Advertisement
ಕರಾವಳಿಯ ಮೀನುಗಾರರಿಗೆ ಬೂತಾಯಿ, ಬಂಗುಡೆಗಳೇ ಹೆಚ್ಚಾಗಿ ದೊರಕುತ್ತಿದ್ದು, ಲಾಭ ತಂದುಕೊಡುತ್ತವೆ. ಆದರೆ ಕೆಲವು ವರ್ಷಗಳಿಂದ ಬೂತಾಯಿ ಕಡಿಮೆಯಾಗಿದ್ದು, ಈ ವರ್ಷ ಬಂಗುಡೆಯೂ ಸಿಗುತ್ತಿಲ್ಲ. ಇದೇ ಮೊದಲ ಬಾರಿಗೆ ಬಂಗುಡೆ ಇಷ್ಟು ಕಡಿಮೆ ಸಿಗುತ್ತಿದ್ದು, ನಿರ್ದಿಷ್ಟ ಕಾರಣ ಏನು ಎಂದು ಗೊತ್ತಾಗುತ್ತಿಲ್ಲ ಎನ್ನುವುದು ಮೀನುಗಾರರ ಅಭಿಪ್ರಾಯ.
ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಮೀನುಗಳಲ್ಲಿ ಬಂಗುಡೆಗೆ ಅಗ್ರಸ್ಥಾನ. ಮಾರುಕಟ್ಟೆ ಮಾತ್ರವಲ್ಲ, ಮೀನಿನ ಕಾರ್ಖಾನೆ, ರಫ್ತಿನಲ್ಲೂ ಬಂಗುಡೆ ಮೀನಿಗೆ ಭಾರೀ ಬೇಡಿಕೆ ಇರುತ್ತದೆ. ಅಂಜಲ್, ಪಾಂಫ್ರೆಟ್‌ನಂತಹ ಮೀನುಗಳು ಸಿಕ್ಕಿದರೂ ಅವು ದುಬಾರಿ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಖರೀದಿಗೆ ಮುಂದಾಗುವುದಿಲ್ಲ. ಫಿಶ್ ಮೀಲ್‌ಗೂ ಅವು ಅಷ್ಟಾಗಿ ರವಾನೆಯಾಗುವುದಿಲ್ಲ. ಹೀಗಾಗಿ ಬೋಟುಗಳಿಗೆ ಬಂಗುಡೆ ಸಿಕ್ಕಿದರೆ ಮಾತ್ರ ಹೆಚ್ಚು ಲಾಭ. ಆದರೆ ಈ ವರ್ಷ ಬಂಗುಡೆ ಅಷ್ಟಾಗಿ ಲಭಿಸುತ್ತಲೇ ಇಲ್ಲ. ಉತ್ತರ ಕನ್ನಡಕ್ಕೆ ಇಲ್ಲಿಂದ ಪ್ರತೀ ದಿನ 20-30 ಕಂಟೈನರ್‌ಗಳಷ್ಟು ಬಂಗುಡೆ ಮೀನು ರವಾನೆಯಾಗುತ್ತಿತ್ತು. ಆದರೆ ಈ ವರ್ಷ ಒಂದೆರಡು ಕಂಟೈನರ್‌ಗಳಷ್ಟೇ ಹೋಗುತ್ತಿವೆ. ಬುಲ್‌ಟ್ರಾಲ್, ಲೈಟ್ ಫಿಶಿಂಗ್‌ನಿಂದಾಗಿಯೂ ಬಂಗುಡೆ ಕಡಿಮೆಯಾಗುತ್ತಿದೆ. ಬಂಗುಡೆ ಸಿಗದಿದ್ದರೆ ಬಹಳ ಕಷ್ಟ ಎನ್ನುತ್ತಾರೆ ಉತ್ತರ ಕರ್ನಾಟಕದ ಮೀನುಗಾರ ಮುಖಂಡ ಮಹೇಶ್. ಖರ್ಚು ಹುಟ್ಟುತ್ತಿಲ್ಲ
ಗಂಗೊಳ್ಳಿ, ಮಲ್ಪೆ, ಮಂಗಳೂರು ಬಂದರುಗಳಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಬಹುತೇಕ ಪರ್ಸಿನ್ ಬೋಟುಗಳು ಬಂಗುಡೆ ಸಹಿತ ಹೆಚ್ಚಿನ ಮೀನು ಸಿಗದೆ ವಾಪಸ್ ಆಗುತ್ತಿರುವುದು ಕಂಡುಬರುತ್ತಿದೆ. ಟ್ರಾಲ್ ಬೋಟುಗಳಿಗೂ ಅಷ್ಟೊಂದು ಮೀನು ಸಿಗುತ್ತಿಲ್ಲ. ಒಂದು ಪರ್ಸಿನ್ ಬೋಟು ಕಡಲಿಗೆ ಇಳಿದರೆ ದಿನಕ್ಕೆ 300 400 ಲೀ. ಡೀಸೆಲ್ ಬೇಕು, 30 ಜನ ಮೀನುಗಾರರು ಇರುತ್ತಾರೆ. ಒಟ್ಟಾರೆ ಕನಿಷ್ಠ 40 50 ಸಾವಿರ ರೂ. ಖರ್ಚಿದೆ. ಆದರೆ ಈಗ ಸಿಗುತ್ತಿರುವ ಮೀನಿನಿಂದ ಖರ್ಚು ಹುಟ್ಟುತ್ತಿಲ್ಲ ಅನ್ನುವುದು ಮೀನುಗಾರರ ಅಳಲು.
