Advertisement

ಬಿಸಿಲೂರಲ್ಲಿ ಬಣ್ಣದೋಕುಳಿ ಸಂಭ್ರಮ

03:48 PM Mar 03, 2018 | |

ರಾಯಚೂರು: ಹೋಳಿ ಹುಣ್ಣಿಮೆ ನಿಮಿತ್ತ ಜಿಲ್ಲೆಯ ಜನ ಶುಕ್ರವಾರ ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಮಕ್ಕಳು, ಮಹಿಳೆಯರು ಸೇರಿ ಯುವಕರು ಪರಸ್ಪರ ಬಣ್ಣ ಎರಚಿ ಖುಷಿ ಪಟ್ಟರೆ; ಯುವಕರು ಡಿಜೆ ಹಾಕಿ ಕುಣಿದು ಕುಪ್ಪಳಿಸಿದರು. ಹಬ್ಬದ ನಿಮಿತ್ತ ಗುರುವಾರ ರಾತ್ರಿ ಎಲ್ಲೆಡೆ ಕಾಮದಹನ ಕಾರ್ಯಕ್ರಮ ನಡೆಸಲಾಯಿತು. ಕಟ್ಟಿಗೆಗಳನ್ನು ಕಳ್ಳತನ ಮಾಡಿಕೊಂಡು ಬಂದ ಯುವಕರು ಕಾಮನ ಭಾವಚಿತ್ರ ಬಿಡಿಸಿ ದಹಿಸಿ ಬಾಯಿ ಬಾಯಿ ಬಡಿದುಕೊಂಡರು.

Advertisement

ಶುಕ್ರವಾರ ಬೆಳಗ್ಗೆಯಿಂದಲೇ ಎಲ್ಲೆಡೆ ಬಣ್ಣ ಎರಚಿ ಸಂಭ್ರಮಿಸಲಾಯಿತು. ಯುವಕರು ನಗರದಲ್ಲೆಲ್ಲ ಬೈಕ್‌ಗಳ ರ್ಯಾಲಿ ಮಾಡುವ ಮೂಲಕ ಬಣ್ಣದಾಟಕ್ಕೆ ಮೆರಗು ತಂದರೆ, ಮಕ್ಕಳು, ಯುವತಿಯರು ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬವನ್ನು ಆಚರಿಸಿದರು. 

ಇನ್ನು ವಿವಿಧ ಬಡಾವಣೆಗಳಲ್ಲಿ ಮಡಕೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಕಿಲ್ಲೆ ಬೃಹನ್ಮಠದ ಹತ್ತಿರ, ಕೋಟೆ ಏರಿಯಾ, ಮರಾಠಿ ಗಲ್ಲಿ, ಉಪ್ಪಾರವಾಡಿ ಉಪ್ಪಾರ ಸಮಾಜದಿಂದ ಮಡಕೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಯುವಕರು ಪೈಪೋಟಿಯಲ್ಲಿ ಮಡಕೆ ಒಡೆದು ಸಂಭ್ರಮಿಸಿದರು.

ಮನೆಗೆ ಮನೆಗೆ ತೆರಳುತ್ತಿದ್ದ ಯುವಕರ ದಂಡು ಚಂದಾ ವಸೂಲಿ ಮಾಡುತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಣ ಕೊಡದಿದ್ದಲ್ಲಿ ಬಣ್ಣ ಹಚ್ಚುತ್ತೇವೆ ಎಂದು ಬೆದರಿಸುತ್ತಿದ್ದರು. ಇನ್ನು ಪ್ರಯಾಣಿಕರು ತಪ್ಪಿಸಿಕೊಂಡು ಹೋಗುವಷ್ಟರಲ್ಲಿ ಪ್ರಯಾಸಪಡುವ ದೃಶ್ಯ ಸಾಮಾನ್ಯವಾಗಿತ್ತು. ನಗರದ ಏಗನೂರ್‌ ಟೆಂಪಲ್‌ ಬಳಿ ಜೆಸಿಐ ವತಿಯಿಂದ ಬಣ್ಣದಾಟಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿತ್ತು. ಪೈಪ್‌ಗ್ಳ ಮೂಲಕ ಬಣ್ಣ ಸಿಂಪಡಿಸುತ್ತಿದ್ದರೆ, ಅತ್ತ ಡಿಜೆ ಹಾಕಲಾಗಿತ್ತು.
 
ಪುರುಷರು, ಮಹಿಳೆಯರಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳಾದಿಯಾಗಿ ಎಲ್ಲರೂ ಕುಣಿದು ಕುಪ್ಪಳಿಸಿದರು. ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಶಾಸಕ ತಿಪ್ಪರಾಜ್‌ ಹವಾಲ್ದಾರ್‌ ಕೂಡ ನೃತ್ಯ ಮಾಡುವ ಮೂಲಕ ಆಚರಣೆಯ ಭಾಗವಾದರು. 

ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಹೋಳಿ ಹಬ್ಬ ರಂಗೇರಿತ್ತು. ಅಪರಾಹ್ನದವರೆಗೂ ಬಣ್ಣವಾಡಿದ ಯುವಕರು ಕೃಷ್ಣಾ ನದಿಗೆ
ತೆರಳಿ ಸ್ನಾನ ಮಾಡಿದರು. ಹಬ್ಬದ ನಿಮಿತ್ತ ನಗರ ಸ್ಥಬ್ಧವಾಗಿತ್ತು. ರಜಾ ದಿನವಲ್ಲದಿದ್ದರೂ ಜನಸದಂದಣಿಯೇ ಇರಲಿಲ್ಲ. ರಸ್ತೆಗಳೆಲ್ಲ ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು.

Advertisement

ಕೆಲವೆಡೆ ಇರಲಿಲ್ಲ ಹಬ್ಬ ಎಲ್ಲೆಡೆ ಬಣ್ಣದಾಟದ ಸಂಭ್ರಮವಿದ್ದರೆ ದೇವದುರ್ಗ ತಾಲೂಕಿನಲ್ಲಿ ಬಣ್ಣದಾಟದ ಸಂಭ್ರಮ ಇರಲಿಲ್ಲ. ಅಲ್ಲಿ ಹೋಳಿ ಹುಣ್ಣಿಮೆ ಬದಲಿಗೆ ಯುಗಾದಿ ಹಬ್ಬಕ್ಕೆ ಬಣ್ಣವಾಡುವ ಸಂಪ್ರದಾಯವಿದೆ. ಹೀಗಾಗಿ ಕೆಲವರು ಬಣ್ಣದ ಕಿರಿಕಿರಿಗೆ ತಪ್ಪಿಸಿಕೊಳ್ಳಲು ಆ ಕಡೆ ಹೋಗಿ ಸಂಜೆ ಹಿಂದಿರುಗಿದರು.

ಮುದಗಲ್‌ನಲ್ಲಿ ಸಂಭ್ರಮದ ಹೋಳಿ
ಮುದಗಲ್ಲ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ರಾಮಲಿಂಗೇಶ್ವರ ಕಾಲೋನಿ, ಚಾವಡಿ ಕಟ್ಟೆ, ಹೂಗಾರ ಓಣಿ, ಸೋಮವಾರಪೇಟೆ ಓಣಿಯಲ್ಲಿ ಯುವಕರು ತಮಟೆ ಬಾರಿಸುತ್ತ ಕಟ್ಟಿಗೆ, ಕುಳ್ಳು ಪಡೆದು ಗುರುವಾರ ರಾತ್ರಿ ಕಾಮಣ್ಣನನ್ನು ದಹನ ಮಾಡಿದರು. ಬಂಜಾರಾ ತಾಂಡಾಗಳಲ್ಲಿ ಎಂಟು ದಿನಗಳಿಂದ ಹೆಜ್ಜೆ ಕುಣಿತದ ಮೂಲಕ ಪುರುಷರು-ಮಹಿಳೆಯರು ಸಂಭ್ರಮಿಸಿದರು. 

ಗುರುವಾರ ರಾತ್ರಿ ತಾಂಡಾದ ಜನತೆ ನೃತ್ಯ, ಒಗಟು ಪದಗಳು, ಹಾಡುವ ಹಾಗೂ ನಗಾರಿ ಮತ್ತು ತಮಟೆ ಬಾರಿಸುವುದು ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮ ನಡೆಸಿದರು. ಶುಕ್ರವಾರ ಬೆಳಗಿನ ಜಾವ ತಮ್ಮ ತಾಂಡಾದ ನಾಯಕ, ಕಾರಭಾರಿಗಳು ಸೇರಿ ಒಗ್ಗಟ್ಟಿನಿಂದ ಕಾಮಣ್ಣನನ್ನು ದಹಿಸಿ ಬಳಿಕ ಬಣ್ಣದೋಕುಳಿ ಆಚರಿಸಿದರು.

ಬಣ್ಣದಾಟ: ಹೋಳಿ ಪ್ರಯುಕ್ತ ಪಟ್ಟಣದಲ್ಲಿ ಮಕ್ಕಳು, ಯುವಕರು, ಯವತಿಯರು ಮತ್ತು ಹಿರಿಯರು ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಶ್ರುಕ್ರವಾರ ಬೆಳಗಿನಿಂದಲೇ ಬಣ್ಣದಾಟ ರಂಗೇರಿತ್ತು. ಪಟ್ಟಣದ ಪ್ರತಿ ಓಣಿ, ರಸ್ತೆಗಳಲ್ಲಿ ಯುವಕರು, ಮಹಿಳೆಯರು ಬಣ್ಣದೋಕುಳಿಯಲ್ಲಿ ಮಿಂದರು. ವ್ಯಾಪಾರಸ್ಥರು ಶುಕ್ರವಾರ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿದ್ದರು. ಹಿಂದೂ, ಮುಸ್ಲಿಂ ಸೇರಿದಂತೆ ಸರ್ವ ಜನಾಂಗದವರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next