Advertisement

ರಾಜ ಕಾಲುವೆ ಬಂತು ಮೂಗು ಮುಚ್ಚಿಕೊಳ್ರಿ!

03:59 PM May 12, 2019 | Team Udayavani |

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ರಾಜ ಕಾಲುವೆಗಳು ಸೇರಿದಂತೆ ಎಲ್ಲೆಡೆ ಚರಂಡಿಗಳು ತ್ಯಾಜ್ಯದಿಂದ ತುಂಬಿ ತುಳುಕುತ್ತಿದ್ದು, ಇದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೇ, ಎಲ್ಲೆಡೆ ಗಬ್ಬೆದ್ದು ನಾರುತ್ತಿವೆ. ಜವಳಿ ಗಲ್ಲಿ, ವಿಡಿಎಸ್‌ಟಿ ಶಾಲೆ, ಬೆಟಗೇರಿಯಲ್ಲಿ ಹರಿಯುವ ರಾಜ ಕಾಲುವೆಗಳ ಪ್ರದೇಶದ ನಿವಾಸಿಗಳು ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ.

Advertisement

ಹೌದು. ಅವಳಿ ನಗರದಲ್ಲಿ ಬಹು ದಿನಗಳಿಂದ ರಾಜ ಕಾಲುವೆಗಳು ಸೇರಿದಂತೆ ಕೊಳಚೆ ನೀರಿನ ಸಂಪರ್ಕ ಜಾಲ ಸಂಪೂರ್ಣ ಹದಗೆಟ್ಟಿದೆ. ಆದರೆ, ಸುಮಾರು ಒಂದೂವರೆ ತಿಂಗಳ ಕಾಲ ಚುನಾವಣಾ ಕೆಲಸ ಕಾರ್ಯಗಳಲ್ಲಿ ಮುಳುಗಿದ್ದ ಸ್ಥಳೀಯ ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು, ಚರಂಡಿಗಳ ಸ್ವಚ್ಛತೆ ಬಗ್ಗೆ ದೂರುವವರಿಗೆ ಚುನಾವಣೆ ನೆಪ ಹೇಳಿ ಸಾಗ ಹಾಕುತ್ತಿದ್ದರು. ಆದರೆ, ಲೋಕಸಭೆ ಚುನಾವಣೆ ಮತದಾನ ಮುಗಿದು ಕೆಲ ವಾರಗಳು ಕಳೆದರೂ, ನಗರಸಭೆ ಸಿಬ್ಬಂದಿ ಮಾತ್ರ ಚುನಾವಣಾ ಮೂಡ್‌ನಿಂದ ಹೊರ ಬಂದಿಲ್ಲ. ಹೀಗಾಗಿ ಹಲವು ತಿಂಗಳಿಂದ ಅವಳಿ ನಗರದಲ್ಲಿ ಚರಂಡಿ ಹಾಗೂ ರಾಜ ಕಾಲುವೆಗಳ ಸ್ವಚ್ಛತೆ ನಿರ್ವಹಣೆ ಬಗ್ಗೆ ನಗರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಸ್ವಚ್ಛತೆಗೆ ಒತ್ತುವರಿ ಅಡ್ಡಿ: ಅವಳಿ ನಗರದಲ್ಲಿ ಸುಮಾರು ನಾಲ್ಕು ರಾಜ ಕಾಲುವೆಗಳು ಹರಿಯುತ್ತಿವೆ. ಇಲ್ಲಿನ ಭೀಷ್ಮ ಕೆರೆಯಿಂದ ಆರಂಭಗೊಳ್ಳುವ ರಾಜ ಕಾಲುವೆ ಅಜಂತಾ ಹೋಟೆಲ್, ಕಮ್ಮಾರಸಾಲ, ಜವುಳ ಪ್ರದೇಶ, ಡಿಸಿ ಮಿಲ್ ರೋಡ್‌, ಎ.ಎಸ್‌.ಎಸ್‌ ಕಾಲೇಜ್‌, ಬಣ್ಣದ ನಗರ, ಹುಯಿಲಗೋಳ ರಸ್ತೆ ಮಾರ್ಗವಾಗಿ ಹರಿಯುತ್ತದೆ. ಮತ್ತೂಂದು ಕನ್ಯಾಳ ಅಗಸಿಯಿಂದ ಆರಂಭಗೊಂಡು ರೈಲ್ವೆ ಟ್ರ್ಯಾಕ್‌, ಕನ್ಯಾಳ ಅಗಸಿ ಕೆರೆ, ಗಣೇಶ ನಗರ, ಶಿವರತ್ನ ಪ್ಯಾಲೇಸ್‌ ಮಾರ್ಗವಾಗಿ ಹರಿಯುತ್ತದೆ. ಇನ್ನೊಂದು ಎಪಿಎಂಸಿಯಿಂದ ಆರಂಭಗೊಳ್ಳು ವ ರಾಜಕಾಲುವೆ ವಿಡಿಎಸ್‌ಟಿಸಿ ಶಾಲೆ ಹಿಂದುಗಡೆ, ಜಿ.ಆರ್‌.ಹೋಟೆಲ್ ಹತ್ತಿರ, ಕೆ.ಸಿ.ಪಾರ್ಕ್‌ ಹಿಂದುಗಡೆ ಮಾರ್ಗವಾಗಿ ಹಾಯ್ದು ಹೋಗುತ್ತದೆ. ಮಗದೊಂದು ರಾಜೀವಗಾಂಧಿ ನಗರದಲ್ಲಿ ಆರಂಭಗೊಂಡು ಸುಡಗಾಡಸಿದ್ಧ್ದರ ಕಾಲೋನಿ, ರಾಘವೇಂದ್ರ ಮಠ ಹಿಂಭಾಗ, ರೈಲ್ವೆ ಕ್ರಾಸ್‌, ಕನ್ಯಾಳ ಅಗಸಿ, ಅಂಬೇಡ್ಕರ್‌ ನಗರ ಮಾರ್ಗವಾಗಿ ನರಸಾಪೂರದಲ್ಲಿ ಕೂಡಿಕೊಳ್ಳುತ್ತದೆ.

