Advertisement

ವರ್ಣರಂಜಿತ ಪುತ್ತೂರು ಮಹಾಲಿಂಗೇಶ್ವರ ಬ್ರಹ್ಮರಥೋತ್ಸವ 

11:10 AM Apr 19, 2018 | Team Udayavani |

ಪುತ್ತೂರು: ಮಂಗಳವಾರ ರಾತ್ರಿ ಪುತ್ತೂರು ದೇವರಮಾರು ಗದ್ದೆಯಲ್ಲಿ ನಡೆದ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವಕ್ಕೆ ಲಕ್ಷೋಪಲಕ್ಷ ಭಕ್ತರು ಸಾಕ್ಷಿಯಾದರು.

Advertisement

ಪಡುವಣ ದಿಕ್ಕಿನಿಂದ ಕತ್ತಲು ಆವರಿಸುತ್ತಿದ್ದಂತೆ ದೇವರಮಾರು ಗದ್ದೆಗೆ ಜನಸಂದಣಿ ಹರಿದು ಬರತೊಡ ಗಿತು. ದೇಗುಲದೊಳಗೆ ಧಾರ್ಮಿಕ ಕಾರ್ಯಕ್ರಮವೂ ಶುರುವಾಯಿತು. ದೇವರ ಉತ್ಸವ ಬಲಿ ಹೊರಟು, ವಸಂತ ಕಟ್ಟೆ ಪೂಜೆ, ವಾದ್ಯ ಮೇಳದೊಂದಿಗೆ ಬಲಿ ನಡೆಯಿತು. ಉಳ್ಳಾಲ್ತಿ- ದಂಡನಾಯಕ ದೈವಗಳ ಭಂಡಾರವೂ ದೇವರ ಬಲಿಯೊಂದಿಗೆ ಸೇರಿಕೊಂಡು, ರಾಜಗೋಪುರದ ಮೂಲಕ
ಬ್ರಹ್ಮರಥದೆಡೆಗೆ ಆಗಮಿಸಿತು.

ಎಂಟು ಎಕರೆ ವಿಸ್ತಾರದ ಗದ್ದೆಯಲ್ಲಿ ಒಂದಿಂಚು ಜಾಗವಿಲ್ಲದಂತೆ ಜನ ತುಂಬಿದ್ದರು. ಜೋಡುಕರೆ ಕಂಬಳ ನಡೆಯುವ ಗದ್ದೆಯಲ್ಲಿ ಪುತ್ತೂರು ಬೆಡಿಗೆ ವ್ಯವಸ್ಥೆ ಮಾಡಲಾಗಿತ್ತು. ಬೆಡಿ ಆಸಕ್ತರು ಇಲ್ಲೇ ಸುತ್ತಮುತ್ತ ನೆರೆದಿದ್ದರು. ದೂರದೂರಿನಿಂದ ಆಗಮಿಸಿದವರು ಜಾತ್ರಾ ಗದ್ದೆಯಲ್ಲೇ ಟವೆಲ್‌, ಕಾಗದ ಹರಡಿ ಕುಳಿತಿದ್ದರು. ಒಂದಷ್ಟು ಜನ ಸುತ್ತಮುತ್ತಲಿನ ಕಟ್ಟಡವೇರಿ ಬ್ರಹ್ಮರಥದ, ಬೆಡಿಯ ವೈಭವವನ್ನು ಸವಿ ಯುತ್ತಿದ್ದರು. ಇನ್ನೊಂದಷ್ಟು ಮಂದಿ ಗದ್ದೆಯ ತುಂಬಾ ಓಡಾಟ ನಡೆಸಿ, ಖರೀದಿಯಲ್ಲಿ ಬ್ಯುಸಿಯಾಗಿದ್ದರು. ಅಷ್ಟು ಹೊತ್ತಿಗೂ ಜನರು ಆಗಮಿಸುತ್ತಲೇ ಇದ್ದರು. ಈ ಹಿನ್ನೆಲೆಯಲ್ಲಿ ಪೇಟೆ ತುಂಬಾ ಪೊಲೀಸರು ಸಂಚಾರ ದಟ್ಟಣೆ ನಿರ್ವಹಣೆಗಾಗಿ ಬಂದೋಬಸ್ತ್ ಕೈಗೊಂಡಿದ್ದರು.

