ಬೈಂದೂರು: ಇತ್ತೀಚೆಗಿನ ಕೆಲವು ಇಲಾಖೆಯ ನಡವಳಿಕೆಗಳು ವಾಸ್ತವವೊ ಅಥವಾ ಸಿನಿಮಾದ ದೃಶ್ಯವೊ ಎಂದು ಯೋಚಿಸುವಂತೆ ಮಾಡುತ್ತಿದೆ. ಕಾನೂನು ಪಾಲಿಸಬೇಕಾದ ಇಲಾಖೆಯ ಅಧಿಕಾರಿಗಳು ಕಣ್ಣೆದುರೆ ಕಾನೂನು ಬಾಹಿರ ಚಟುವಟಿಕೆ ನಡೆದರೂ ನಾಟಕೀಯವಾಗಿ ಕಾನೂನು ಕ್ರಮ ಕೈಗೊಳ್ಳುವ ಕಣ್ಣುಮುಚ್ಚಾಲೆಯಾಟ ಆಡಿದ ಘಟನೆ ಬೈಂದೂರು ಭಾಗದಲ್ಲಿ ಕಳೆದೆರಡು ದಿನಗಳಲ್ಲಿ ನಡೆದಿದೆ.
Advertisement
ಏನಿದು ಘಟನೆತಾಲೂಕು ಕೇಂದ್ರವಾಗಿ ಘೋಷಣೆಯಾದ ಬೈಂದೂರು ಅತ್ಯಂತ ವಿಶಾಲ ವ್ಯಾಪ್ತಿ, ಜನಸಂಖ್ಯೆಯ ಅಧಿಕ ಸಾಂದ್ರತೆಯಿದ್ದರೂ ಪಟ್ಟಣ ಪ್ರದೇಶ ಮಾತ್ರ ಸೀಮಿತ ವ್ಯಾಪ್ತಿ ಹೊಂದಿದೆ.
ಸರಕಾರ ಇತ್ತೀಚೆಗೆ ಹೆದ್ದಾರಿ ಸಮೀಪವಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕೆನ್ನುವ ಮಹತ್ವಾಕಾಂಕ್ಷೆಯ ನಿರ್ಣಯದಿಂದಾಗಿ ಬಹುತೇಕ ಮದ್ಯ ಮಾರಾಟಗಾರರು ಅತಂತ್ರರಾಗುವಂತೆ ಪರಿಸ್ಥಿತಿ ಉಂಟಾಗಿರುವುದು ಎಲ್ಲಾ ಕಡೆ ಕಂಡು ಬಂದಿದೆ. ಹೊಸದಾಗಿ ಮದ್ಯದಂಗಡಿ ತೆಗೆಯುವ ಪ್ರಯತ್ನಕ್ಕೆ ನೂರೆಂಟು ವಿಘ್ನ ಒಂದೆಡೆಯಾದರೆ, ಸೂಕ್ತ ಸ್ಥಳಗಳಲ್ಲಿ ಅಂಗಡಿ ಹುಡುಕುವುದು ಇನ್ನಷ್ಟು ಸವಾಲಾಗಿ ಪರಿಣಮಿಸಿದೆ. ಇದರ ನಡುವೆ ಬೈಂದೂರು ಭಾಗದ ಬಹುತೇಕ ಮದ್ಯದಂಗಡಿ ಮಾಲಕರು ಒಳ ರಸ್ತೆಗಳಲ್ಲಿ ಪ್ರತಿಷ್ಠಿತ ಬಡಾವಣೆಗಳಲ್ಲಿ ಮದ್ಯದಂಗಡಿ ಪ್ರಾರಂಭಿಸಿದ್ದಾರೆ. ಈ ಮೂಲಕ ರಾಜಕೀಯವಾಗಿ ಪರಸ್ಪರ ಹಾವು ಮುಂಗಿಸಿಯಾದರು ಸಹ ವ್ಯವಹಾರದಲ್ಲಿ ಒಗ್ಗಟ್ಟು ತೋರಿಸುವ ವ್ಯಕ್ತಿಗತ ಹಿರಿಮೆ ತೋರಿದ್ದಾರೆ. ಇದರ ನಡುವೆ ಪ್ರತಿದಿನ ಮದ್ಯ ಸೇವಿಸದಿದ್ದರೆ ನಿದ್ರೆ ಬಾರದೆ ಪಾನಪ್ರಿಯರು ಮಾತ್ರ ಊರಲ್ಲಿರುವ ಒಂದೊಂದು ಮದ್ಯದಂಗಡಿ ಬಾಗಿಲು ಮುಚ್ಚಿರುವುದರಿಂದ ಪ್ರತಿದಿನ ಬೈಂದೂರಿಗೆ ಪ್ರಯಾಣಿಸಬೇಕಾಗಿರುವುದು ಅನಿವಾರ್ಯವಾಗಿದೆ. ಇದರಿಂದ ಬಾಟಲಿಗೆ ತಗಲುವ ದರಕ್ಕಿಂತ ವಾಹನಕ್ಕೆ ತಗಲುವ ವೆಚ್ಚವೆ ಅಧಿಕವಾಗಿದೆ. ಇಂತಹ ಸಂದಿಗ್ಧತೆ ಅರಿತ ಕೆಲವು ಗ್ರಾಮೀಣ ಭಾಗದ ಅಂಗಡಿಗಳು, ಹೊಟೇಲ್‌ಗಳು ಅನಧಿಕೃತ ಮದ್ಯ ಮಾರಾಟ ಪ್ರಾರಂಭಿಸಿವೆ. ಸಾರ್ವಜನಿಕರ ಆರೋಪ
