Advertisement

ಮತ್ತೊಮ್ಮೆ ಮಂಗಳೂರಿಗೆ ಬಂದೇ ಬರುವೆ ; ನಗರದಲ್ಲಿ ಚಿಕಿತ್ಸೆ ಪಡೆದ ಸ್ಪಾನಿಶ್‌ ಯುವತಿ

08:30 AM May 17, 2020 | Sriram |

ಮಂಗಳೂರು: ಮಂಗಳೂರಿಗರ ಆತಿಥ್ಯ, ಇಲ್ಲಿನ ವಾತಾವರಣ ತುಂಬಾ ಹಿಡಿಸಿದೆ. ಮತ್ತೊಮ್ಮೆ ಇಲ್ಲಿಗೆ ಬಂದೇ ಬರುತ್ತೇನೆ…

Advertisement

ಇದು ಸ್ಪಾನಿಶ್‌ ಯುವತಿ ಮಾರ್ಥಾ ಮಾರ್ಟಿನ್‌ ಇಸ್ಲಸ್‌ ಅವರ ಅಭಿಮಾನದ ನುಡಿ. ಈ ಅಭಿಮಾನಕ್ಕೆ ಕಾರಣ ಅರಿವಾಗಬೇಕಾದರೆ ಈ ವರ್ಷದ ಜನವರಿಯಿಂದ ಆರಂಭಗೊಂಡ ಅವರ ಭಾರತ ಪ್ರವಾಸ ಹಠಾತ್ತಾಗಿ ಮಂಗಳೂರಿನಲ್ಲಿ ಹಾಸಿಗೆ ಹಿಡಿಯಿತೇಕೆ ಎಂಬುದನ್ನು ತಿಳಿಯಬೇಕು.

24 ವರ್ಷದ ಯುವತಿ ಮಾರ್ಥಾ ನೃತ್ಯಗಾತಿ, ಮನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಜ. 9ರಂದು ಕೋಲ್ಕತ್ತಕ್ಕೆ ಬಂದಿಳಿದಿದ್ದರು. ಪ್ರವಾಸದ ದಾರಿಯಲ್ಲಿ ಫೆಬ್ರವರಿ ಮೊದಲ ವಾರ ಗೋಕರ್ಣ ತಲುಪಿದ್ದರು.

ಗೋಕರ್ಣದಲ್ಲಿ ಮಾರ್ಥಾಗೆ ಸುಕೇಶ್‌ ಎಂಬ ಬೆಂಗಳೂರಿನ ಪ್ರವಾಸಿಯ ಪರಿಚಯವಾಯಿತು. ಫೆ. 25ರಂದು ಓಂ ಬೀಚ್‌ ಮತ್ತು ಹಾಫ್ ಮೂನ್‌ ಬೀಚ್‌ ನಡುವೆ ಬೆಟ್ಟ ಏರುವ ಸಾಹಸದಲ್ಲಿದ್ದಾಗ ಆರೇಳು ಮೀ. ಆಳದ ಕೊರಕಲಿಗೆ ಬಿದ್ದು ಮಾರ್ಥಾ ಕಾಲು, ಕೈ ಮುರಿದುಕೊಂಡದ್ದಲ್ಲದೆ ಬೆನ್ನಿಗೂ ಗಂಭೀರ ಏಟು ಮಾಡಿಕೊಂಡರು. ಆಗ ಸಹಾಯಕ್ಕೆ ಬಂದದ್ದು ಸುಕೇಶ್‌ ಅವರ ಫೋನ್‌. ಸುಕೇಶ್‌ ಮತ್ತು ಇನ್ನಿಬ್ಬರು ವಿದೇಶೀಯರು ಧಾವಿಸಿ ಬಂದು ಒಂದೂವರೆ ತಾಸು ಹುಡುಕಾಟ ನಡೆಸಿ ಮಾರ್ಥಾರನ್ನು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಸುಕೇಶ್‌ ಅವರೇ ತನಗೆ ಪರಿಚಯವಿದ್ದ ನಿರ್ಮಲಾ ಜೈನ್‌ ಮತ್ತವರ ಪತಿಯ ಮೂಲಕ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ತಾಯಿಯೂ ಬಂದರು
ಸುಕೇಶ್‌ ಮೂಲಕ ವಿಷಯ ತಿಳಿದ ಮಾರ್ಥಾಳ ತಾಯಿ ಡಾ| ಡಯಾನಾ ಇಸ್ಲಸ್‌ ಫೆ. 29ರಂದು ಮಂಗಳೂರಿಗೆ ಬಂದರು. ಬಲವಾದ ಪೆಟ್ಟು ಬಿದ್ದದ್ದರಿಂದ ಮಾರ್ಥಾಗೆ ನಾಲ್ಕು ರೀತಿಯ ಶಸ್ತ್ರಚಿಕಿತ್ಸೆಗಳು ನಡೆದವು.

