Advertisement

ಉಗ್ರರ ವಿರುದ್ಧ ಜತೆಯಾಗಿ ಸಮರ; ಮತಾಂಧತೆ ಬಗ್ಗೆ ಕಳವಳ

03:45 AM Jul 06, 2017 | Team Udayavani |

ಜೆರುಸಲೇಂ: ಪ್ರತಿ ಪ್ರವಾಸದಲ್ಲೂ ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆ ಬಗ್ಗೆ ಪ್ರಸ್ತಾವಿಸುವ ನರೇಂದ್ರ ಮೋದಿ ಅವರು, ಇಸ್ರೇಲ್‌ನಲ್ಲೂ ಈ ವಿಚಾರದಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಭಯೋತ್ಪಾದನೆ ಕೇವಲ ಒಂದು ದೇಶಕ್ಕೆ ಬಂದೊ ದಗಿರುವ ಪಿಡುಗಲ್ಲ. ಇದು ಇಡೀ ವಿಶ್ವವನ್ನೇ ಕಾಡುತ್ತಿದೆ. ಇದಕ್ಕೆ ಭಾರತವಷ್ಟೇ ಅಲ್ಲ, ಇಸ್ರೇಲ್‌ ಕೂಡ ತುತ್ತಾಗಿದೆ ಎಂದಿರುವ ಪ್ರಧಾನಿ ಮೋದಿ ಅವರು, ಉಗ್ರರಿಗೆ ಹಣ ಮತ್ತು ನೆಲೆ ನೀಡುವ ದೇಶಗಳಿಗೆ ತಕ್ಕ ಪಾಠ ಕಲಿಸುವ, ಅವರನ್ನು ಒಬ್ಬಂಟಿಯಾಗಿಸುವ ಪ್ರಯತ್ನಕ್ಕೆ ಇಸ್ರೇಲ್‌ ಬೆಂಬಲ ಗಳಿಸುವಲ್ಲಿ ಸಫ‌ಲರಾಗಿದ್ದಾರೆ.

ಐತಿಹಾಸಿಕ ಇಸ್ರೇಲ್‌ ಪ್ರವಾಸದ ಎರಡನೇ ದಿನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು ಹೆಚ್ಚು ಕಡಿಮೆ ಜತೆಯಾಗಿಯೇ ಇದ್ದರು. ಬುಧವಾರ ಬೆಳಗ್ಗೆಯೇ ಇಸ್ರೇಲ್‌ ಅಧ್ಯಕ್ಷ ರೆವೇನ್‌ ರಿವಿÉನ್‌ ಅವರನ್ನು ಭೇಟಿಯಾಗಿ ಚರ್ಚಿಸಿದರು. ಇದಾದ ಬಳಿಕ‌ ಜತೆಯಾದ ಭಾರತ-ಇಸ್ರೇಲ್‌ ಪ್ರಧಾನಿಗಳು ಮೊದಲಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಬಾಹ್ಯಾಕಾಶ, ಕೃಷಿ, ನೀರು ಸಂರಕ್ಷಣೆ ಮತ್ತು ನಾವೀನ್ಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಏಳು ಒಪ್ಪಂದಗಳಾದವು.