Related Articles
ಮತ್ಸ್ಯಕ್ಷಾಮದಿಂದಾಗಿ ಬೇಡಿಕೆಯಷ್ಟು ಮೀನು ಮಾರುಕಟ್ಟೆಗೆ ಬರುತ್ತಿಲ್ಲ. ಹಾಗಾಗಿ ಇರುವ ಮೀನಿಗೂ ಭಾರೀ ಬೇಡಿಕೆ ಇದ್ದು, ದರ ದುಬಾರಿಯಾಗಿದೆ. ಬಂಗುಡೆ ಕೆ.ಜಿ.ಗೆ 250 – 300 ರೂ., ಬೂತಾಯಿ 150-200 ರೂ., ಅಂಜಲ್ 500 -700 ರೂ., ಪಾಂಫ್ರೆಟ್ 800- 900 ರೂ., ಕಾಣೆ (ಕಂಡಿಗೆ) 750 – 800 ರೂ., ಬಿಳಿ ಮೀನು 250 ರೂ. ದರದಲ್ಲಿ ಮಾರಾಟವಾಗುತ್ತಿದೆ.
Advertisement
ಸಮುದ್ರದಲ್ಲಿ ಈಗ ವಾತಾವರಣ ಸ್ಥಿರವಾಗಿಲ್ಲ. ಗಾಳಿಯ ತೀವ್ರತೆ, ಅಲೆಗಳ ಏರಿಳಿತ ಹೆಚ್ಚಿದೆ. ಹಾಗಾಗಿ ಬಂಗುಡೆ ಮೀನು ಆಳ ಸಮುದ್ರದಲ್ಲಿ ಬಹು ದೂರಕ್ಕೆ ಹೋಗಿರಬಹುದು. ಪರಿಸ್ಥಿತಿ ಸುಧಾರಿಸಬಹುದು. ವಾತಾವರಣ ಸ್ಥಿರಗೊಂಡಾಗ ಮತ್ತೆ ಬಂಗುಡೆ ಸಿಗಬಹುದು. ಮೀನುಗಾರರಿಗೆ ಆತಂಕ ಬೇಡ, ಒಳ್ಳೆಯ ಮೀನುಗಾರಿಕೆ ಆಗಬಹುದು. ಕಳೆದ ವರ್ಷವೂ ಆಗಸ್ಟ್‌ನಲ್ಲಿ ಹೀಗೆ ಮತ್ಸ್ಯಕ್ಷಾಮ ಉಂಟಾಗಿತ್ತು, ಬಳಿಕ ಚೇತರಿಕೆ ಕಂಡಿತ್ತು.-ಡಾ| ಶಿವಕುಮಾರ ಹರಗಿ, ಸಹಾಯಕ ಪ್ರಾಧ್ಯಾಪಕ, ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರ, ಕಾರವಾರ ಬಂಗುಡೆ ಈ ವರ್ಷದಷ್ಟು ಕಡಿಮೆ ಪ್ರಮಾಣದಲ್ಲಿ ಬೇರೆ ಯಾವ ವರ್ಷವೂ ಸಿಕ್ಕಿಲ್ಲ. ಇದರಿಂದ ಮೀನುಗಾರಿಕೆಗೆ ಭಾರೀ ಹೊಡೆತ ಬಿದ್ದಿದೆ. ಇಷ್ಟು ವರ್ಷ ಈ ರೀತಿ ಆದದ್ದಿಲ್ಲ. ಬಂಗುಡೆ ಹೆಚ್ಚು ಸಿಕ್ಕಿದಷ್ಟು ಮತೊÕéàದ್ಯಮಕ್ಕೆ ಒಳ್ಳೆಯದು. ಬೂತಾಯಿಯೂ ಸಣ್ಣ ಗಾತ್ರದ್ದು ಮಾತ್ರ ಸಿಗುತ್ತಿವೆ. ಈ ಎರಡು ತಿಂಗಗಳುಗಳಲ್ಲಿ ಅಷ್ಟೊಂದು ಮೀನುಗಾರಿಕೆ ನಡೆದಿಲ್ಲ. ಇವು ಮೀನುಗಾರರಿಗೆ ಸಂಕಷ್ಟದ ದಿನಗಳು.
-ರಮೇಶ್ ಕುಂದರ್ ಗಂಗೊಳ್ಳಿ, ಮೀನುಗಾರ ಮುಖಂಡರು ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮೀನು ಲಭ್ಯತೆ ತೀರಾ ಕಡಿಮೆಯಾಗಿದೆ. ಉತ್ತಮ ಗಾತ್ರದ ಬಂಗುಡೆ ಮೀನಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಸಿಗುವುದೇ ಅಪರೂಪ ಎಂಬಂತಾಗಿದೆ. ಹವಾಮಾನ ಬದಲಾವಣೆ ಮತ್ತು ಮೀನಿನ ವಲಸೆಯೂ ಇದಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ.
-ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ - ಪ್ರಶಾಂತ್ ಪಾದೆ