ಕೋಲಾರ: ಆರ್ಯವೈಶ್ಯ ಸಮುದಾಯ ವ್ಯಾಪಾರದ ಜೊತೆಗೆ ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಗೆ ಬಂದು ಆಡಳಿತ ನಡೆಸುವಂತಾಗಬೇಕೆಂದು ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಆಶಿಸಿದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಭಾನುವಾರ ಆಯೋಜಿಸಿದ್ದ 10ನೇ ವರ್ಷದ ರಾಜ್ಯ ಮಟ್ಟದ ಪ್ರತಿಭೋತ್ಸವದ ಮೆರವಣಿಗೆಗೆ ಕಠಾರಿಪಾಳ್ಯದ ಸರ್ಕಾರಿ ಶಾಲೆ ಆವರಣ ದಲ್ಲಿ ಚಾಲನೆ ನೀಡಿ ಮಾತನಾಡಿ, ಆರ್ಯವೈಶ್ಯ ಸಮುದಾಯ ವ್ಯಾಪಾರದ ಕಡೆ ನೀಡುವ ಒತ್ತನ್ನು ಮಕ್ಕಳ ಶಿಕ್ಷಣಕ್ಕೆ ನೀಡಿಲಿ. ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನಾಗಿಸಿ ಆಡಳಿತ ದಲ್ಲಿ ಭಾಗಿದಾರರನ್ನಾಗಿಸಿ, ಅಂತೆಯೇ ರಾಜಕೀಯವಾಗಿಯೂ ಮುನ್ನಲೆಗೆ ಬರಬೇಕು ಎಂದು ಹೇಳಿದರು.
ಶನಿವಾರ ನಡೆದ ಶ್ರೀನಿವಾಸ ಕಲ್ಯಾಣೋತ್ಸವದ ವೇಳೆ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ನಿಮ್ಮ ಸೇವೆ ಭಗವಂತನಿಗೆ ತಲುಪಿದೆ. ಭಗವಂತನ ಸೇವೆ ಮುಂದುವರಿಸಿ ಎಂದು ನುಡಿದರು.
ಉತ್ತಮ ಮಳೆ: ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಜಿಲ್ಲೆ ಸತತ ಬರಗಾಲ ಎದುರಿಸುತ್ತಿದೆ. ಈ ವರ್ಷವೂ ಮಳೆಯಾಗಿರಲಿಲ್ಲ. ಕಲ್ಯಾಣೋತ್ಸವದ ವೇಳೆ ಭಾರೀ ಮಳೆಯಾಗಿ 65 ರಿಂದ 75 ಮಿಮೀ ಮಳೆ ದಾಖಲಾಗಿದೆ. ಜಿಲ್ಲಾದ್ಯಂತ ಮಳೆಯಾಗಿರುವುದರಿಂದ ಜಿಲ್ಲಾಡಳಿತದ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು. ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್, ಸಮಿತಿ ಅಧ್ಯಕ್ಷ ಕೆ.ವಿ.ರಾಮಪ್ರಸಾದ್, ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಆರ್. ಶಿವಪ್ರಕಾಶ್ ಇತರರಿದ್ದರು.
ಅದ್ಧೂರಿ ಮೆರವಣಿಗೆ: ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋ ತ್ತರ, ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿ ಗಳನ್ನು 10ಕ್ಕೂ ಹೆಚ್ಚು ಬೆಳ್ಳಿ ಪಲ್ಲಕಿ, ಕುದುರೆ ಸಾರೋಟು, ಕುದುರೆಗಳ ಮೇಲೆ ಕುಳ್ಳಿರಿಸಿ ನಗರದಾದ್ಯಂತ ಮೆರವಣಿಗೆ ನಡೆಸಲಾಯಿತು. ಸುಮಾರು 850ಕ್ಕೂ ಹೆಚ್ಚು ಪ್ರತಿಭಾ ಪುರಸ್ಕೃತರು ಶೋಭಾ ಯಾತ್ರೆಯಲ್ಲಿ ಸಾಗುತ್ತಿದ್ದಂತೆ ವಿವಿಧೆಡೆ ಪುಷ್ಪವೃಷ್ಟಿ ಸುರಿಸ ಲಾಯಿತು. ಡೊಳ್ಳುಕುಣಿತ, ದೇವರುಗಳ ದ್ವಿಪಾತ್ರ ಪ್ರದರ್ಶನ, ವೀರಗಾಸೆ, ಡೊಳ್ಳುಕುಣಿತ ವಿವಿಧ ಜಾನಪದ ಕಲಾ ಪ್ರಕಾರಗಳು ಗಮನ ಸೆಳೆಯಿತು.
ಅಂಬಾರಿ ಮೆರವಣಿಗೆ: ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಿಯನ್ನು ಅಂಬಾರಿಯಲ್ಲಿಟ್ಟು, ಮೆರವಣಿಗೆ ನಡೆಸಲಾಯಿತು. ಸಾರ್ವಜನಿಕರನ್ನು ಕಂಡು ಆನೆ ಬೆದರದಂತೆ ಎರಡು ಸುತ್ತಿನ ರಕ್ಷಣಾ ಕೋಟೆಯಲ್ಲಿ ಕರೆದೊಯ್ಯಲಾಯಿತು. ಸಮುದಾಯದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.