Advertisement

ಅತ್ತೆ ಮನೆಗೆ ಬನ್ನಿ…

10:02 AM Dec 29, 2019 | Lakshmi GovindaRaj |

ಅತ್ತೆ ಮನೆಯಲ್ಲಿ ಊಟ ಇದೆ ಎಂದಾಕ್ಷಣ ಅಳಿಯನಿಗೆ ಆಹ್ವಾನ ಗ್ಯಾರಂಟಿ. ಆದರೆ, ಇಲ್ಲಿ ಹೇಳ ಹೊರಟಿರುವ “ಅತ್ತೆ ಮನೆಯ ಊಟ’ಕ್ಕೆ ಅಳಿಯ, ಮಗಳು ಮಾತ್ರವಲ್ಲ, ಗಾಂಧಿನಗರ ಹಾಗೂ ಸುತ್ತಮುತ್ತಲಿನ ನಾಗರಿಕರಿಗೂ ಆಹ್ವಾನವುಂಟು! ಗಾಂಧಿನಗರ ಎಂದಾಕ್ಷಣ, ನೆನಪಾಗುವುದು ಸಿನಿಮಾ ಮಂದಿ ಮತ್ತು ಪ್ರೊಡಕ್ಷನ್‌ ಹೌಸ್‌ಗಳೇ. ಇಲ್ಲಿ ಸ್ಟಾರ್‌ಗಳ ಹವಾ ಕೂಡ ಉಂಟು. ಇಲ್ಲಿ ಸಿಗುವುದು ಸಾವಿರಾರು ರೂ. ಬಜೆಟ್ಟಿನ ಊಟದ ಹೋಟೆಲ್ಲುಗಳೇ.

Advertisement

ಅಂಥದ್ದರಲ್ಲಿ ಕೈಗೆಟುವ ಬೆಲೆಯಲ್ಲಿ ಬಾಡೂಟ ಸಿಗುತ್ತದೆ ಎಂದರೆ ಆಶ್ಚರ್ಯವಲ್ಲವೇ?  ಕೇವಲ 100 ರಿಂದ 150 ರೂ.ಗಳಲ್ಲಿ ರುಚಿಕರ ತಾಲಿ. ಚಿಕನ್‌, ಮಟನ್‌, ಬಿರಿಯಾನಿ ಎಲ್ಲವೂ ಉಂಟು. ಅರೆ..! ಇಷ್ಟು ಕಡಿಮೆ ಬೆಲೆಯಲ್ಲಿ ಮಾಂಸಾಹಾರ ಕೊಡೋ ಹೋಟೆಲ್‌ ಹೆಸರು, “ಅತ್ತೆ ಮನೆಯ ಊಟ’. ಇದು, ಗಾಂಧಿನಗರದ 6ನೇ ಅಡ್ಡರಸ್ತೆಯಲ್ಲಿದೆ.ಮಾಲೀಕ ಸೆಬಾಸ್ಟಿಯನ್‌ ಡೇವಿಡ್‌ ಅವರು, ತಮ್ಮ ವಿಭಿನ್ನ ಟೈಟಲ್‌ನ ಹೋಟೆಲ್‌ ಬಗ್ಗೆ ಹೇಳುವುದಿಷ್ಟು:

“ಎರಡೂವರೆ ದಶಕಗಳಿಂದ ಈ ಗಾಂಧಿನಗರ ನನಗೆ ಅನ್ನ ನೀಡಿ ಬೆಳೆಸಿದೆ. ಆರಂಭದಲ್ಲಿ ನಾನು ಇಲ್ಲಿಗೆ ಬಂದಾಗ ತಿಂಡಿ, ಊಟಕ್ಕಾಗಿ ಅಲೆದಿದ್ದೇನೆ. ಆಗ, ಕೈಯಲ್ಲಿ ದುಡ್ಡಿರಲಿಲ್ಲ. ಯಾವ ಹೋಟೆಲ್‌ಗೆ ಹೋದರೂ, ದುಬಾರಿ ಬೆಲೆ. ಐವತ್ತು, ನೂರು ರೂ.ಗೂ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ನನ್ನಂತೆ ನೂರಾರು ಜನ ಈ ಕಷ್ಟ ಅನುಭವಿಸಿದ್ದಾರೆ. ಈಗಲೂ ಇಲ್ಲಿಗೆ ಬರುವವರಲ್ಲಿ ಆ ಕಷ್ಟಗಳನ್ನು ಕಾಣುತ್ತಿದ್ದೇನೆ. ಹಸಿದವರ ಹೊಟ್ಟೆ ತುಂಬಿಸಬೇಕೆನ್ನುವ ಪ್ರಯತ್ನದ ಒಂದು ಭಾಗವೇ ಈ ಹೋಟೆಲ್‌.