ಬಹುತೇಕ ರಾಜಕಾಲುವೆಗಳು ಸುಮಾರು ನಾಲ್ಕೈದು ಕಿ.ಮೀ. ಉದ್ದ ಹರಿಯುತ್ತವೆ. ಆದರೆ, ಮಾರ್ಗ ಮಧ್ಯೆ ಅಲ್ಲಲ್ಲಿ ರಾಜಕಾರಣಿಗಳು, ಪ್ರಭಾವಿಗಳು ಹಾಗೂ ಸ್ಥಳೀಯರು ರಾಜಕಾಲುವೆಗಳನ್ನು ಒತ್ತು ವರಿ ಮಾಡಿದ್ದಾರೆ. ಕಾಲುವೆಗಳ ಒತ್ತುವರಿಯಿಂದ ಕಾಲುವೆಗಳ ಸ್ವಚ್ಛತೆಗೂ ಅಡ್ಡಿಯಾಗುತ್ತಿವೆ. ಇನ್ನು ಗುತ್ತಿಗೆದಾರರು, ಸಿಬ್ಬಂದಿಗೂ ಇಷ್ಟೇ ಸಾಕು ಎಂಬಂತೆ ಇದೇ ನೆಪದಲ್ಲಿ ಸ್ವಚ್ಛತೆಗೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಬಹುತೇಕ ಎಲ್ಲ ರಾಜಕಾಲುವೆಗಳಲ್ಲಿ ಸುಮಾರು ನಾಲ್ಕೈದು ಅಡಿಗಳಷ್ಟು ಹೂಳು, ಪ್ಲಾಸ್ಟಿಕ್‌ ತ್ಯಾಜ್ಯಗಳು ತುಂಬಿದ್ದು, ಕೊಳಚೆ ಹಾಗೂ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದೆ. ಮಳೆಗಾಲ ಸಂದರ್ಭದಲ್ಲಿ ರಾಜಕಾಲುವೆ, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೇ, ಸುತ್ತಮುತ್ತಲಿನ ಮಳೆಗಳಿಗೆ ನುಗ್ಗಿ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ಸ್ಲಂ ನಿವಾಸಿಗಳ ದೂರು.