Advertisement

ಹೊರಡುವಷ್ಟರಲ್ಲಿ ಲಾಕ್‌ಡೌನ್‌ ತಡೆ
ಎ. 2ರಂದು ಕೊನೆಯ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ತಾಯಿ-ಪುತ್ರಿ ಸ್ಪೇನ್‌ಗೆ ಮರಳುವವರಿದ್ದರು. ಆದರೆ ಮಾ. 23ರಿಂದ ಆರಂಭವಾದ ಲಾಕ್‌ಡೌನ್‌ ತಡೆ ಯಾಯಿತು. ಹೀಗೆ ಮಂಗಳೂರಿನ ಆತಿಥ್ಯವನ್ನು ಅನಿವಾರ್ಯವಾದರೂ ಸಿಹಿಯಾಗಿ ಅನುಭವಿಸಿದ ಅವರು ಈಗ ಕರಾವಳಿಯ, ತುಳುನಾಡಿನವರ ಅಭಿಮಾನಿಗಳೇ ಆಗಿದ್ದಾರೆ; ತಮ್ಮ ಬದುಕಿನಲ್ಲೂ ಇಲ್ಲಿಯ ರೀತಿ ನೀತಿಗಳನ್ನು ಒಂದಿಷ್ಟು ಇಳಿಸಿಕೊಂಡಿದ್ದಾರೆ.
ಮಂಗಳೂರಿಗರು ಹೃದಯವಂತರು. ವೈದ್ಯರು, ನರ್ಸ್‌, ಸಿಬಂದಿ ಎಲ್ಲರೂ ಚೆನ್ನಾಗಿ ನೋಡಿ ಕೊಂಡಿದ್ದಾರೆ. ಮನೆಯಲ್ಲಿ ಉಳಿದುಕೊಳ್ಳಲು ಜಾಗ ಒದಗಿಸಿ, ಆತಿಥ್ಯ ನೀಡಿದ ನಿರ್ಮಲಾ ಜೈನ್‌ರಿಗೆ ಋಣಿಯಾಗಿದ್ದೇವೆ ಎಂದು “ಉದಯವಾಣಿ’ ಜತೆಗೆ ಕೃತಜ್ಞತೆಯ ಮಾತು ಹಂಚಿಕೊಂಡರು ಮಾರ್ಥಾ.ತಾಯಿ-ಮಗಳು ಗುರುವಾರ ಬೆಂಗಳೂರಿಗೆ, ಶುಕ್ರವಾರ ಪ್ಯಾರಿಸ್‌ ಮುಖಾಂತರ ಸ್ಪೇನ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಕೋವಿಡ್-19 ಹೆಚ್ಚಾದಾಗ ಆತಂಕ
ಭಾರತದಲ್ಲಿ ಕೋವಿಡ್-19 ಹೆಚ್ಚಾಗುತ್ತಿದ್ದಂತೆ ಸಹಜವಾಗಿಯೇ ಆತಂಕ ಆರಂಭವಾಗಿತ್ತು. ಕೊನೆಗೂ ತಾಯ್ನಾಡಿಗೆ ಮರಳುವ ದಿನ ಬಂದಿರುವುದಕ್ಕೆ ಖುಷಿಯಾಗುತ್ತಿದೆ. ಮಂಗಳೂರಿಗರಿಗೆ ತುಂಬು ಹೃದಯದ ಧನ್ಯವಾದ.
-ಡಾ| ಡಯಾನಾ ಇಸ್ಲಸ್‌ ನಾರೀಸ್‌, ಮಾರ್ಥಾರ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next