ಶಿವಮೊಗ್ಗ: ಚಿನ್ನ ಖರೀದಿಗೆಂದು ಬಂದ ಐದು ಮಂದಿ ಯುವಕರು ಮೋಸಕ್ಕೆ ಒಳಗಾಗಿದ್ದಲ್ಲದೆ, ಮಕ್ಕಳ ಕಳ್ಳರು ಎಂಬ ಶಂಕೆಗೆ ಗುರಿಯಾಗಿ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡು ಪೊಲೀಸರ ವಶವಾದ ಘಟನೆ ಕಲ್ಲಾಪುರದಲ್ಲಿ ಭಾನುವಾರ ನಡೆದಿದೆ.
ಬೆಂಗಳೂರಿನ ಯಲಹಂಕದ ಅಶೋಕ್, ಅಜಿತ್,ಅವಿನಾಶ್, ಸತೀಶ್ ಹಾಗೂ ಮೂರ್ತಿ ಸದ್ಯ ಪೊಲೀಸರ ಸುಪರ್ದಿಯಲ್ಲಿದ್ದಾರೆ. ಇವರೆಲ್ಲ ಕಿಡ್ನಿ ಕಳ್ಳರು, ಮಕ್ಕಳ ಹೊತ್ತೂಯ್ಯಲು ಬಂದಿದ್ದಾರೆ ಅನ್ನುವ ಶಂಕೆಯಿಂದ ಗ್ರಾಮಸ್ಥರು ಇವರನ್ನು ಕೂಡಿ ಹಾಕಿ, ಹಿಗ್ಗಾಮುಗ್ಗಾ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗಲೇ ಅಸಲಿ ವಿಷಯ ಬಯಲಾಗಿದೆ.
ಚಿನ್ನದ ಆಸೆ ತಂದಿಟ್ಟ ಆಪತ್ತು: ಈ ಐವರು ಯುವಕರ ಪೈಕಿ ಅಶೋಕ್ ಎಂಬಾತ ಕಾರು ಚಾಲಕನಾಗಿದ್ದು ಹಿಂದೊಮ್ಮೆ ಧರ್ಮಸ್ಥಳಕ್ಕೆ ತೆರಳಿದ್ದ ಸಂದರ್ಭ, ಮಂಜುನಾಥ್ ಎಂಬಾತನ ಪರಿಚಯ ವಾಗಿದೆ. ತಿಂಗಳ ಹಿಂದೆ ಮಂಜುನಾಥ್, ಅಶೋಕ್‌ಗೆ ಕರೆ ಮಾಡಿ, ನನ್ನ ಬಳಿ ಪುರಾತನ ಚಿನ್ನದ ನಾಣ್ಯಗಳಿವೆ. ಲಕÒ ರೂ. ಕೊಟ್ಟರೆ ಅಷ್ಟೂ ನಾಣ್ಯ ನೀಡುವುದಾಗಿ ಹೇಳಿದ್ದ. ಕೆಲ ದಿನಗಳ ಹಿಂದೆ ಅಶೋಕ್‌ನನ್ನು ಶಿವಮೊಗ್ಗಕ್ಕೆ ಕರೆಸಿಕೊಂಡು 9 ಗ್ರಾಂನಷ್ಟು ಅಸಲಿ ಚಿನ್ನ ನೀಡಿ ನಂಬಿಕೆ ಹುಟ್ಟಿಸಿದ್ದ. ಅಶೋಕ್ ಈ ವಿಷಯವನ್ನು ತನ್ನ ಸ್ನೇಹಿತರಿಗೆ ತಿಳಿಸಿದ್ದ. ಇವರೆಲ್ಲ ಚಿನ್ನ ಖರೀದಿಸಲೆಂದು ಒಂದು ಲಕ್ಷ ರೂ. ಹಣ ಹೊಂದಿಸಿಕೊಂಡು ಶನಿ ವಾರ ರಾತ್ರಿ ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿದ್ದರು.
