ಪ್ರಾಚೀನ ಕಾಲದಲ್ಲಿ ಭಾರತ ದೇಶದ ಸಂಪತ್ತಿನ ಕುರಿತಾದ ಹಲವು ಊಹಾಪೋಹಗಳು, ಚಿತ್ರವಿಚಿತ್ರ ಸುದ್ದಿಗಳು ಐರೋಪ್ಯ ದೇಶದವರ ನಿದ್ದೆಗೆಡಿಸಿದ್ದವು. ಈ ಕಾರಣಕ್ಕೇ ಸ್ಪ್ಯಾನಿಷ್ ಸಂಶೋಧಕ ಕ್ರಿಸ್ಟೊಫರ್ ಕೊಲಂಬಸ್ ಭಾರತವನ್ನು ಸಮುದ್ರಮಾರ್ಗದಲ್ಲಿ ತಲುಪಲು ಹೆಣಗಾಡಿದ್ದು. ಭಾರತವನ್ನು ಆರಸಿ ಹೊರಟವನಿಗೆ ಭಾರತ ಸಿಕ್ಕಲಿಲ್ಲ. ಸಿಕ್ಕಿದ್ದು ಅಮೆರಿಕ. ಅದನ್ನೇ ಭಾರತವೆಂದು ತಪ್ಪು ತಿಳಿದ ಕೊಲಂಬಸ್ ಅಲ್ಲಿನ ಬುಡಕಟ್ಟು ಜನಾಂಗದವರನ್ನೇ ಭಾರತದವರೆಂದುಕೊಂಡು ಇಂಡಿಯನ್ನರೆಂದು ಕರೆದ. ಆದರೆ ಅವರು ತುಸು ಕೆಂಪಗಿದ್ದಿದ್ದರಿಂದ ರೆಡ್ ಇಂಡಿಯನ್ನರೆಂದು ಕರೆದ. ಇರಲಿ. ಕೊಲಂಬಸ್ ಸಮುದ್ರಪ್ರಯಾಣದ ಸಂದರ್ಭದಲ್ಲಿ ಅಚ್ಚರಿಯ ವಿಷಯವೊಂದನ್ನು ದಾಖಲಿಸಿದ್ದ. ಸಮುದ್ರದ ಮಧ್ಯದಲ್ಲಿ ಮನುಷ್ಯನನ್ನೇ ಹೋಲುವ ಸಮುದ್ರಜೀವಿಯನ್ನು ಕಂಡಿದ್ದಾಗಿ ತನ್ನ ದಿನಚರಿಯಲ್ಲಿ ಬರೆದುಕೊಂಡಿದ್ದ. ಪುರಾಣಕತೆಗಳಲ್ಲಿದ್ದ ‘ಮರ್ಮೈಡ್'(ಸಮುದ್ರ ಕನ್ಯೆ) ಅದೇ ಇರಬಹುದೆಂದು ಅನೇಕರು ತಿಳಿದರು. ಆದರೆ ಕೊಲಂಬಸ್‌ನ ದಿನಚರಿಯ ಮುಂದಿನ ಸಾಲುಗಳು ಆ ಅನುಮಾನವನ್ನು ಅಳಿಸಿದವು. ತಾನು ಕಂಡ ಜೀವಿಯ ಮುಖ, ನೋಡಲು ಪುರುಷನಂತಿತ್ತು ಎಂದು ಬರೆದಿದ್ದ. ಈ ವಿಷಯದ ಹಿಂದೆ ಬಿದ್ದ ಸಂಶೋಧಕರು ಕಡೆಗೂ ಕೊಲಂಬಸ್ ನೋಡಿದ್ದೇನು ಎನ್ನುವುದನ್ನು ಪತ್ತೆ ಹಚ್ಚಿದರು. ಆ ಜೀವಿ ಮನಾಟಿ ಅಥವಾ ಸಮುದ್ರ ಹಸು. ಅಮೆರಿಕವನ್ನೇ ಭಾರತವೆಂದು ತಪ್ಪಾಗಿ ತಿಳಿದ ಕೊಲಂಬಸ್ ಸಮುದ್ರಹಸುವನ್ನೂ ತಪ್ಪಾಗಿ ಗುರುತಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ.