ಮಡಿಕೇರಿ : ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡುವ ಹಾಗೂ ಸ್ಥಳದಲ್ಲೇ ಪ್ರವೇಶಾತಿ ಪಡೆಯುವ ನಿಟ್ಟಿನಲ್ಲಿ ಜೂ.30ರಂದು ಕ್ಯಾಂಪಸ್ ನೋಡಬನ್ನಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಕಾಲೇಜ್‌ನ ಪ್ರಾಂಶುಪಾಲೆ ಡಾ|| ಎ.ಎ.ಪಾರ್ವತಿ ಈ ಕುರಿತು ಮಾಹಿತಿ ನೀಡಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಎಲ್ಲಾ ವರ್ಗ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯದೊಂದಿಗೆ ಉತ್ತಮ ಬೋಧನಾ ವ್ಯವಸ್ಥೆಯಿದ್ದು, ಕೊಡಗಿನ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಾಗಿ ದೂರದ ಮೈಸೂರು, ಬೆಂಗಳೂರು, ಮಂಗಳೂರಿಗೆ ತೆರಳಬೇಕಾದ ಅವಶ್ಯಕತೆಯಿಲ್ಲ ಎಂದರು. ಕಾಲೇಜ್‌ನ ಫಲಿತಾಂಶವೂ ಉತ್ತಮವಾಗಿದ್ದು, ಕಳೆದ ಸಾಲಿನಲ್ಲಿ 5 ರ್‍ಯಾಂಕ್‌ಗಳು ಕೂಡಾ ಲಭ್ಯವಾಗಿದೆ ಎಂದು ವಿವರಿಸಿದರು.
ಈಗಾಗಲೇ ವಿಜ್ಞಾನ ವಿಭಾಗದಲ್ಲಿ ಎಂಎಸ್ಸಿ ಭೌತಶಾಸ್ತ್ರ, ಕಲಾ ವಿಭಾಗದಲ್ಲಿ ಇಂಗ್ಲೀಷ್ ಮತ್ತು ಎಂ.ಎ.ಅರ್ಥಶಾಸ್ತ್ರ ಮತ್ತು ವಾಣಿಜ್ಯ ವಿಭಾಗದಲ್ಲಿ ಎಂ.ಬಿ.ಎ (ಟ್ರಾವೆಲ್ ಆಂಡ್ ಟೂರಿಸಂ ಮ್ಯಾನೇಜ್‌ಮೆಂಟ್) ಎಂ.ಕಾ, ಯೋಗ ವಿಜ್ಞಾನದಲ್ಲಿ ಪಿಜಿ ಡಿಪ್ಲೊಮಾ ಸೇರಿದಂತೆ ಆರು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿದ್ದು, ಈ ಎಲ್ಲಾ ಕೋರ್ಸ್‌ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಕಾಲೇಜು ನೀಡುತ್ತಿರುವ ವಿವಿಧ ಕೋರ್ಸ್‌ಗಳು ಮತ್ತು ತತ್ಸಂಬಂಧಿ ಸೌಲಭ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಕಾಲೇಜಿನಲ್ಲಿಕ್ಯಾಂಪಸ್ ನೋಡಬನ್ನಿ ಕಾರ್ಯಕ್ರಮ ನಡೆಸುತ್ತಿರುವುದಾಗಿ ಹೇಳಿದರು.
ಒಂದೇ ಅರ್ಜಿಯಲ್ಲಿ ಆದ್ಯತೆಯ ಮೇರೆಗೆ ಕೋರ್ಸ್‌ಗಳ ಅಯ್ಕೆಯನ್ನು ನಮೂದಿಸಬಹುದಾಗಿದ್ದು, ಈ ಉದ್ದೇಶದಿಂದಲೇ ಕ್ಯಾಂಪಸ್ ನೋಡಬನ್ನಿ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರವನ° ತೆರೆಯಲಾಗುವುದೆಂದ ಅವರು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಜೂ.30ರ ಬೆಳಗ್ಗೆ 10.30ರಿಂದ ನಡೆಯುವ ಕಾರ್ಯಕ್ರಮವನ್ನು ವೀರಾಜಪೇಟೆಯ ಖ್ಯಾತ ವಕೀಲ ಬಿ.ಬಿ.ಮಾದಪ್ಪ ಅವರು ಉದ್ಘಾಟಲಿಸಲಿದ್ದಾರೆ ಎಂದು ತಿಳಿಸಿದರು.
ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|| ಜಗನ್ನಾಥ್ ಅವರು ಮಾತನಾಡಿ, ಕಾಲೇಜಿನಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೂ ಅವಕಾಶವಿದ್ದು, ಈಗಾಗಲೇ 11 ಮಂದಿ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ 24 ಮಂದಿ ವಿವಿಧ ವಿಷಯಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ರಚಿಸುವ ಮೂಲಕ ಡಾಕ್ಟರೇಟ್‌ಗೆ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರಲ್ಲದೆ, ಕಾಲೇಜಿನಲ್ಲಿ ಎಂ.ಕಾಂ ಸೇರಿದಂತೆ ಕೆಲವು ವಿಭಾಗಗಳಿಗೆ ಭಾರೀ ಬೇಡಿಕೆ ಇದೆ. ಇದರೊಂದಿಗೆ ಕ್ಯಾಂಪಸ್ ಸೆಲೆಕ್ಷನ್ ಸೌಲಭ್ಯವೂ ಇದ್ದು, ಈಗಾಗಲೇ ಹಲವಾರು ಮಂದಿ ಉದ್ಯೋಗ ಪಡೆದಿದ್ದಾರೆ ಎಂದು ತಿಳಿಸಿದರು. ಡಾ|ಶ್ರೀಧರ ಹೆಗಡೆ, ತಿಮ್ಮಯ್ಯ ಹಾಗೂ ವಿಜಯಲತಾ ಉಪಸ್ಥಿತರಿದ್ದರು.
ಪ್ರಾಧ್ಯಾಪಕರ ಜತೆಗೆ ಸಮಾಲೋಚನೆ ಅವಕಾಶ
ವಿವಿಧ ಸ್ನಾತಕೋತ್ತರ ಕೋರ್ಸ್‌ಗಳನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಆಯಾ ವಿಭಾಗಕ್ಕೆ ಭೇಟಿ ನೀಡಿ, ಅಲ್ಲಿನ ಪ್ರಾಧ್ಯಾಪಕರ ಜತೆಗೆ ನೇರವಾಗಿ ಸಮಾಲೋಚನೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತಿ ಇರುವ ಕೋರ್ಸ್‌ಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿಯೇ ಅರ್ಜಿಗಳನ್ನು ಪಡೆಯಬಹುದು ಮತ್ತು ಸ್ನಾತಕೋತ್ತರ ಪದವಿಯ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದು ಕಾಲೇಜ್‌ನ ಪ್ರಾಂಶುಪಾಲೆ ಡಾ|| ಎ.ಎ.ಪಾರ್ವತಿ ತಿಳಿಸಿದರು.