Advertisement

ಹಾಸ್ಟೆಲ್‌ನಲ್ಲಿ ಕುಡಿವ ನೀರಿಗೂ ಬರ!

12:18 PM Nov 18, 2018 | Team Udayavani |

ಔರಾದ: ಬರ ಪರಿಸ್ಥಿತಿಯಿಂದಾಗಿ ಉಲ್ಬಣವಾಗಿರುವ ಕುಡಿಯುವ ನೀರಿನ ಸಮಸ್ಯೆ ವಸತಿ ನಿಲಯದ ವಿದ್ಯಾರ್ಥಿಗಳು, ಶಿಕ್ಷಕರಿಗೂ ತಟ್ಟಿದೆ. ಮರಪಳ್ಳಿ (ವನಮಾರಪಳ್ಳಿ) ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿತ್ಯ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ವಸತಿ ನಿಲಯದಲ್ಲಿ 238 ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು, ಸಿಬ್ಬಂದಿ ಸೇರಿ 290 ಜನರು ಇದ್ದಾರೆ. ಆದರೆ ನಿಲಯದಲ್ಲಿ ನೀರು ಪೂರೈಸಲು ಕೇವಲ ಒಂದೇ ಒಂದು ಕೊಳವೆ ಬಾವಿಯಿದೆ. ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಕೊಳವೆ ಬಾವಿಯ ನೀರು ಸಂಪೂರ್ಣ ಒಣಗಿದೆ. ಈ ಹಿನ್ನೆಲೆಯಲ್ಲಿ ವಸತಿ ಶಾಲೆಯದ ಪ್ರಾಂಶುಪಾಲರು ನಿತ್ಯ ಎರಡು ಟ್ಯಾಂಕರ್‌ ಮೂಲಕ 10 ಸಾವಿರ ಲೀಟರ್‌ ನೀರು ತರಿಸಿದರೂ ಸಾಕಾಗುತ್ತಿಲ್ಲ ಎಂದು ಪಾಲಕರು ಹಾಗೂ ವಸತಿ ಶಾಲೆ ಶಿಕ್ಷಕರು ತಿಳಿಸಿದ್ದಾರೆ.

ಮೂರು ದಿನಕೊಮ್ಮೆ ಸ್ನಾನ: ನೀರಿನ ಸಮಸ್ಯೆ ಇರುವುದರಿಂದ ಎರಡು ಟ್ಯಾಂಕರ್‌ ನೀರು ತಂದು ವಸತಿ ನಿಲಯದ ಮಕ್ಕಳಿಗೆ ನೀಡುತ್ತಿದ್ದಾರೆ. ಇದರಿಂದ ಇಲ್ಲಿನ ಮಕ್ಕಳು ಒಂದು ಬಕೇಟ್‌ನಲ್ಲಿಯೇ ಮೂರು ದಿನ ನೀರು ಸಂರಕ್ಷಣೆ ಮಾಡಿಟ್ಟುಕೊಳ್ಳುವ ಅನಿವಾರ್ಯತೆ ಬಂದಿದೆ. ಅಲ್ಲದೆ ಇಲ್ಲಿನ ಯುವತಿಯರು ನೀರಿನ ಸಮಸ್ಯೆ ಇರುವುದರಿಂದ ಮೂರು ದಿನಕೊಮ್ಮೆ ಸ್ನಾನ ಮಾಡಬೇಕಾಗಿದೆ.

ಭೇಟಿಗೆ ಸೀಮಿತ: ವಸತಿ ನಿಲಯದಲ್ಲಿ ನೀರಿನ ಸಮಸ್ಯೆಯಿದೆ ಎಂದು ತಾಲೂಕು ಮಟ್ಟದ ಅಧಿಕಾರಿಗಳಿಂದ ಹಿಡಿದು ರಾಜ್ಯಮಟ್ಟದ ಇಲಾಖೆಯ ಮೇಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಅದರಂತೆ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಬಂದು ಭೇಟಿ ನೀಡಿದ್ದಾರೆ.
ಆದರೆ ಇಲ್ಲಿಯವರೆಗೂ ಒಬ್ಬ ಅಧಿಕಾರಿಯೂ ನೀರಿನ ಸಮಸ್ಯೆ ಬಗೆ ಹರಿಸುವ ಬಗ್ಗೆ ಸುಳಿವು ನೀಡಿಲ್ಲ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಾರೆ.

