ಅಲ್ಲಿ ಬರೀ ರಾಗಗಳದ್ದೇ ಕಾರುಬಾರು. ಒಂದು ಕಡೆ ಕೊಳಲು, ಇನ್ನೊಂದು ಕಡೆ ಪಿಟೀಲು, ಮತ್ತೂಂದು ಕಡೆ ತಬಲ, ಮಗದೊಂದು ಕಡೆ ಕೀ ಬೋರ್ಡ್ ಮತ್ತು ಡ್ರಮ್ಸ್ ಇತ್ಯಾದಿ. ಅದು ಕಲರ್‌ಫುಲ್ ವೇದಿಕೆ. ಅಲ್ಲಿ ಈ ಸಂಗೀತ ಉಪಕರಣಗಳದ್ದೇ ಸಡಗರ. ಆ ಸಂಭ್ರಮದಲ್ಲಿ ಮಿಂದೆದ್ದವರ ಖುಷಿಗೆ ಪಾರವೇ ಇಲ್ಲ. ಅಲ್ಲಿ ಮೇಳೈಸಿದ್ದು ಮನಸುಗಳ ರಾಗ, ಭಾವನೆಗಳ ರಾಗ, ಮಾತುಗಳ ರಾಗ, ಸಂತಸದ ರಾಗ. ಹೌದು, ಇದೆಲ್ಲಾ ಕಂಡು ಬಂದದ್ದು “ರಾಗ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ.
ಹಾಸ್ಯ ನಟ ಮಿತ್ರ ನಿರ್ಮಿಸಿ, ನಟಿಸಿರುವ “ರಾಗ’ ಚಿತ್ರದ ಆಡಿಯೋ ಸಿಡಿ ರಿಲೀಸ್ ಹಲವು ಸಂಭ್ರಮ ಮತ್ತು ಪ್ರಥಮಗಳಿಗೆ ಸಾಕ್ಷಿಯಾಯಿತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ “ಮ್ಯೂಸಿಕಲ್ ನೈಟ್’ ಕಾರ್ಯಕ್ರಮ ಮೂಲಕ “ರಾಗ’ ಹಾಡುಗಳನ್ನು ಗಾಯಕರಿಂದ ಹಾಡಿಸಿ ರಂಜಿಸಿದರು. ಆ ಕಾರ್ಯಕ್ರಮದಲ್ಲೊಂದು ವಿಶೇಷತೆಯೂ ಇತ್ತು. “ರಾಗ’ ಅಂಧ ಪ್ರೇಮಿಗಳಿಬ್ಬರ ಸಿನಿಮಾ. ಹಾಗಾಗಿ ಅಂದು ಅಂಧರ ವಿಶ್ವಕಪ್ ಕ್ರಿಕೆಟ್ ನಾಯಕ ಶೇಖರ್ ನಾಯ್ಕ ಅಂದಿನ ಮುಖ್ಯ ಆಕರ್ಷಣೆಯಾಗಿದ್ದರು. ಈ ಸಲದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅಂಧ ಕ್ರಿಕೆಟಿಗ ಶೇಖರ್‌ನಾಯ್ಕ ಅವರಿಂದ ಒಂದು ಹಾಡನ್ನು ರಿಲೀಸ್ ಮಾಡಿಸುವ ಮೂಲಕ ಚಿತ್ರತಂಡ ಸಾರ್ಥಕತೆ ಕಂಡಿತು.
