ಭಾಲ್ಕಿ: ಸರಕಾರ-ಸಂಘ ಸಂಸ್ಥೆಗಳಿಂದ ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕಿದೆ ಎಂದು ಭಾರತೀಯ ಜನಪದ ಕಲೆಗಳ ತಜ್ಞ ಸಮಿತಿ ಸದಸ್ಯ ಹಾಸನ ರಘು ಹೇಳಿದರು.
ಧನ್ನೂರಾ(ಎಚ್) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಬೀದರ, ಡಾ| ಚನ್ನಬಸವ ಪಟ್ಟದ್ದೇವರ ಯುವಕ ಸಂಘದ ಸಹಯೋಗದಲ್ಲಿ ನಡೆದ ಅಖೀಲ ಭಾರರ ಲೋಕ ಕಲಾ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ, ಕೇಂದ್ರ ಸರಕಾರಗಳು ಕಲಾವಿದರ ನೆರವಿಗೆ ಧಾವಿಸಬೇಕು. ಈಗಿರುವ ಮಾಸಾಶನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೀದರ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಸರಕಾರ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಿ ಜನಪದ ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಗುರುಬಸವ ಪಟ್ಟದ್ದೇವರು ಮಾತನಾಡಿ, ಜಾನಪದ ಕಲೆಗೆ ತನ್ನದೇ ಆದ ಇತಿಹಾಸ, ವೈಶಿಷ್ಟ್ಯವಿದೆ. ಅಂಥ ಕಲೆ ಉಳಿಸಿ, ಬೆಳೆಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ನಿರಂಜನ ದೇವರು ನೇತೃತ್ವ ವಹಿಸಿದ್ದರು. ಹಿರಿಯ ಸಮಾಜ ಚಿಂತಕ ಕಾಶಪ್ಪ ಧನ್ನೂರ, ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯ ಶಶಿಧರ ಕೋಸಂಬೆ, ಔರಾದ ಜಾನಪರಿಷತ್‌ನ ತಾಲೂಕು ಅಧ್ಯಕ್ಷ ಸಂಜೀವಕುಮಾರ ಜುಮ್ಮಾ, ಪ್ರಮುಖರಾದ ಶ್ರೀಕಾಂತ ದಾನಿ, ಗುಂಡೆರಾವ ಪಾಟೀಲ, ಹಿರಿಯ ಸಾಹಿತಿ ವೀರಶೆಟ್ಟಿ ಬಾವುಗೆ, ಕಾಶೆಪ್ಪ ಮೂಲಗೆ, ಬಾಬುರಾವ ಪಾಟೀಲ, ಬನಸಿ ರಾಠೊಡ್, ಹಲಬರ್ಗಾ ಜಾನಪದ ಪರಿಷತ್‌ನ ವಲಯ ಅಧ್ಯಕ್ಷೆ ರಾಜೇಶ್ವರಿ ವಂಕೆ, ಖಟಕ್ ಚಿಂಚೋಳಿ ವಲಯ ಅಧ್ಯಕ್ಷೆ ಭಾಗ್ಯಶ್ರೀ, ಲಖಣಗಾಂವ ವಲಯ ಅಧ್ಯಕ್ಷೆ ಮಹಾನಂದ ಬಿರಾದಾರ ಇದ್ದರು. ರಾಜಕುಮಾರ ಹೆಬ್ಟಾಳೆ ಸ್ವಾಗತಿಸಿದರು. ಕಿರಣ ಚಾಕೋತೆ ನಿರೂಪಿಸಿದರು.