ಗಬ್ಬೆದ್ದು ನಾರುತ್ತಿವೆ ಕಾಲುವೆಗಳು: ಇಲ್ಲಿನ ಜವಳ ಗಲ್ಲಿ, ಖಾನತೋಟ, ಡಿಸಿ ಮಿಲ್, ಬೆಟಗೇರಿಯ ಹಲವು ಭಾಗಗಳಲ್ಲಿ ಮನೆ ಮುಂಭಾಗದ ಚರಂಡಿಗಳೂ ತ್ಯಾಜ್ಯದಿಂದ ತುಂಬಿ ತುಳುಕುತ್ತಿವೆ. ಅಲ್ಲದೇ, ಕೆಲವರು ಒಳಚರಂಡಿ ನೀರನ್ನೂ ತೆರೆದ ಚರಂಡಿಗಳಿಗೆ ಹರಿಸುತ್ತಿದ್ದರಿಂದ ವಿವಿಧೆಡೆ ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ ಎನ್ನುತ್ತಾರೆ ಖಾನತೋಂಟದ ನಿವಾಸಿ ಅಸ್ಲಂ ಬಾಷಾ.

Advertisement

ನಗರಸಭೆಯಲ್ಲಿ ಪರಿಸರ ಅಭಿಯಂತರ ಹುದ್ದೆ ಖಾಲಿ ಇರುವುದು, ಪೌರ ಕಾರ್ಮಿಕರ ಕೊರತೆ, ಸಕಾಲಕ್ಕೆ ವೇತನ ಆಗದಿರುವುದು ಹಾಗೂ ಪೌರ ಕಾರ್ಮಿಕ ಮೇಲೆ ಮೇಲಧಿಕಾರಿಗಳಿಗೆ ಹಿಡಿತವೇ ಇಲ್ಲದಂತಾಗಿದೆ. ಹೀಗಾಗಿ ಅವಳಿ ನಗರದಲ್ಲಿ ಯಾವ ಭಾಗಕ್ಕೆ ಹೋದರೂ, ಚರಂಡಿಗಳಿಂದ ಹರಡುವ ದುವಾರ್ಸನೆಯಿಂದ ಜನರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

•ರಾಘವೇಂದ್ರ ಯಳವತ್ತಿ, ನಗರಸಭೆ ಮಾಜಿ ಸದಸ್ಯ.

ನಾನು ಚುನಾವಣಾ ಸಂದರ್ಭದಲ್ಲಿ ಇಲ್ಲಿಗೆ ವರ್ಗಾವಣೆಯಾಗಿದ್ದರಿಂದ ಚರಂಡಿಗಳ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಅಲ್ಲದೇ, ಕೆಲ ದಿನಗಳಿಂದ ಜೆಸಿಬಿ ದುರಸ್ತಿಯಲ್ಲಿದ್ದರಿಂದ ಸ್ವಚ್ಛತೆಗೆ ಹಿನ್ನಡೆಯಾಗಿರಬಹುದು. ಈ ಕೂಡಲೇ ಸಂಬಂಧಿಸಿದ ಸಿಬ್ಬಂದಿಗೆ ಸೂಚಿಸಿ, ಮೂರು ದಿನಗಳಲ್ಲಿ ಸ್ವಚ್ಛಗೊಳಿಸುವಂತೆ ಆದೇಶಿಸುತ್ತೇನೆ.

•ದೀಪಕ ಹರಡಿ, ನಗರಸಭೆ ಪೌರಾಯುಕ್ತರು.

Advertisement

Udayavani is now on Telegram. Click here to join our channel and stay updated with the latest news.

Next