ಅಂದು ಇನ್ನೂಒಂದು ವಿಶೇಷವಿತ್ತು. ಹೇಳಿಕೇಳಿ, “ರಾಗ’ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ 70 ನೇ ಚಿತ್ರ. ಆ ಖುಷಿಗೆ ಚಿತ್ರತಂಡ ಕೇಕ್ ಕತ್ತರಿಸಿ ಸಂಭ್ರಮಿಸಿತು. ಇನ್ನು, ಸ್ಟಾರ್ ಸಿನಿಮಾಗಳ ಆಡಿಯೋ ಹಕ್ಕನ್ನಷ್ಟೇ ಖರೀದಿಸುತ್ತಿದ್ದ ಜೀ ಮ್ಯೂಸಿಕ್ಸ್ ಯಾವುದೇ ಸ್ಟಾರ್ ಇಲ್ಲದ “ರಾಗ’ದ ಹಾಡುಗಳನ್ನು ಕೇಳಿ ಆಡಿಯೋ ಹಕ್ಕು ಪಡೆದಿದ್ದರ ಬಗ್ಗೆ ಮಿತ್ರ ಖುಷಿಯಿಂದ ಹೇಳಿಕೊಂಡರು. ಅಷ್ಟೇ ಅಲ್ಲ, “ರಾಗ’ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕನ್ನೂ ಜೀ ಮ್ಯೂಸಿಕ್ಸ್ ಪಡೆದಿದೆ ಎಂದು ಘೋಷಿಸಿದ ಮಿತ್ರ, “ನಮ್ಮಂತಹವರೂ ಹೀರೋ ಆಗಬಹುದು ಎಂಬುದನ್ನು “ರಾಗ’ ಸಾಬೀತುಪಡಿಸಿದೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆ “ರಾಗ’ ಮೇಲಿರಲಿ ಅಂದರು ಮಿತ್ರ.
ಇದೇ ವೇಳೆ, ನಾನು ಇಂದು ಹಾಸ್ಯ ನಟನಾಗಿ, ಈಗ ನಿರ್ಮಾಪಕನಾಗಲು ಕಾರಣ, ಮೊದಲ ಅವಕಾಶ ಕೊಟ್ಟ ಸಿಹಿಕಹಿ ಚಂದ್ರು, ಗೀತಾ ದಂಪತಿ ಅಂತ ಅವರನ್ನು ವೇದಿಕೆಗೆ ಕರೆದು ಗೌರವಿಸಿದರು. ನಿರ್ದೇಶಕ ಪಿ.ಸಿ.ಶೇಖರ್ ಹಾಡುಗಳ ಸಂದರ್ಭ ವಿವರಿಸಿದರು. ಕವಿರಾಜ್ ಹಾಡು ಹುಟ್ಟಿದ ಸಮಯದ ಬಗ್ಗೆ ಹೇಳಿಕೊಂಡರು. ಅರ್ಜುನ್ ಜನ್ಯ ವಿಶೇಷವಾಗಿ ರಾಗ ಸಂಯೋಜಿಸಿದ್ದನ್ನು ಹೇಳಿಕೊಂಡರು. ನಟ ಶ್ರೀನಗರ ಕಿಟ್ಟಿ, ಭಾವನಾ, ಜೈ ಜಗದೀಶ್, ವಿಜಯಲಕ್ಷ್ಮೀ ಸಿಂಗ್, ಕವಿರಾಜ್, ಹರ್ಷಿಕಾ ಪೊಣಚ್ಚ ಇವರೆಲ್ಲರೂ ಒಂದೊಂದು ಹಾಡು ರಿಲೀಸ್ ಮಾಡುವ ಹೊತ್ತಿಗೆ ವೇದಿಕೆ ಮೇಲೆ ಅರ್ಜುನ್ ಜನ್ಯ ತಂಡ “ರಾಗ’ದ ಹಾಡುಗಳನ್ನು ಹಾಡಿ ಕಿಕ್ಕಿರಿದ್ದಿದ ಜನರನ್ನು ರಂಜಿಸಿತು. ಕಾರ್ಯಕ್ರಮ ಮುಗಿಯೋ ಹೊತ್ತಿಗೆ, ಸಭಾಂಗಣದಲ್ಲಿದ್ದ ಎಲ್ಲರನ್ನೂ ವೇದಿಕೆ ಮುಂಭಾಗಕ್ಕೆ ಕರೆದ ಮಿತ್ರ, ಅವರೆಲ್ಲರ ಕೈಗೂ ಒಂದೊಂದು ಆಡಿಯೋ ಸಿಡಿ ಕೊಟ್ಟು, “ರಾಗ’ ಜತೆ ಬೆರೆಸಿಕೊಂಡರು. ಎಲ್ಲಾ ಮುಗಿದು, ಫೋಟೋ ಸೆಷನ್ ಮುಗಿದು ಹೊರಡುವಾಗ ಎಲ್ಲರ ಬಾಯಲ್ಲೂ “ಆಲಿಸು ಬಾ, ಆಲಿಸು ಬಾ ಮೌನಗಳ ರಾಗ…’ ಹಾಡು ಗುನುಗುತ್ತಿತ್ತು.
– ವಿಭ