ಪಿರಿಯಾಪಟ್ಟಣ: ಅಧಿಕಾರಿಗಳು ಸಭೆಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಿ ಜನಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಬೇಕು. ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು ಜಿಪಂ ಯೋಜನಾ ನಿರ್ದೇಶಕ ಪದ್ಮಶೇಖರ್ ಪಾಂಡೆ ಎಚ್ಚರಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸೆಸ್ಕ್ ನಿಗಮದ ಪ್ರಗತಿ ವರದಿ ವಿವರ ನೀಡಲು ಎಂಜಿನಿಯರ್ ಮುಂದಾದರು. ಆದರೆ, ಮುದ್ರಿತ ಪ್ರತಿ ನೀಡದೆ ಬಾಯಿ ಮಾತಿನಲ್ಲಿ ವರದಿ ನೀಡುತ್ತಿದ್ದರಿಂದ ತರಾಟೆಗೆ ತೆಗೆದುಕೊಂಡ ಪದ್ಮಶೇಖರ್ ಪಾಂಡೆ, ಎಲ್ಲಾ ಇಲಾಖೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಜನಪ್ರತಿನಿಧಿಗಳಿಗೆ ನೀಡಬೇಕಾದುದು ಇಲಾಖೆಯ ಮುಖ್ಯಸ್ಥರ ಕರ್ತವ್ಯ ಎಂದು ತಿಳಿಸಿದರು.
ಕೃಷಿ ಇಲಾಖೆ ವಿತರಿಸುವ ಟಾರ್ಪಲ್‌ಗಳು ಕಳಪೆಯಾಗಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್‌ಗೆ ಜಿಪಂ ಸದಸ್ಯ ವಿ.ರಾಜೇಂದ್ರ ಸೂಚಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ವಿ.ಆರ್. ನಾಗೇಶ್, ತಾಲೂಕಿನ ನಂದಿನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 2 ಡೆಂ à ಪ್ರಕರಣಗಳು ವರದಿಯಾಗಿತ್ತು.
ಇಬ್ಬರೂ ಗುಣಮುಖರಾಗಿದ್ದಾರೆ ಎಂದರು. ನಂದಿನಾಥಪುರ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳಿಗೆ ತೊಂದರೆಯಾಗಿದೆ. ಈ ಆಸ್ಪತ್ರೆ ವ್ಯಾಪ್ತಿಗೆ 28 ಗ್ರಾಮಗಳು ಒಳಪಡುತ್ತಿದ್ದು, ಈ ಭಾಗದ ಜನರು ಚಿಕಿತ್ಸೆಗಾಗಿ ಪಿರಿಯಾಪಟ್ಟಣಕ್ಕೆ ಬರಬೇಕಾಗಿದೆ. ಪರ್ಯಾಯ ವ್ಯವಸ್ಥೆ ಏಕೆ ಮಾಡಿಲ್ಲ ಎಂದು ತಾಪಂ ಅಧ್ಯಕ್ಷೆ ಕೆ.ಆರ್. ನಿರೂಪ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ.ವಿ.ಆರ್. ನಾಗೇಶ್, ಹಬಟೂರು ಮತ್ತು ಬೈಲಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರನ್ನು ನಂದಿನಾಥಪುರ ಆಸ್ಪತ್ರೆಗೆ ವಾರಕ್ಕೆ 3 ದಿನ ಭೇಟಿ ನೀಡುವಂತೆ ಆದೇಶಿಸಲಾಗುವುದು ಎಂದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಪರಿಮಳಾ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಕೌಸಲ್ಯ, ರುದ್ರಮ್ಮ, ಕೆ.ಸಿ.ಜಯಕುಮಾರ್, ತಾಪಂ ಇಒ ಡಿ.ಸಿ.ಶ್ರುತಿ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಈರಯ್ಯ ಇತರರಿದ್ದರು.