ಇದೆಲ್ಲದಕ್ಕಿಂತ ಹೆಚ್ಚಾಗಿ ಇವರಿಬ್ಬರ ಮಾತುಕತೆಯಲ್ಲಿ ಪ್ರಧಾನವಾಗಿ ಪ್ರಸ್ತಾವವಾಗಿದ್ದು ಭಯೋತ್ಪಾದನೆ ವಿಚಾರವೇ. ಸದ್ಯ ಇಸ್ರೇಲ್‌ ಕೂಡ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸು ತ್ತಿದೆ. ಹಾಗೆಯೇ ಭಾರತಕ್ಕೆ ನೆರೆರಾಷ್ಟ್ರದ ಬೆಂಬಲಿತ ಉಗ್ರವಾದ ಸವಾಲಾಗಿದೆ. ಈ ಬಗ್ಗೆ ಮಾತನಾಡಿದ ಮೋದಿ, ನಮ್ಮ ಈ ಎರಡೂ ದೇಶಗಳು ಪ್ರಾದೇಶಿಕ ವಿಚಾರದಲ್ಲಿ ಸಂಕೀರ್ಣತೆಯನ್ನು ಎದುರಿಸುತ್ತಿವೆ. ಹೀಗಾಗಿ ಭಯೋತ್ಪಾದನೆ ಮತ್ತು ಮತಾಂಧತೆಯನ್ನು ಹೋಗಲಾಡಿಸಲು ಹಾಗೂ ಉಗ್ರವಾದಕ್ಕೆ ಹಣಕಾಸಿನ ಮತ್ತು ಆಶ್ರಯ ನೀಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಪ್ರಸ್ತಾವಿಸಿದರು. ಈ ವಿಚಾರ ದಲ್ಲಿ ಭಾರತ-ಇಸ್ರೇಲ್‌ ಜತೆ ಜತೆಯಾಗಿಯೇ ಹೆಜ್ಜೆ ಇಡಬೇಕಾಗಿದೆ ಎಂದರು.

ಇಡೀ ದಿನ ಮೋದಿ ಜತೆಯಲ್ಲೇ ಇದ್ದ ನೆತಾನ್ಯಾಹು, ಭಾರತ-ಇಸ್ರೇಲ್‌ ಒಟ್ಟಿಗೆ ಸೇರಿದರೆ ಬಹು ದೊಡ್ಡ ಶಕ್ತಿ ಯಾಗಿ ಮಾರ್ಪಾಡಾಗುತ್ತೇವೆ ಎಂದರು.

Advertisement

ಅಲ್ಲದೆ ಭಯೋತ್ಪಾದನೆ ವಿಚಾರದಲ್ಲಿ ಜತೆಗಿರುವ ಭರವಸೆ ನೀಡಿದ ನೆತನ್ಯಾಹು ಅವರು, 26/11ರ ಮುಂಬಯಿ ದಾಳಿಯನ್ನು ಅತ್ಯಂತ ಭೀಕರ ಉಗ್ರ ದಾಳಿ ಎಂದು ಹೇಳಿದರು. ಇದರ ನಡುವೆಯೇ ಮೋದಿ ಅವರು ನೆತನ್ಯಾಹು 
ಮತ್ತವರ ಕುಟುಂಬವನ್ನು ಭಾರತಕ್ಕೆ ಆಹ್ವಾನಿಸಿದರು. ಇದಕ್ಕೆ ನೆತನ್ಯಾಹು ಕೂಡ ಅಲ್ಲೇ ಒಪ್ಪಿಗೆ ಸೂಚಿಸಿದರು.

ಮೋಶೆ ಭೇಟಿ ಮಾಡಿದ ಮೋದಿ: ಮುಂಬಯಿ ದಾಳಿ ವೇಳೆ ಬದುಕುಳಿದಿದ್ದ ಇಸ್ರೇಲ್‌ನ ಯಹೂದಿ ಕುಟುಂಬದ ಮೋಶೆ ಹಾಟ್ಸ್‌ಬರ್ಗ್‌, ಮತ್ತವರ ಕುಟುಂಬವನ್ನು ಪ್ರಧಾನಿ ಮೋದಿ ಅವರು ಬೆಂಜಮಿನ್‌ ನೆತನ್ಯಾಹು ಜತೆಗೇ ಭೇಟಿ ಮಾಡಿದರು. ಮುಂಬಯಿ ದಾಳಿ ವೇಳೆ ಮೋಶೆಗೆ ಕೇವಲ 2 ವರ್ಷ. ಆಗ ಹೆತ್ತವರೆಲ್ಲರೂ ಉಗ್ರರ ದಾಳಿಯಲ್ಲಿ ಬಲಿಯಾಗಿದ್ದರೆ, ಮೋಶೆ ನೋಡಿಕೊಳ್ಳುತ್ತಿದ್ದ ನ್ಯಾನಿ ಸಾಂದ್ರಾ ಸ್ಯಾಮ್ಯೂಯಲ್ಸ್‌ ಪುಟ್ಟ ಮಗುವನ್ನು ರಕ್ಷಿಸಿದ್ದರು.