ನಿದ್ದೆಗೆ ಜಾರಿದ ಸಂಘಟನೆಗಳು: ವಿದ್ಯಾರ್ಥಿ ಪರಿಷತ್‌ ಸೇರಿದಂತೆ ಇನ್ನಿತರ ಸಂಘಟನೆ ಮುಖಂಡರು ಸಹ ವಸತಿ ನಿಲಯಕ್ಕೆ ಭೇಟಿ ನೀಡಿ, ಊಟ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಕೇಳಿ ಹಲವು ಬಾರಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೆ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ನೀರಿಲ್ಲದೆ ನರಳುತ್ತಿರುವ ವಿಷಯ ತಿಳಿದರೂ ಕಣ್ಣುಮುಚ್ಚಿ ಕುಳಿತಿರುವ ಸಂಘಟನೆಯ ಮುಖಂಡರ ಸಮಾಜ ಸೇವೆ ಎಂಥದ್ದು ಎನ್ನುವ ಸಂಶಯ ನಿಲಯದ ವಿದ್ಯಾರ್ಥಿನಿಯರಿಗೆ ಕಾಡುತ್ತಿದೆ.

Advertisement

ನಮ್ಮ ಮನೆಯಲ್ಲಿ ಬಡತನವಿದೆ ಎಂದು ನಮ್ಮ ಮಕ್ಕಳನ್ನು ವಸತಿ ನಿಲಯದಲ್ಲಿ ದಾಖಲು ಮಾಡಿದ್ದೇವೆ. ಆದರೆ ಇಲ್ಲಿ ನೀರು ಇಲ್ಲದೇ ನಮ್ಮ ಮಕ್ಕಳು ಮೂರು ದಿನಕೊಮ್ಮೆ ಸ್ನಾನ ಮಾಡುತ್ತಿರುವುದು ಮತ್ತು ಒಂದೇ ಬಕೇಟ್‌ ನೀರಿನಲ್ಲಿ ಎರಡು ದಿನ ಕಳೆಯುವ ಪರಸ್ಥಿತಿ ಇದೆ. ಸರ್ಕಾರ ಇಷ್ಟೊಂದು ದೊಡ್ಡ ಕಟ್ಟಡ ನಿರ್ಮಾಣ ಮಾಡುವ ಬದಲು ನೀರು ರಸ್ತೆ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ನೋಡಿ ಕಟ್ಟಡ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಪಾಲಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಸತಿ ನಿಲಯದ ದುಸ್ಥಿತಿ ನೋಡಿ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ 20 ಲಕ್ಷ ರೂ. ಅನುದಾನದ ಕ್ರಿಯಾಯೋಜನೆ ಮಾಡಲಾಗಿದೆ. ರೈತರ ಹೊಲದಲ್ಲಿ ಬೆಳೆಗಳು ಇರುವ ಕಾರಣ ಕಾಮಗಾರಿ ಆರಂಭ ಮಾಡಿಲ್ಲ. ಎರಡು ವಾರದಲ್ಲಿ ಪೈಪ್‌ಲೈನ್‌ ಕಾಮಗಾರಿ ಆರಂಭಿಸುವಂತೆ ಸಬ್ಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
 ಪ್ರಭು ಚವ್ಹಾಣ, ಶಾಸಕರು

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಾಗಿ ಶಾಸಕ ಪ್ರಭು ಚವ್ಹಾಣ ಭರವಸೆ ನೀಡಿದ್ದಾರೆ. ರೈತರ ಹೊಲದಲ್ಲಿ ಬೆಳೆಗಳು ರಾಶಿಯಾದ ಬಳಿಕ ಕಾಮಗಾರಿ ಆರಂಭಿಸುವುದಾಗಿ ಗುತ್ತಿಗೇದಾರರು ತಿಳಿಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಶಾಶ್ವತ ಪರಿಹಾರ ನೀಡಲಾಗುತ್ತದೆ.
 ಶಕುಂತಲಾ, ವಸತಿ ನಿಲಯದ ಪ್ರಾಂಶುಪಾಲ

ನಮಗೆ ಬಡತನವಿದೆ ಎನ್ನುವ ಕಾರಣ ನಮ್ಮ ಮಕ್ಕಳನ್ನು ವಸತಿ ನಿಲಯಲ್ಲಿ ದಾಖಲು ಮಾಡಿದ್ದೇವೆ. ಎರಡು ದಿನಕೊಮ್ಮೆ ನೀರು ಬರುತ್ತಿವೆ ಎನ್ನುವ ವಿಷಯ ಕೇಳಿ ನೋವಾಗುತ್ತಿದೆ. ಆದರೂ ನಮ್ಮ ಮಕ್ಕಳಿಗೆ ಕಷ್ಟವಾಗಿದ್ದರೂ ಸರಿ, ಉತ್ತಮ ಶಿಕ್ಷಣ ಸಿಗುತ್ತದೆ ಎನ್ನುವ ತೃಪ್ತಿ ನಮಗಿದೆ.
 ರಾಜೇಶ ಜಮಗಿ, ವಸತಿ ನಿಲಯ ವಿದ್ಯಾರ್ಥಿನಿಯ ಪಾಲಕ 

„ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next