ಕಳೆದ ವರ್ಷದ ಮಾತು. ಟೈಗರ್ ಗಲ್ಲಿ ಚಿತ್ರದಲ್ಲಿನ ಜಡ್ಜ್ ಪಾತ್ರವನ್ನು ಯಾರಿಂದ ಮಾಡಿಸಬೇಕು ಎಂದು ಚರ್ಚೆ ನಡೆಯುತ್ತಿದ್ದಾಗ, “”ಲೋಕೇಶ್ ಮತ್ತು ಗಿರಿಜಾ ಲೋಕೇಶ್ ಅವರ ಮಗಳು ಪೂಜಾ ಲೋಕೇಶ್ ಅವರಿಂದ ಮಾಡಿಸಿ” ಎಂದು ಕೆ.ವಿ. ರಾಜು ಅವರು ಸಲಹೆ ನೀಡಿದರಂತೆ. ಆ ನಂತರ ನಿರ್ದೇಶಕ ರವಿ ಶ್ರೀವತ್ಸ ಹೋಗಿ ಪೂಜಾ ಅವರನ್ನು ಭೇಟಿ ಮಾಡಿ, ಕಥೆ ಹೇಳಿದ್ದಾರೆ. ತಮ್ಮ ಪಾತ್ರವನ್ನು ಇಷ್ಟಪಟ್ಟ ಪೂಜಾ, ಟೈಗರ್ ಗಲ್ಲಿ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿದ್ದಾರೆ. ಈ ಮೂಲಕ ಬಹಳ ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ವಾಪಸಾಗಿದ್ದಾರೆ.
ಬಹುಶಃ ಟೈಗರ್ ಗಲ್ಲಿ ಚಿತ್ರವು ಯಶಸ್ವಿಯಾಗಿದ್ದರೆ, ಪೂಜಾ ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದರೇನೋ? ಆದರೆ, ಟೈಗರ್ ಗಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಆ ಚಿತ್ರದ ಸೋಲಿನಿಂದ, ಪೂಜಾ ಸಹ ಎಲ್ಲಿ ಮರೆಯಾಗಿಬಿಡುತ್ತಾರೋ ಎಂದು ಕೆಲವರಿಗೆ ಅನಿಸಿತ್ತು. ಆದರೆ, ಹಾಗೇನಾಗಿಲ್ಲ. ಪೂಜಾ ಇನ್ನೊಂದು ಚಿತ್ರವನ್ನು ಸದ್ದಿಲ್ಲದೆ ಒಪ್ಪಿಕೊಂಡಿದ್ದಾರೆ. ಈ ಬಾರಿ ಅವರು ಪೋಷಕ ಪಾತ್ರದಲ್ಲಲ್ಲ, ನಾಯಕಿ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಚತುರ ಎಂಬ ಚಿತ್ರದಲ್ಲಿ ಪೂಜಾ ಲೋಕೇಶ್‌ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ.
ಇದು ತಮ್ಮ ಎರಡನೆಯ ಇನ್ನಿಂಗ್ಸ್ ಎನ್ನುತ್ತಾರೆ ಪೂಜಾ. ಇದಕ್ಕೂ ಮುನ್ನ ಕನ್ನಡದಲ್ಲಿ ಅವರು ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಪೂಜಾ, ಹುಲಿಯಾ, ಉಲ್ಟಾ ಪಲ್ಟಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಅವರು, ಒಂದು ಹಂತದಲ್ಲಿ ತಮಿಳಿಗೆ ವಲಸೆ ಹೋಗಿದ್ದರು. ಕುಂಕುಮಂ ಎಂಬ ತಮಿಳು ಧಾರಾವಾಹಿ ಯಲ್ಲಿ ನಟಿಸಿ ಜನಪ್ರಿಯ ರಾದ ಅವರು, ನಂತರದ ದಿನಗಳಲ್ಲಿ ಮುಂದಾನೈ ಮುಡಿಚ್ಚು, ಕಲ್ಕಿ, ಸೆಲ್ವಿ, ಗೀತಾಂಜಲಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದರು. ಇದಲ್ಲದೆ ಕೆಲವು ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟ ಅವರು ಸಾಕಷ್ಟು ಜನಪ್ರಿಯರಾಗಿದ್ದರು. ಹೀಗಿರುವಾಗಲೇ ಅವರು ಟೈಗರ್ ಗಲ್ಲಿ ಯ ಮೂಲಕ ಕನ್ನಡಕ್ಕೆ ವಾಪಸಾದರು.
ಇನ್ನು ಚತುರ ಚಿತ್ರದ ಬಗ್ಗೆ ಮಾತನಾಡುವ ಅವರು, “ಸುಮಾರು 12 ವರ್ಷಗಳ ನಂತರ ಕಳೆದ ವರ್ಷ ಕನ್ನಡದಲ್ಲಿ ಅಭಿನಯಿಸಿದೆ. ಅದು ನನ್ನ ಪುನರಾಗಮನ ಅಂದರೆ ತಪ್ಪಿಲ್ಲ. ಆ ನಂತರ ಚತುರ ಚಿತ್ರದಲ್ಲಿ ಪುನಃ ನಾಯಕಿಯಾಗಿ ನಟಿಸಬಹುದು ಅಂತ ಅಂದುಕೊಂಡಿರಲಿಲ್ಲ. ನಿಜ ಹೇಳಬೇಕೆಂದರೆ, ಕನ್ನಡದಲ್ಲಿ ನನ್ನ ಎರಡನೆಯ ಇನ್ನಿಂಗ್ಸ್ ಪವರ್‌ಫುಲ್ ಪಾತ್ರಗಳಿಂದಲೇ ಶುರುವಾಗಿದೆ. ಟೈಗರ್ ಗಲ್ಲಿ ಚಿತ್ರದಲ್ಲಿ ಒಂದು ಪವರ್‌ಫುಲ್ ಪಾತ್ರವಿತ್ತು. ಈಗ ಈ ಚಿತ್ರದಲ್ಲೂ ಒಂದೊಳ್ಳೆಯ ಪಾತ್ರ ಸಿಕ್ಕಿದೆ. ಅದೊಂದು ದಿನ ಮುನಿ ಫೋನ್ ಮಾಡಿ, ಒಂದು ಕಥೆ ಕೇಳು ಎಂದು ಕಥೆ ಹೇಳಿಸಿದ. ಕಥೆ ಕೇಳಿ ಖುಷಿಯಾಯಿತು. ಕಲಾವಿದರನ್ನು ಮೌಲ್ಡ್ ಮಾಡುವುದು ಒಳ್ಳೆಯ ಪಾತ್ರಗಳು ಎಂಬುದು ನನ್ನ ನಂಬಿಕೆ. ಅದೇ ರೀತಿ ಇಲ್ಲೂ ಒಂದೊಳ್ಳೆಯ ಪಾತ್ರ ಸಿಕ್ಕಿದೆ. ಇದು ವಿಭಿನ್ನವಾಗಿದೆ ಎನ್ನೋಕ್ಕಿಂತ ಚಾಲೆಂಜಿಂಗ್ ಆಗಿದೆ ಎನ್ನುವುದು ಸರಿ. ಇಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಪೂಜಾ ಲೋಕೇಶ್.