ಇದನ್ನು ನೆನೆದ ಮೋಶೆ, ಮುಂಬಯಿಗೆ ಮತ್ತೆ ಬಂದು ವಾಸಿಸಬೇಕು ಎಂದೆನಿಸಿದೆ. ಜತೆಗೆ ನ್ಯಾನಿ ಸಾಂದ್ರಾ ಸ್ಯಾಮ್ಯೂಯಲ್ಸ್‌ ಅವರನ್ನು ಕಾಣಬೇಕಿದೆ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾನೆ. ಈಗ ಮೋಶೆಗೆ 11 ವರ್ಷವಾಗಿದ್ದು ತನ್ನ ಅಜ್ಜ-ಅಜ್ಜಿ ಜತೆ ವಾಸ ಮಾಡುತ್ತಿದ್ದಾನೆ.

ತನ್ನ ನಿವಾಸಕ್ಕೆ ಬಂದ ಮೋದಿ ಮತ್ತು ನೆತನ್ಯಾಹುಗೆ ಹಿಂದಿಯಲ್ಲೇ “ಆಪಾR ಸ್ವಾಗತ್‌ ಹೈ ಹಮಾರೆ ದೇಶ್‌ ಮೆ’ ಎಂದು ಸ್ವಾಗತಿಸಿದ. ಒಳಬಂದ ಮೋದಿ ಅವರನ್ನು ಅಪ್ಪಿಕೊಂಡ ಮೋಶೆ, ಭಾರತವನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ. ಆಗ ಮೋದಿ ಅವರು, ಭಾರತದ ಬಾಗಿಲು ಎಂದಿಗೂ ನಿನಗೆ ತೆಗೆದಿರುತ್ತದೆ ಬಾ ಎಂದು ಹೇಳಿದರು. ಇದಕ್ಕಾಗಿ ದೀರ್ಘಾವಧಿ ವೀಸಾ ನೀಡುವ ಭರವಸೆಯನ್ನೂ ನೀಡಿದರು.

ಮುಂದೆಯೂ ಹೀಗೆಯೇ ನನ್ನನ್ನು ಪ್ರೀತಿಸಿ, ನಮ್ಮ ಹೆತ್ತವರನ್ನು ನೆನೆದದ್ದಕ್ಕೆ ಧನ್ಯವಾದಗಳು ಎಂದ ಮೋಶೆ, ಮೋದಿ ಅವರಿಗೆ ವಿಶೇಷ ಉಡುಗೊರೆ ಯೊಂದನ್ನೂ ನೀಡಿದ. ಈ ಸಂದರ್ಭದಲ್ಲಿ ಬೆಂಜಮಿನ್‌ ನೆತನ್ಯಾಹು ಅವರು, ತಾವು ಭಾರತಕ್ಕೆ ಭೇಟಿ ನೀಡುವ ವೇಳೆ ಮೋಶೆ ಹಾಗೂ ಅವರ ಕುಟುಂಬವನ್ನೂ ಕರೆದುಕೊಂಡು ಬರುವುದಾಗಿ ಹೇಳಿದರು.
ಮೋಶೆಗೆ 13ನೇ ವಯಸ್ಸಾದಾಗ ಯಹೂದಿ ಸಂಪ್ರದಾಯದಂತೆ ಬಾರ್‌ ಮಿತ್ವಾ (ನಮ್ಮಲ್ಲಿನ ಉಪನಯನ) ಕಾರ್ಯಕ್ರಮವಿದ್ದು, ಮುಂಬಯಿನಲ್ಲೇ ಮಾಡುವ ಚಿಂತನೆಯಲ್ಲಿ ಇದ್ದಾರೆ. ಈ ಕಾರ್ಯಕ್ರಮಕ್ಕೆ ಬನ್ನಿ ಎಂದು ಮೋದಿ ಅವರಿಗೆ ಮೋಶೆ ತಾತ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next