ಮಳೆಗಾಲದ ಮಳೆಯ ಅಬ್ಬರದಲ್ಲಿ ಸಣ್ಣ ಪುಟ್ಟ ಅಂಗಡಿಗಳು ಮಿನಿ ಬಾರ್‌ಗಳಾಗಿ ಮಾರ್ಪಟ್ಟಿವೆ. ಸರಕಾರದ ಕಾನೂನುಗಳಿಂದ ಮದ್ಯ ಮುಕ್ತವಾಗಿದೆ ಎಂದು ಸಂಭ್ರಮಿಸಿದ ಮಹಿಳಾ ಸಂಘ, ಗ್ರಾಮಾಭಿವೃದ್ಧಿ ಯೋಜನೆಗಳಿಗೆ ಮಾತ್ರ ಅನಧಿಕೃತ ಮದ್ಯ ಮಾರಾಟದಿಂದ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎನ್ನುವಂತಾಗಿದೆ. ಹೀಗಾಗಿ ಮಹಿಳೆಯರು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು ಮಾತ್ರ ಹೊಟೇಲ್‌ಗಳಲ್ಲಿ ಬಿರಿಯಾನಿ ಊಟ ಮಾಡಿ ಕಾಟಾಚಾರದ ದಾಳಿ ನಡೆಸಿ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಪಡೆದು ಹೋಗಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
Related Articles
ಬೈಂದೂರು – ಶಿರೂರು ಭಾಗದಲ್ಲಿ ನಡೆದ ಅಬಕಾರಿ ದಾಳಿ ಮಾತ್ರ ಒಂಥರಾ ಸಿನಿಮೀಯ ಶೈಲಿಯ ಅನುಕರಣೆ ಎಂಬಂತಿದೆ. ಮದ್ಯ ಸಮೇತ ಸಿಕ್ಕಿ ಬಿದ್ದವರನ್ನು ವಶಕ್ಕೆ ಪಡೆದು ನಿರ್ಜನ ರಸ್ತೆಗೆ ಕರೆದೊಯ್ದ ಬಳಿಕ ಅವರನ್ನು ಮಾಲು ಸಮೇತ ಅಂಗಡಿಗೆ ಬಿಟ್ಟು ಹೋಗಿರುವುದು ಇಲಾಖೆಯ ನಾಟಕೀಯತೆಯನ್ನು ಬಿಂಬಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ಮಹಿಳಾ ಮಂಡಳಿಯವರು ಇಷ್ಟೊಂದು ಬೆಳವಣಿಗೆ ಸಾಧಿಸಿದ ಸಮಾಜದ ನಡುವೆ ಅಧಿಕಾರಿಗಳು ಈ ರೀತಿ ವರ್ತಿಸಿದರೆ ಇನ್ನು ಜನಸಾಮಾನ್ಯರು ಕಾನೂನು ಹಾಗೂ ಅಧಿಕಾರಿಗಳ ಮೇಲೆ ನಂಬಿಕೆ ಇಡುವುದಾದರೂ ಹೇಗೆ ಎನ್ನುವಂತಾಗಿದೆ ಎನ್ನುತ್ತಾರೆ.
Advertisement
ಮದ್ಯ ಬಾಟಲಿ ಹೋಮ್ ಡೆಲಿವರಿಹಿಂದೆಲ್ಲಾ ಮದ್ಯದಂಗಡಿಗೆ ಹೋಗಿ ಮದ್ಯಪಾನ ಮಾಡಬೇಕಾಗಿತ್ತು. ಆದರೆ ಬೈಂದೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಈಗ ಮೊಬೈಲ್ ಮದ್ಯ ಪೂರೈಕೆ ಪ್ರಾರಂಭವಾಗಿದೆ.ಮದ್ಯದಂಗಡಿ ಬಂದ್ ಆದ ಪರಿಣಾಮ ಕೆಲಸ ಕಳೆದುಕೊಂಡ ಹುಡುಗರು ತಮ್ಮ ಹಳೆಯ ಗಿರಾಕಿಗಳಿಗೆ ಪೋನ್ ಮೂಲಕ ಸಂಪರ್ಕಿಸಿ ಬೈಕ್ ಢಿಕ್ಕಿಯಲ್ಲಿ ಬಾಟಲಿ ಸಂಗ್ರಹಿಸಿಟ್ಟುಕೊಂಡು ಹೋಮ್ ಡೆಲಿವರಿ ಪ್ರಾರಂಭಿಸಿದ್ದಾರೆ. ಅದೇನಿದ್ದರೂ ಸಂಬಂಧಪಟ್ಟ ಇಲಾಖೆಯವರಿಗೆ ಸಾರ್ವಜನಿಕರು ದೂರು ನೀಡಿದರೂ ಕಾಟಾಚಾರದ ದಾಳಿ ಮಾಡುವ ಜತೆಗೆ ಪರೋಕ್ಷವಾಗಿ ಅನಧಿಕೃತ ಮದ್ಯ ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿರುವ ವಿಷಯ ಬೈಂದೂರು ಭಾಗದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇಲಾಖೆ ಹಳ್ಳಿ ಹಳ್ಳಿಗಳಲ್ಲಿ ಎಗ್ಗಿಲ್ಲದೆ ನಡೆಯುವ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ಸಾಮಾಜಿಕ ಸಾಮರಸ್ಯ ಕಾಪಾಡಿಕೊಳ್ಳಬೇಕಾಗಿದೆ. – ಅರುಣ ಕುಮಾರ್ ಶಿರೂರು