ಅವತ್ತಿನ ಮೊದಲ ನೋಟದಲ್ಲೇ ಮನಸ್ಸೆಂಬ ಅಕೌಂಟಿನಲ್ಲಿ ಪಾಸ್‌ವರ್ಡ್ ಇಲ್ಲದೆಯೇ ಲಾಗಿನ್ ಆಗಿಬಿಟ್ರಿ. ಅಂದು ನೀವು ನನ್ನತ್ತ ಕಿರುನಗೆ ಸೂಸಿ, ನೋಡಿಯೂ ನೋಡದವರಂತೆ ಮುಖ ತಿರುಗಿಸಿಕೊಳ್ತಿದ್ರಿ. ನನಗಂತೂ ಅಲ್ಲಿ ಜಂಬೂ ಸವಾರಿಯನ್ನು ನೋಡಬೇಕೋ, ನಾಚಿ ನೀರಾಗುತ್ತಿರೋ ನಿಮ್ಮ ಮುಖವನ್ನು ನೋಡಬೇಕೋ ಅಂತ ಫುಲ್ ಕನ್‌ಫ್ಯೂಶನ್ನು.
ಏನ್ರೀ ಮೇಡಂ, ಈ ಸಲ ಮತ್ತೆ ದಸರಾಕ್ಕೆ ಬರ್ತೀರಾ ತಾನೆ? ಚಿಕ್ಕಂದಿನಿಂದಲೂ, ದಸರಾ ಅಂದ್ರೆ ಊರಜಾತ್ರೆಯ ಸಂಭ್ರಮ ನನಗೆ. ಮನೆ ತುಂಬಾ ನೆಂಟರು, ಅರಮನೆ, ಅಂಬಾರಿ, ಊರ ತುಂಬಾ ಜನ, ಜಂಬೂಸವಾರಿ ಎಂದು ಸಂಭ್ರಮಿಸುತ್ತಿದ್ದ ನನಗೆ, ಕಳೆದ ಬಾರಿಯಿಂದ ದಸರಾ ಗೊಂಬೆಯಂತಿರುವ ನಿಮ್ಮದೇ ನೆನಪು. ಅವತ್ತಿನ ಮೊದಲ ನೋಟದಲ್ಲೇ ಮನಸ್ಸೆಂಬ ಅಕೌಂಟಿನಲ್ಲಿ ಪಾಸ್‌ವರ್ಡ್ ಇಲ್ಲದೆಯೇ ಲಾಗಿನ್ ಆಗಿಬಿಟ್ರಿ. ಅಂದು ನೀವು ನನ್ನತ್ತ ಕಿರುನಗೆ ಸೂಸಿ, ನೋಡಿಯೂ ನೋಡದವರಂತೆ ಮುಖ ತಿರುಗಿಸಿಕೊಳ್ತಿದ್ರಿ. ನನಗಂತೂ ಅಲ್ಲಿ ಜಂಬೂ ಸವಾರಿಯನ್ನು ನೋಡಬೇಕೋ, ನಾಚಿ ನೀರಾಗುತ್ತಿರೋ ನಿಮ್ಮ ಮುಖವನ್ನು ನೋಡಬೇಕೋ ಅಂತ ಫುಲ್ ಕನ್‌ಫ್ಯೂಶನ್ನು.
ಅಲ್ಲಿದ್ದ ನೂರಾರು ಹುಡುಗಿಯರಲ್ಲಿ ನೀವು ಎದ್ದು ಕಾಣುವಂಥ ಸುಂದ್ರಿ ಖಂಡಿತಾ ಅಲ್ಲ. ಆದ್ರೂ ನೀವು ಯಾರಿಗೇನೂ ಕಮ್ಮಿ ಇಲ್ಲ ಬಿಡ್ರಿ! ನಿಮ್ಮನ್ನು ನೋಡಿದಾಕ್ಷಣ ಅದೇನಾಯೊ ಕಾಣೆ, ನಾನು ಎಲ್ಲಿದ್ದೀನಿ, ಸುತ್ತ ಯಾರಿದ್ದಾರೆ ಅನ್ನೋದೆಲ್ಲಾ ಮರೆತುಹೋಯ್ತು. ನಿಮ್ಮ ಜೊತೆ ಕಲ್ಪನಾ ಲೋಕದಲ್ಲಿ ವಿಹರಿಸಿದಂತೆ ಕನಸು. ಮರಳಿ ಕಣ್ತೆರೆದು ನೋಡುವಷ್ಟರಲ್ಲಿ, ಆ ಸ್ಥಳದಿಂದ ನೀವು ಮಾಯ! ಕಾಣೆಯಾಗಿದ್ದು ನೀವು ಮಾತ್ರ ಅಲ್ಲ, ನನ್ನ ಹೃದಯವೂ ನಿಮ್ಮ ಹಿಂದೆಯೇ ಜಾರಿಹೋಗಿತ್ತು. ನನ್ನನ್ನೇ ನಾನು ಕಳೆದುಕೊಂಡ ಅನುಭವ, ಏನೋ ಒಂಥರಾ ಕಳವಳ. ಇಡೀ ಜಾತ್ರೆಯನ್ನೆಲ್ಲಾ ಒಂದು ಸುತ್ತು ಬಂದು ಹುಡುಕಿದರೂ ನಿಮ್ಮ ಪತ್ತೆಯಿಲ್ಲ.
ಅದಾದ ನಂತರ, ಹೋದಲ್ಲಿ ಬಂದಲ್ಲೆಲ್ಲಾ ಕಣ್ಣು ನಿಮ್ಮನ್ನೇ ಹುಡುಕುತ್ತದೆ. ಮರುಕ್ಷಣವೇ ಕಂಗಳಲ್ಲಿ ನಿರಾಸೆಯ ಕಾರ್ಮೋಡ. ಅವತ್ತು ನಿಮ್ಮನ್ನು ಮಾತಾಡಿಸದಿದ್ದರೇನಂತೆ? ನಿಮ್ಮ ಕಣ್ಣೋಟವೇ ನನಗೆಲ್ಲವನ್ನೂ ಹೇಳಿಬಿಟ್ಟಿತ್ತು. ಇನ್ನೂ ಎಷ್ಟು ದಿನ ಬೇಕಾದ್ರೂ ಕಾಯ್ತಿàನಿ, ನಿಮ್ಮನ್ನ ಮರೆಯೋ ಪ್ರಶ್ನೆಯೇ ಇಲ್ಲ.
ಈಗ ಮತ್ತೂಮ್ಮೆ ದಸರಾ ಬಂದಿದೆ. ನಮ್ಮೂರ ಜಾತ್ರೆಗೆ ನೀವು ಬಂದೇ ಬರ್ತೀರ ಅಂತ ದೃಢವಾಗಿ ನಂಬಿದ್ದೇನೆ. ನಾನು ಅವತ್ತಿನ ಹಾಗೆ, ಅದೇ ಜಾಗದಲ್ಲಿ, ಅದೇ ಕನ್ನಡಕ ಧರಿಸಿ ನಿಂತಿರುತ್ತೇನೆ. ನೀವು ಅವತ್ತು ನಿಂತಿದ್ರಲ್ಲ, ಅದೇ ಜಾಗದಲ್ಲಿ ನಿಂತು ನನಗೊಂದು ಸ್ಮೈಲ್ ಕೊಡಿ. ಅಷ್ಟೇ ಸಾಕು, ಓಡಿ ಬರುತ್ತೇನೆ. ಕಳೆದ ಬಾರಿ ಮೈಮರೆತಂತೆ ಮತ್ತೆ ನಿಮ್ಮನ್ನು ನೋಡಿ ಮೈಮರೆಯುವ ತಪ್ಪನ್ನಂತೂ ಮಾಡುವುದಿಲ್ಲ. ನಾನೇ ಬಂದು ಮಾತಾಡಿಸುತ್ತೇನೆ. ಆಮೇಲೆ ಇಬ್ಬರೂ ಸೇರಿ ಮೈಸೂರು ಸುತ್ತೋಣ. ನಿಮಗಿಷ್ಟವಾಗಿದ್ದನ್ನೆಲ್ಲಾ ಕೊಡಿಸುತ್ತೇನೆ. ಮುಂದಿನ ಎಲ್ಲ ದಸರಾಗಳನ್ನು ಇಬ್ಬರೂ ಒಟ್ಟಿಗೇ ನೋಡೋಣ. ಏನಂತೀರಾ?
ನಿಮ್ಮ ನಿರೀಕ್ಷೆಯಲ್ಲಿರುವ
ನಾಗರಾಜ್ ಬಿ, ಚಿಂಚರಕಿ