ಟದ್ದು
ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಚರಿತ್ರೆ ತೆಗೆದು ಹಾಕುವ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ಬಿಟ್ಟ ವಿಚಾರ. ಇತಿಹಾಸದ ಬಗ್ಗೆ ತಿಳಿಯಬೇಕು. ಟಿಪ್ಪು ಬದಲಿಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಜಯಂತಿ ಆಚರಣೆ ಸೂಕ್ತ. ಈ ಬಗ್ಗೆ ಸಿಎಂ, ಪಿಎಂಗೂ ಪತ್ರ ಬರೆದು ಒತ್ತಾಯಿಸಲಾಗುವುದು. ಪಠ್ಯದಿಂದ ಟಿಪ್ಪು ಚರಿತ್ರೆ ಕೈ ಬಿಡುವ ವಿಚಾರ ಇನ್ನೂ ಅಂತಿಮವಾಗಿಲ್ಲ. ಸಮಿತಿ ಯಾವ ನಿರ್ಧಾರಕ್ಕೆ ಬರುವುದೋ ಅದೇ ಅಂತಿಮ. ಈಗಾಗಲೇ ಸರ್ಕಾರ ಸಮಿತಿ ರಚಿಸಿದ್ದು, ವರದಿ ಆಧರಿಸಿ ಸಿಎಂ ಕ್ರಮ ಕೈಗೊಳ್ಳುವರು. ಸರ್ಕಾರ ಸುತ್ತೋಲೆ ಹೊರಡಿಸಿದ ಕಾರಣ ರಾಜ್ಯ ಧ್ವಜಾರೋಹಣ ಮಾಡಿಲ್ಲ ಎಂದರು.