ನಕಲಿ ಚಿನ್ನಕೊಟ್ಟು ಪರಾರಿಯಾದ: ಭಾನುವಾರ ಬೆಳಗ್ಗೆ ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ಬಳಿಯ ಕಲ್ಲಾಪುರ ಬಳಿಯ ಎಂಪಿಎಂ ಫಾರೆಸ್ಟ್ ಬಳಿ ಬರುವಂತೆ ಮಂಜುನಾಥ್ ಇವರಿಗೆ ತಿಳಿಸಿದ್ದ. ಬಂಗಾರದ ನಾಣ್ಯಗಳಿಗೆ ಕುಂಕುಮ ತಗುಲಿದೆ. ಸಿರಿಂಜ್ ತಂದರೆ ಅದರಿಂದ ಶುಚಿಗೊಳಿಸಬಹುದು ಎಂದು ಸಲಹೆ ನೀಡಿದ್ದ. ಈತನ ಮಾತಿನಂತೆ ಸಿರಿಂಜ್ ಕೊಂಡೊಯ್ದಿದ್ದ ಯುವಕರು ಅದರಲ್ಲಿ ನೀರು ಹಾಕಿ ನಾಣ್ಯ ಶುಚಿಗೊಳಿಸಿದ್ದಾರೆ. ನಂತರ ಇವರಿಂದ ಹಣ ಪಡೆದು,ನಕಲಿ ನಾಣ್ಯಗಳನ್ನು ನೀಡಿದ ಮಂಜುನಾಥ್ ಪರಾರಿಯಾಗಿದ್ದಾನೆ. ಅನುಮಾನಗೊಂಡ ಯುವಕರು ಪರಿಶೀಲಿಸಿದಾಗ ನಕಲಿ ಎಂದು ಗೊತ್ತಾಗಿ ಆತನನ್ನು ಹುಡುಕಲು ಮುಂದಾಗಿದ್ದಾರೆ. ಈ ವೇಳೆ ಅವರ ಮೇಲೆ ಕಲ್ಲಿನಿಂದ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಊರವರ ಕೈಗೆ ಸಿಕ್ಕಿಬಿದ್ದರು: ಮೋಸ ಮಾಡಿದವ್ಯಕ್ತಿಯನ್ನು ಹುಡುಕಿಕೊಂಡು ಬರುವಾಗ ಕಲ್ಲಾಪುರ ಗ್ರಾಮದ ಬಳಿ ಯುವಕನನ್ನು ತಡೆದು ಈ ಬಗ್ಗೆ ಪ್ರಶ್ನಿಸಿದ್ದಾರೆ. ಆ ಹುಡುಗ ಹೆದರಿ ಓಡಲು ಯತ್ನಿಸಿದಾಗ ಹಿಡಿದು ಥಳಿಸಿದ್ದಾರೆ. ಈ ವಿಷಯ ಗ್ರಾಮಸ್ಥರಿಗೆ ತಿಳಿದು ಐದು ಮಂದಿ ಯುವಕರನ್ನು ಹಿಡಿದು ದೇವಸ್ಥಾನದಲ್ಲಿ ಕೂಡಿ ಹಾಕಿದ್ದಾರೆ. ಇವರ ಬಳಿ ಸಿರಿಂಜ್ ಇದ್ದಿದ್ದನ್ನು ಕಂಡ ಗ್ರಾಮಸ್ಥರು ಮಕ್ಕಳನ್ನು ಅಪಹರಿಸಿ ಇಂಜೆಕ್ಷನ್ ನೀಡಿ ಕಿಡ್ನಿ ತೆಗೆಯುವ ತಂಡದವರು ಎಂಬ ಶಂಕೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಇವರಿಂದ ಒಂದು ಕಾರು, ನಕಲಿ ಚಿನ್ನದ ನಾಣ್ಯಗಳು, ಸಿರಿಂಜ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.