“ಚಮಕ್’ ಚಿತ್ರತಂಡ ಮುಖದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ಗಣೇಶ್ ನಾಯಕರಾಗಿರುವ “ಚಮಕ್’ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುವ ಮೂಲಕ ಕಲೆಕ್ಷನ್ ವಿಷಯದಲ್ಲೂ ಸದ್ದು ಮಾಡುತ್ತಿದೆ. ಈ ನಡುವೆಯೇ ಚಿತ್ರ ಈಗ ವಿದೇಶಗಳಲ್ಲೂ ಬಿಡುಗಡೆಯಾಗಿದೆ. ಹೌದು, ಸುನಿ ನಿರ್ದೇಶನದ “ಚಮಕ್’ ಚಿತ್ರ ಅಮೆರಿಕಾ, ಕೆನಡಾ, ಯುರೋಪ್, ಸಿಂಗಾಪೂರ್ ಸೇರಿದಂತೆ ಹಲವು ದೇಶಗಳಲ್ಲಿ ಬಿಡುಗಡೆಯಾಗಿದೆ.
ಸಿನಿಮಾ ನೋಡಿದ ಅಲ್ಲಿನ ಮಂದಿ ಕೂಡಾ “ಚಮಕ್’ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ದುಬೈ, ಮಲೇಷ್ಯಾ ಸೇರಿದಂತೆ ಇತರ ಕಡೆಗಳಲ್ಲೂ ಬಿಡುಗಡೆಯಾಗಲಿದೆ. ಹೊರದೇಶಗಳ ಜೊತೆಗೆ “ಚಮಕ್’ ಹೈದರಾಬಾದ್, ಗೋವಾ, ಮುಂಬೈ ಸೇರಿದಂತೆ ಹೊರರಾಜ್ಯಗಳಲ್ಲೂ ತೆರೆಕಂಡಿದ್ದು, ಅಲ್ಲೂ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆಯಂತೆ.
ಎಲ್ಲಾ ಓಕೆ ಸಿನಿಮಾದ ಕಲೆಕ್ಷನ್ ಎಷ್ಟು, ನಿರ್ಮಾಪಕರ ಅಕೌಂಟ್‌ಗೆ ಎಷ್ಟು ಕಾಸು ಬಂತು ಎಂಬ ಪ್ರಶ್ನೆ ಬರುತ್ತದೆ. ಅದಕ್ಕೆ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ತುಂಬಾ ಜಾಣ್ಮೆಯಿಂದ ಉತ್ತರಿಸುತ್ತಾರೆ. “ಚಿತ್ರದಿಂದ ಎಷ್ಟು ದುಡ್ಡು ಬಂದಿದೆ ಅನ್ನೋದನ್ನು ನಾನು ಚಿತ್ರದ ನೂರನೇ ದಿನದಂದು ಸಿಎ ಜೊತೆ ಬಂದು ಲೆಕ್ಕ ಕೊಡುತ್ತೇನೆ. ಚಿತ್ರರಂಗದ ಭಾಷೆಯಲ್ಲಿ ಹೇಳಬೇಕಾದರೆ ಸೇಫ್ ಆಗಿದ್ದೀನಿ.
ಎಷ್ಟು ಸೇಫ್ ಎಂದರೆ ಶೇ.99.99 ಎನ್ನಬಹುದು. ಕಾಸು ಇನ್ನೂ ಅಕೌಂಟ್‌ಗೆ ಕ್ರೆಡಿಟ್ ಆಗಿಲ್ಲ. ಬರುವ ಹಾದಿಯಲ್ಲಿದೆ. ಜನ ಎರಡೂ ಕೈಯಲ್ಲಿ ಆಶೀರ್ವಾದ ಮಾಡಿದ್ದರಿಂದ ನಾನು ಖುಷಿಯಾಗಿದ್ದೇನೆ. ಯಾವುದೇ ಭಯವಿಲ್ಲ’ ಎನ್ನುತ್ತಾರೆ ಚಂದ್ರಶೇಖರ್. ಇನ್ನು, “ಚಮಕ್’ ಚಿತ್ರದ ಗೆಲುವಿನಿಂದ ಖುಷಿಯಾಗಿರುವ ನಿರ್ಮಾಪಕ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಈಗ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಲು ಮುಂದಾಗಿದ್ದಾರೆ.