ಕಡಿಮೆ ದರದಲ್ಲಿ ರುಚಿಕರ ಊಟ ಕೊಡಬೇಕೆಂಬುದೇ ನನ್ನ ಉದ್ದೇಶ’. “ಮೂಲತಃ ನಾನು ಕ್ರಿಯೇಟಿವ್‌ ಫಿಲಂ ಡೈರೆಕ್ಟರ್‌, ಪ್ರೊಡ್ನೂಸರ್‌, ಡಿಸ್ಟಿಬ್ಯೂಟರ್‌, ಎಕ್ಸಿಬ್ಯೂಟರ್‌ ಹಾಗೂ ಸ್ಟುಡಿಯೋ ಮಾಲೀಕ. ಇದರಲ್ಲೇ 25 ವರ್ಷ ಕಳೆದಿದ್ದೇನೆ. 13ಕ್ಕೂ ಅಧಿಕ ಕನ್ನಡ ಸಿನಿಮಾಗಳಿಗೆ ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೇನೆ. 150ಕ್ಕೂ ಹೆಚ್ಚು ಆ್ಯಡ್‌ ಫಿಲಂ ಡೈರೆಕ್ಟ್ ಮಾಡಿದ್ದೇನೆ. ಯಶ್‌ ಅಭಿನಯದ ಎ1 ಗೋಲ್ಡ್‌, ಟಿಎಂಟಿ ಬಾರ್‌ ಕಂಬಿಯ ಆ್ಯಡ್‌ ಫಿಲಂ ಕೂಡ ಮಾಡಿದ್ದೇನೆ.

ಆಟ್ಟಿಕಾ ಗೋಲ್ಡ್‌, ಹಿಂದೂಸ್ತಾನ್‌ ಗೋಲ್ಡ್‌ ಹೀಗೆ ನಾನಾ ರೀತಿ ಆ್ಯಡ್‌ಗಳನ್ನು ಮಾಡಿದ್ದೇನೆ. ನನ್ನ ಬೆಳವಣಿಗೆಯ ಹಿಂದೆ ಆ್ಯಡ್‌ ಏಜೆನ್ಸಿ ಮತ್ತು ಕ್ರಿಯೇಟಿವ್‌ ಆ್ಯಡ್ಸ್‌ ಸಹ ಇದೆ. ಕೆ. ರಾಮು ಅವರ ಬ್ಯಾನರ್‌ನಲ್ಲಿ ಬಹುದೊಡ್ಡ ಸ್ಟಾರ್‌ಕಾಸ್ಟ್‌ ಚಿತ್ರ ನಿರ್ದೇಶಿಸುವ ಅವಕಾಶವೂ ಒದಗಿಬಂದಿದೆ. ಆದರೂ, ಹಸಿದವರಿಗೆ ಅನ್ನ ಕೊಡಬೇಕೆಂದು ಬಯಸಿ, ಈ ಹೋಟೆಲ್‌ ಮಾಡಿದೆ’ ಎನ್ನುತ್ತಾರೆ, ಡೇವಿಡ್‌.

