Advertisement

ಕಸಾಪ ನಿರ್ಲಕ್ಷ್ಯ ಧೋರಣೆಗೆ ಅಕ್ಷರ ಜಾತ್ರೆಗೂ ಬರ!

11:31 AM Feb 07, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳ ನಡುವೆ ನಡೆಯುತ್ತಿರುವ ಶೀತಲಸಮರ ಇದೀಗ ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆ ನಡೆಯಬೇಕಿದ್ದ ಅಕ್ಷರ ಜಾತ್ರೆಗಳಿಗೆ ಬರ ಎದುರಾಗಿದ್ದು, ಜಿಲ್ಲೆಯ ಸಾಹಿತ್ಯ ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ.

Advertisement

ಕಳೆದ ವರ್ಷ ಗುಡಿಬಂಡೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆಬ್ರವರಿ ತಿಂಗಳಲ್ಲಿ ಮುಗಿಸಿದ್ದ ಜಿಲ್ಲಾ ಕಸಾಪ, ಈ ವರ್ಷ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ರೀತಿಯ ತಯಾರಿ ನಡೆಸದಿರುವುದು ಎದ್ದು ಕಾಣುತ್ತಿದೆ.

ಪಕ್ಕದ ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಎರಡು ದಿನಗಳ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿ ಯಾಗಿ ಮಾಡಿ ಮುಗಿಸಿದರೂ ಜಿಲ್ಲೆಯಲ್ಲಿ ಮಾತ್ರ ಈ ಬಗ್ಗೆ ಸುದ್ದಿಯೇ ಇಲ್ಲ. ಮೊದಲೇ ಆಂಧ್ರದ ಗಡಿ ಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೆಲುಗು ಪ್ರಾಬಲ್ಯ ಜೋರಾಗಿದೆ. ಕನ್ನಡ ಶಾಲೆಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿ ಮುಚ್ಚುವ ಸ್ಥಿತಿ ತಲುಪಿವೆ. ಆಂಗ್ಲಶಾಲೆಗಳು ಕೇಕೆ ಹಾಕುತ್ತಾ ಸರ್ಕಾರಿ ಕನ್ನಡ ಶಾಲೆಗಳ ಮುಚ್ಚುವಿಕೆಗೆ ಪರೋಕ್ಷ ಕಾರಣ ವಾಗಿವೆ.

ಇಂತಹ ಸಂದರ್ಭದಲ್ಲಿ ನಾಡು, ನುಡಿ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದರ ಜತೆಗೆ ನಮ್ಮ ನೆಲ, ಜಲ, ಸಂಸ್ಕೃತಿ, ಸಾಹಿತ್ಯ, ಪರಂಪರೆ ಕುರಿತು ಸಾಹಿತ್ಯ ಸಮ್ಮೇಳನಗಳ ಮೂಲಕ ವಿದ್ಯಾರ್ಥಿ, ಯುವ ಜನರಲ್ಲಿ, ಸಾರ್ವಜನಿಕರಲ್ಲಿ ಪಸರಿಸಬೇಕಿದ್ದ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲು ಮುಂದಾಗ ದಿರುವುದು ಚರ್ಚೆಗೆ ಗ್ರಾಸವಾಗಿದೆ.

ಕೇಂದ್ರ ಕೊಡುವ ಅನುದಾನ ಬಳಕೆ ಇಲ್ಲ: ಪ್ರತಿ ವರ್ಷ ನಡೆಯುವ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮ್ಮೇಳನಗಳಿಗೆ ಕೇಂದ್ರ ಕಸಾಪ ಲಕ್ಷಾಂತರ ರೂ. ಅನುದಾನ ಒದಗಿಸುತ್ತದೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ 5 ಲಕ್ಷ ರೂ. ಅನುದಾನ ಕೊಟ್ಟರೆ, ತಾಲೂಕು ಮಟ್ಟದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ತಲಾ 1 ಲಕ್ಷ ರೂ. ಅನುದಾನ ಬಿಡುಗಡೆ ಮಾಡುತ್ತದೆ.

