ಹಾಯ್ ಡಿಯರ್ ಕ್ರಶ್,
ಎಲ್ಲಿ ಹೋಗಿದ್ದೀಯಾ ನೀನು? ನೀ ಇಲ್ಲದೆ ಇಲ್ಲಿ ಓದೋಕೂ ಆಗ್ತಿಲ್ಲ, ಇರೋಕೂ ಮನಸ್ಸಾಗ್ತಿಲ್ಲ. ಕಾಲೇಜ್ ಸ್ಟಾರ್ಟ್ ಆಗಿ ಆರು ತಿಂಗಳಾಗಿದೆ. ನಿನ್ನನ್ನು ನೋಡದೆ ನಾನಿಲ್ಲಿ ಒದ್ದಾಡುತ್ತಿದ್ದೇನೆ. ಬೇಗ ಬಂದು ಬಿಡು ಚಿನ್ನ. ನಿನಗೆ ಏನೋ ಹೇಳಬೇಕಿತ್ತು. ಬೇರೆ ಯಾವ ಮಾರ್ಗ ಕಾಣದೆ ಈ ಪತ್ರ ಬರೆಯುತಿದ್ದೇನೆ.
ಬಾಗಲಕೋಟೆಯಿಂದ ಮೈಸೂರಿಗೆ ಓದೋಕೆ ಬಂದ ನನಗೆ ಇಲ್ಲಿ ಎಲ್ಲವೂ ಹೊಸದು. ಹೋದ್ರೆ ಹಾಸ್ಟೆಲ್, ಬಂದ್ರೆ ಕಾಲೇಜು, ಕೈಗೊಂದು ಬೈಕು, ಕಾಣೋದೆಲ್ಲವನ್ನೂ ಸೆರೆ ಹಿಡಿಯುತ್ತಿದ್ದ ಕ್ಯಾಮರಾ, ಇದಿಷ್ಟೇ ನನ್ನ ದಿನಚರಿಯಾಗಿತ್ತು. ಇಂತಿಪ್ಪ ನನ್ನ ಬದುಕಿಗೆ ಇದ್ದಕ್ಕಿದ್ದಂತೆ ಎಂಟ್ರಿ ಕೊಟ್ಟವಳು ನೀನು.
ಅವತ್ತು ಲ್ಯಾಬ್‌ನಲ್ಲಿ ಪ್ರ್ಯಾಕ್ಟಿಕಲ್ ಮಾಡುತ್ತಿದ್ದ ಸ್ನೇಹಿತರನ್ನೆಲ್ಲಾ ಕ್ಯಾಮರಾದಲ್ಲಿ ಸೆರೆ ಹಿಡಿಯುವಾಗ, ಯಾವುದೋ ಕಾಲ್ಗೆಜ್ಜೆಯ ಶಬ್ದ ಕೇಳಿಸಿತು. ಹಾಗೇ ಜೂಮ್ ಲೆನ್ಸ್ ಅನ್ನು ಎಡಕ್ಕೆ ತಿರುಗಿಸಿ, ಬಾಗಿಲ ಮರೆಯಲ್ಲಿ ನಿಂತಿದ್ದ ನಿಮ್ಮತ್ತ ಜೂಮ್ ಮಾಡಿದೆ. ಸಣ್ಣ ದೇಹ, ಗಾಳಿಗೆ ತೂರಿ ಬರುತ್ತಿದ್ದ ಮುಂಗುರುಳು, ಕಣ್ಣಿಗೊಂದು ಹೊಳೆಯುವ ಕ್ಯಾಮರಾ ಲೆನ್ಸ್‌ನಂಥ ಗ್ಲಾಸ್, ಮುಗುಳುನಗೆಯಲ್ಲಿ ಮೂಡಿ ಬರುತ್ತಿದ್ದ ಡಿಂಪಲ್ ಕೆನ್ನೆ! ಅದ್ಭುತವೊಂದನ್ನು ಕಂಡಂತೆ ನನ್ನ ಕ್ಯಾಮರಾ ಸ್ವಲ್ಪ ಹೊತ್ತು ಗಲಿಬಿಲಿಯಾಗಿದ್ದು ಸತ್ಯ. ತಕ್ಷಣ ಸಾವರಿಸಿಕೊಂಡು, ನಿಮ್ಮ ಚಿತ್ರವನ್ನು ಕ್ಲಿಕ್ಕಿಸಿದ ಕ್ಯಾಮರಾ, ಅದನ್ನು ಹೃದಯದ ಡೆಸ್ಕ್ಟಾಪ್ ಮೇಲೆ ಶಾಶ್ವತವಾಗಿ ಸೇವ್ ಮಾಡಿಬಿಟ್ಟಿತು.