Advertisement

ಸಿನಿಮಾ, ಹೋಟೆಲ್‌- ಎರಡೂ ಉದ್ಯಮವನ್ನು ಸರಿದೂಗಿಸುವ ಇವರು, ಪ್ರತಿನಿತ್ಯ ಬೆಳಗ್ಗೆ ಖುದ್ದಾಗಿ ಮಟನ್‌, ಚಿಕನ್‌ ಮತ್ತು ಫಿಶ್‌ ಸ್ಟಾಲ್‌ಗ‌ಳಿಗೆ ಹೋಗಿ, ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸುತ್ತಾರೆ. ಈ ಕೆಲಸಗಳೆಲ್ಲ ಮುಗಿದ ನಂತರ, ಕ್ರಿಯೇಟಿವ್‌ ಜಗತ್ತಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. “ನನ್ನ ಧರ್ಮಪತ್ನಿಯೂ ಕೆಲಸಗಳಲ್ಲಿ ಸಾಥ್‌ ನೀಡುತ್ತಿರುವುದರಿಂದ ಇವೆಲ್ಲವೂ ಸಾಧ್ಯವಾಗಿದೆ. ಅವರ ಉಸ್ತುವಾರಿಯಲ್ಲಿ, ನಮ್ಮಲ್ಲಿ ಹೆಣ್ಣು ಮಕ್ಕಳು ಅಡುಗೆ ಕೆಲಸ ನೋಡಿಕೊಳ್ಳುತ್ತಾರೆ. ಹಾಗಾಗಿ, ಇಲ್ಲಿನ ಅಡುಗೆ, ಮನೆಯ ರುಚಿಯನ್ನು ಹೋಲುವಂತಿದೆ’ ಎನ್ನುತ್ತಾರೆ, ಡೇವಿಡ್‌.

“ಅತ್ತೆ ಮನೆಯ’ ಹೆಸರೇಕೆ?: ಡೇವಿಡ್‌ ಅವರ ಅತ್ತೆ, ಇತ್ತೀಚೆಗಷ್ಟೇ ಕಾಲವಾದರಂತೆ. ಅವರ ಮನೆಯ ಬಳಿಗೆ ಹಸಿವು ಎಂದು ಯಾರೇ ಹೋದರೂ, ಹೊಟ್ಟೆ ತುಂಬಿಸದೇ ಯಾವತ್ತೂ ಕಳುಹಿಸುತ್ತಿರಲಿಲ್ಲವಂತೆ. ಅವರ ಸೇವಾ ಮನೋಭಾವದ ನೆನಪಿಗಾಗಿ ಹೋಟೆಲ್‌ಗೆ ಈ ಹೆಸರನ್ನಿಡಲಾಗಿದೆ.

ಹೋಟೆಲ್‌ ಸ್ಪೆಷಾಲಿಟಿ ಏನು?
– ಸೌದೆ ಒಲೆ ಉರಿಯಲ್ಲಿ ಬಿರಿಯಾನಿ ತಯಾರಿಸುತ್ತಾರೆ.
– ಎಲ್ಲ ರೀತಿ ಮಾಂಸಾಹಾರಗಳೂ ವೆರೈಟಿಯ ಆಸ್ವಾದದಲ್ಲಿ ಸಿಗುತ್ತವೆ.
– ಅತ್ತೆ ಮನೆ ಚಿಕನ್‌, ಅತ್ತೆ ಮನೆ ಮಟನ್‌, ಅತ್ತೆ ಮನೆ ಫಿಶ್‌ಗೆ ಹೆಚ್ಚು ಡಿಮ್ಯಾಂಡ್‌ ಇದೆ.
– ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ಜ್ಯೂಸ್‌, ಮಿಲ್ಕ್ ಶೇಕ್‌ ತಾಜಾ ಆಗಿ ಸಿಗುತ್ತದೆ.

ವಿಳಾಸ: ಅತ್ತೆ ಮನೆಯ ಊಟ, 6ನೇ ಅಡ್ಡ ರಸ್ತೆ, ಗಾಂಧಿನಗರ, ಬೆಂಗಳೂರು- 09
ಮೊಬೈಲ್‌: 8861999998 www.attemaneyaoota.com

* ಗೋಪಾಲ್‌ ತಿಮ್ಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next