Advertisement

ಆದರೆ ಕೇಂದ್ರ ಕಸಾಪ ಕೊಡುವ ಅನುದಾನವನ್ನು ಸಹ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ಜಿಲ್ಲೆಯ ಕಸಾಪ ಘಟಕಗಳು ವಿಫ‌ಲವಾಗಿರುವುದು ಪದಾಧಿಕಾರಿಗಳ ಕನ್ನಡ ಪ್ರೇಮದ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ.

ಈಗಾಗಲೇ ಶೈಕ್ಷಣಿಕ ವರ್ಷ ಮುಗಿಯುವ ಹಂತಕ್ಕೆ ಬಂದಿದ್ದು, ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿವೆ. ಆದರೆ ಶಾಲಾ ಕಾಲೇಜುಗಳ ವಾರ್ಷಿಕ ಪರೀಕ್ಷೆಗಳಿಗೂ ಮೊದಲೇ ಸಾಹಿತ್ಯ ಸಮ್ಮೇಳನಗಳನ್ನು ನಿಯಮಿತವಾಗಿ ಸಂಘಟಿಸಬೇಕಿದ್ದ ಜಿಲ್ಲಾ ಕಸಾಪ ಹಾಗೂ ತಾಲೂಕು ಕಸಾಪ ಘಟಕಗಳು ಈ ವಿಚಾರದಲ್ಲಿ ನಿಷ್ಕ್ರಿಯಗೊಂಡಿ ರುವುದು ಎದ್ದು ಕಾಣುತ್ತಿದೆ.

ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ಜಿಲ್ಲೆಯ ಜನರಲ್ಲಿ ಕನ್ನಡದ ಕಂಪು ಮೂಡಿಸಬೇಕಿದ್ದ ಜಿಲ್ಲಾ ಹಾಗೂ ತಾಲೂಕು ಕಸಾಪ ಘಟಕಗಳ ಪದಾಧಿಕಾರಿಗಳು ತಮ್ಮ ಬದ್ಧತೆ, ಪ್ರಾಮಾಣಿಕತೆಯನ್ನು ಪ್ರದರ್ಶಿಸದ ಕಾರಣ ಜಿಲ್ಲೆಯಲ್ಲಿ ಅಕ್ಷರ ಜಾತ್ರೆಗಳಿಗೂ ಬರ ಬಂದಂತಾಗಿದೆ.

ಶಾಸಕರು ದಿನಾಂಕ ನಿಗದಿ ಮಾಡಿಲ್ಲ: ಜಿಲ್ಲಾಧ್ಯಕ್ಷ
ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿಂತಾಮಣಿಯಲ್ಲಿ ನಡೆಸಲು ಉದ್ದೇಶಿಸಿದ್ದೇವೆ. ಫೆ.1, 2 ಹಾಗೂ 3ಕ್ಕೆ ನಡೆಸಲು ಉದ್ದೇಶಿಸಿದ್ದೆವು. ಆದರೆ ಸ್ಥಳೀಯ ಶಾಸಕರು ಸಮ್ಮೇಳನಕ್ಕೆ ದಿನಾಂಕ ನಿಗದಿ ಮಾಡುತ್ತಿಲ್ಲ. ಹಲವು ಬಾರಿ ಅವರನ್ನು ಭೇಟಿ ಮಾಡಿ ದಿನಾಂಕ ಕೇಳಿದ್ದೇವೆ. ಅವರು ದಿನಾಂಕ ಕೊಟ್ಟ ಬಳಿಕ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತೇವೆ ಎಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸದ ಬಗ್ಗೆ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್‌ ಪ್ರತಿಕ್ರಿಯೆ ನೀಡಿದರು.

•ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಘಟಕ ಪದಾಧಿಕಾರಿಗಳ ನಡುವೆ ಶೀತಲಸಮರ
•ಜಿಲ್ಲಾ ಮಟ್ಟದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ 5 ಲಕ್ಷ
• ತಾಲೂಕು ಮಟ್ಟದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ತಲಾ 1 ಲಕ್ಷ ರೂ. ಅನುದಾನ ಬಿಡುಗಡೆ

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next