ಹಾರೊಲ್ಡ್ ಆಕ್ಟನ್ ಇಪ್ಪತ್ತನೆ ಶತಮಾನದಲ್ಲಿ 90 ವರ್ಷ ಬದುಕಿದ್ದ ಬ್ರಿಟಿಷ್ ಲೇಖಕ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೈಯಾಡಿಸಿದ ವ್ಯಕ್ತಿ. ತನ್ನ ಯೌವನದ ದಿನಗಳಲ್ಲೇ ಅವನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಉದಯೋನ್ಮುಖ ತರುಣ ಕವಿ ಎಂದು ಪ್ರಸಿದ್ಧನಾದವನು. ಹಾರೊಲ್ಡ್‌ಗೆ ಅದೊಂದು ದಿನ ವಿವಿಯಲ್ಲಿ ಭಾಷಣ ಮಾಡಲು ಆಮಂತ್ರಣ ಬಂತು. ಆಕ್ಸ್‌ಫರ್ಡಿನ ವಿದ್ವಜ್ಜನರೆದುರು ಕಾವ್ಯದ ಬಗ್ಗೆ ಒಂದು ತಾಸು ಮಾತಾಡಲು ಆಮಂತ್ರಣ ಸಿಗುವುದೆಂದರೆ ಅದು ದೊಡ್ಡ ಮಾತೇ ತಾನೆ? ಕಾವ್ಯದ ಬಗ್ಗೆ ಮಾತಾಡುವುದಕ್ಕಿಂತ ಒಂದು ಒಳ್ಳೆಯ ಕಾವ್ಯವನ್ನೇ ಓದಿಬಿಟ್ಟರೆ ಹೇಗೆ ಎಂಬ ಯೋಚನೆ ಹಾರೊಲ್ಡ್‌ಗೆ ಬಂತು. ಒಳ್ಳೆಯ ಕಾವ್ಯ ಎಂದ ಮೇಲೆ ಎಲಿಯೆಟ್ ಆತನ ದ ವೇಸ್ಟ್ ಲ್ಯಾಂಡ್ ಅಲ್ಲದೆ ಬೇರಾವುದು? ಸರಿ, ಅದನ್ನೇ ಓದಿಬಿಡೋಣವೆಂದು ನಿರ್ಧರಿಸಿದ.
ನೆರೆದ ಸಭಾಸದಸ್ಯರೆದುರು ಹಾರೊಲ್ಡ್ ಎಲಿಯೆಟ್‌ನ ಆ ದೀರ್ಘಕತೆಯನ್ನು ಘನಗಂಭೀರ ಧಾಟಿಯಲ್ಲಿ ಎಲ್ಲ ಹಾವಭಾವಗಳೊಡನೆ ಓದತೊಡಗಿದ. ಅದುವರೆಗೆ ಹಕ್ಕಿ, ಆಕಾಶ, ಚಂದ್ರ, ಹೂವು ಮುಂತಾದ ಸರಳ ವಿಷಯಗಳ ಮೇಲೆ ಸರಳ ಪದ್ಯಗಳನ್ನಷ್ಟೇ ಓದಿ, ಕೇಳಿ ಗೊತ್ತಿದ್ದ ಮಂದಿಗೆ ಗೊಂಡಾರಣ್ಯದಂತಿದ್ದ ಈ ಸಂಕೀರ್ಣ ಪದ್ಯವನ್ನು ಕೇಳುತ್ತ, ತಾವು ಕೇಳುತ್ತಿರುವುದು ನಿಜವಾಗಿಯೂ ಏನು ಎಂಬುದೇ ಕ್ಷಣಕಾಲ ತಿಳಿಯಲಿಲ್ಲ! ಹತ್ತಿಪ್ಪತ್ತು ನಿಮಿಷವಾದರೂ ಹಾರೊಲ್ಡ್‌ನ ಕತೆಯ ಓದು ನಿಂತಿರಲಿಲ್ಲ. ಪ್ರೇಕ್ಷಕರಾಗಿ ಕೂತಿದ್ದವರಿಗೆ ಅಸಹನೆಯ ಕಟ್ಟೆಯೊಡೆಯಿತು.
ಕೆಲವರು ಛಾವಣಿ ನೋಡಿದರು, ಇನ್ನುಳಿದವರು ಆಕಳಿಸಿದರು. ಸಭೆಯಲ್ಲಿ ಎದ್ದುಹೋಗುವುದು ಅನುಚಿತವೆಂದು ಪರಿಗಣಿತವಾಗಿದ್ದ ಕಾಲವಾದ್ದರಿಂದ ಶಿಷ್ಟಾಚಾರ ಮುರಿಯಲಿಚ್ಛಿಸದ ಮಂದಿ ಯಾರಿಗೂ ಕಾಣದಂತೆ ಬಗ್ಗಿ ನಾಲ್ಕು ಕಾಲುಗಳಲ್ಲಿ ನಡೆದು ಸಭೆಯಿಂದ ಹೊರಹೋದರು! ಪದ್ಯವನ್ನು ಮುಗಿಸಿದಾಗಲೂ ಬಹಳಷ್ಟು ಮಂದಿಗೆ ಮುಗಿಯಿತು ಎಂಬುದು ಗೊತ್ತಾಗಲಿಲ್ಲ. ಓದು ನಿಲ್ಲಿಸಿ ಎಲ್ಲರಿಗೂ ವಂದಿಸಿ ಹಾರೊಲ್ಡ್ ಕುರ್ಚಿಯಲ್ಲಿ ಕೂತಾಗ ಅಳಿದುಳಿದವರು ಖುಷಿಯಿಂದ ಭಾರೀ ಕರತಾಡನ ಮಾಡಿದರು. ಕಾವ್ಯದ ಗೂಢಾರ್ಥ ಗಾಢಾರ್ಥಗಳನ್ನೆಲ್ಲ ಅರೆದುಕುಡಿದಿದ್ದ ಪಂಡಿತನಿಗೆ ಆ ಕರತಾಡನದ ಅರ್ಥ ಮಾತ್ರ ಆಗಲಿಲ್ಲ!
ರೋಹಿತ್ ಚಕ್ರತೀರ್ಥ