ಆಮೇಲೆ ದಿನಾ ನಿಮಗಾಗಿಯೇ ಲ್ಯಾಬ್‌ಗ ಬರುತ್ತಿದ್ದೆ ನಾನು. ನೀನು ನನ್ನ ಸೀನಿಯರ್ ಅಂತ ಗೊತ್ತಾದ್ರೂ ನಂಗೆ ಯಾವ ಅಂಜಿಕೆಯೂ ಆಗಲಿಲ್ಲ. ಅಯ್ಯೋ, ನೀನು ಸ್ಟುಡೆಂಟಾ ಇಲ್ಲಾ ಸೈಂಟಿಸ್ಟಾ..? ಅನುಮಾನ ನನಗೆ. ಲ್ಯಾಬ್‌ನಲ್ಲಿ ಒಂದು ಸಲ ಮುಖ ಕೆಳಗೆ ಹಾಕಿ ಪ್ರ್ಯಾಕ್ಟಿಕಲ್ ಮಾಡೋಕೆ ಶುರು ಮಾಡಿದರೆ, ಜಪ್ಪಯ್ಯ ಅಂದ್ರೂ ಕತ್ತೆತ್ತಿ ನೋಡುವುದಿಲ್ಲ. ಇನ್ನು ಕಾರಿಡಾರ್‌ನಲ್ಲಿ ನಡೆದು ಹೋಗುವಾಗಲೂ, ದಾರಿಯಲ್ಲಿ ಬೇರೇನೂ ಕಾಣದಂತೆ ತಲೆ ಕೆಳಗೆ ಹಾಕಿ ನಡೆಯುವ ಸೈಲೆಂಟ್, ಡೀಸೆಂಟ್ ಸೀನಿಯರ್ ಹುಡುಗಿಯನ್ನ ನಾನು ನೋಡೇ ಇಲ್ಲ. ನಿನಗಾಗಿ ಲ್ಯಾಬ್‌ಗ ಬರುತ್ತಿದ್ದ ನನಗೆ ಹಾಯ್, ಬಾಯ್ ಅಂದದ್ದು ಬಿಟ್ಟರೆ ಒಂದು ದಿನವೂ ಮಾತಾಡಿಸಲಿಲ್ಲ. ಜೂನಿಯರ್ ಜೊತೆ ಮಾತಾಡೋಕೆ ಯಾಕೆ ಹೆದರಿಕೆ?
ನೀನು ತುಂಬಾ ಡೀಸೆಂಟ್, ಬ್ರಿಲಿಯೆಂಟ್ ಅಂದುಕೊಂಡಿದ್ದೆ. ಆದರೆ, ಅದೊಂದು ದಿನ ಲ್ಯಾಬ್‌ನಲ್ಲಿ ಕೆಮಿಕಲ್ಸ್ ಮಿಕ್ಸ್ ಮಾಡುವಾಗ ಏನೋ ತಪ್ಪು ಮಾಡಿ ಹೊಗೆ ಎಬ್ಬಿಸಿ, ಎಲ್ಲರಲ್ಲೂ ಆತಂಕ ಮೂಡಿಸಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿಬಿಟ್ಟೆ. ಆ ದಿನಗಳಲ್ಲಿಯೇ ನನ್ನ ಮನದಲ್ಲಿ ಪ್ರೇಮ ಅಂಕುರಿಸಿದ್ದರೂ, ನಿನ್ನ ಪರಿಚಯ ಮಾಡಿಕೊಳ್ಳಬೇಕೆಂಬ ಆಸೆ ನೆರವೇರಲೇ ಇಲ್ಲ. ಅಷ್ಟೊತ್ತಿಗೆ ಪ್ರ್ಯಾಕ್ಟಿಕಲ್ ಎಕ್ಸಾಮ್ ಬಂತು. ನೀನು ಟಾಪರ್ ಆಗ್ತಿಯೇನೋ ಅಂತ ಭಾವಿಸಿದ್ದ ನನಗೆ, ಲ್ಯಾಬ್ ಎಕ್ಸಾಮ್‌ನಲ್ಲಿ ಫೇಲ್ ಆಗುವ ಮೂಲಕ ಶಾಕ್ ಕೊಟ್ಟುಬಿಟ್ಟೆ! ಆದರೆ, ನಾನು ಜೀವನದಲ್ಲಿ ಇದೇ ಮೊದಲ ಸಲ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದೇನೆ. ಅದಕ್ಕೆ ಕಾರಣ ನೀನೇ. ಯಾಕಂದ್ರೆ, ನಿನ್ನನ್ನು ನೋಡೋಕೆ ಅಂತ ತಾನೇ ನಾನು ಅಷ್ಟು ಶ್ರದ್ಧೆಯಿಂದ ಲ್ಯಾಬ್‌ಗ ಬರುತ್ತಿದ್ದುದು. ನನ್ನ ಉತ್ಸಾಹ, ಗೆಲುವು, ಬದಲಾವಣೆ ಎಲ್ಲವೂ ನಿನ್ನದೇ. ನಿನಗೊಂದು ಥ್ಯಾಂಕ್ಸ್ ಹೇಳ್ಳೋಣ ಅಂತ ಕಾಯುತ್ತಿದ್ದರೆ, ನಿನ್ನ ಪತ್ತೆಯೇ ಇಲ್ಲವಲ್ಲ. ಫೇಲಾದೆ ಅಂತ ಬೇಜಾರಲ್ಲಿ ಎಲ್ಲಿ ಹೋಗಿಬಿಟ್ಟೆ? ಮನೆಯಲ್ಲಿ ಬೈದರಾ? ನೀನಿಲ್ಲದೆ ಕ್ಯಾಂಪಸ್ ಬಿಕೋ ಅನ್ನುತ್ತಿದೆ. ಪ್ಲೀಸ್, ಬೇಗ ವಾಪಸ್ ಬಂದು ಬಿಡು.
ನೀ ಬರುವ ದಾರಿ ಕಾಯುತ್ತಿರುವ
ಇಂತಿ ನಿನ್ನ ಫೋಟೊಗ್ರಾಫರ್
ಸುನೀಲ ಗದೆಪ್ಪಗೋಳ