ರಾತ್ರಿ 9.45ರ ಸುಮಾರಿಗೆ ಶ್ರೀ ಮಹಾಲಿಂಗೇಶ್ವರ ದೇವರು ಬ್ರಹ್ಮರಥಾ ರೂಢರಾದರು. ಬ್ರಹ್ಮರಥ ದೆದುರು ಕಾಜು ಕುಜುಂಬ ದೈವದ ಕಟ್ಟುಕಟ್ಟಳೆ ನೇಮ ನಡೆದು, ಶ್ರೀ  ಮಹಾಲಿಂಗೇಶ್ವರ ದೇವರ ಆಕರ್ಷಕ ಉತ್ಸವ ಬಲಿ ನಡೆಯಿತು.

ಇದೇ ಹೊತ್ತಿಗೆ ರಥಬೀದಿಯಲ್ಲಿ ಕರ್ಪೂರದ ಬೆಳಕು ಪಸರಿಸತೊಡಗಿತು. ರಥಬೀದಿಯಲ್ಲಿ ಬಲ್ನಾಡು ದೈವಗಳ ಭಂಡಾರ, ಕಾಜುಕುಜುಂಬ ದೈವ, ಆಡಳಿತ ಮಂಡಳಿ ಉಪಸ್ಥಿತಿಯಲ್ಲಿ ದೇವರು ರಥಾ ರೂಢರಾದರು. ಲಕ್ಷಾಂತರ ಭಕ್ತರು ಈ ಸೊಬಗನ್ನು ಕಣ್ತುಂಬಿಕೊಂಡು, ಘೋಷಣೆ ಕೂಗಿದರು.

Advertisement

ರಥದಿಂದ ಬೆಂಕಿಯ ಕಿಡಿಯನ್ನು ಕೊಂಡೊ ಯ್ದು ಪ್ರಸಿದ್ಧ ಪುತ್ತೂರು ಬೆಡಿಗೆ ಅಗ್ನಿಸ್ಪರ್ಶ ಮಾಡಲಾಯಿತು. ಬಾನಂಗಳದಲ್ಲಿ ವರ್ಣಚಿತ್ತಾರ ಶುರುವಿಟ್ಟು ಕೊಂಡಿತು. ಒಂದು ಗಂಟೆಗೂ ಅಧಿಕ ಕಾಲ ಮೂಡಿಬಂದ ಬೆಡಿ ಪ್ರದರ್ಶನವನ್ನು ಹಲವರು ಮೊಬೈಲ್‌ನಲ್ಲಿ, ಕೆಮರಾದಲ್ಲಿ ಸೆರೆ ಹಿಡಿದರು. ಕೊನೆಗೆ ನೆಲ ಬಿರಿಯುವಂತೆ ಸದ್ದು ಮೊಳಗಿಸಿದ ಫಿನಿಶಿಂಗ್‌ ಟಚ್‌ ಬೆಚ್ಚಿ ಬೀಳಿಸಿತು. ಕಿವಿ ಗಡಚಿಕ್ಕುವ ಧ್ವನಿಗೆ,
ಸುಡುಮದ್ದಿನ ಕರಾಮತ್ತಿಗೆ ಗದ್ದೆಯ ತುಂಬಾ ನೆರೆದಿದ್ದ ಮಂದಿ ಹರ್ಷೋದ್ಘಾರ ಮೊಳಗಿಸಿದರು.

ಬೆಡಿ ಪೂರ್ಣಗೊಳ್ಳುತ್ತಿದ್ದಂತೆ ಬ್ರಹ್ಮರಥ ದಲ್ಲಿ ದೇವರಿಗೆ ಪೂಜೆ ನಡೆದು, ರಥೋತ್ಸವ ಆರಂಭಗೊಂಡಿತು. ಮೊದಲೇ ನೇಮಿಸಿದ್ದ ಸಮವಸ್ತ್ರ ಧರಿಸಿದ್ದ ಸ್ವಯಂಸೇವಕರು ಹಗ್ಗ ಹಿಡಿದು ರಥವನ್ನೆಳೆದರು. ಸುಮಾರು 750 ಮೀಟರ್‌ ದೂರ ರಥಬೀದಿಯಲ್ಲಿ ರಥೋತ್ಸವ ನಡೆಯಿತು. ಅರ್ಧದ ವರೆಗೆ ತೆರಳಿ ತಂತ್ರಿಗಳು ರಥದಿಂದಿಳಿದು ಮೂಲನಾಗನ ಕಟ್ಟೆಯಲ್ಲಿ ಪೂಜೆ ಸಲ್ಲಿಸಿದರು. ಅವರು ಮರಳಿ ಬಂದು, ಮತ್ತೆ ರಥ ಮುಂದುವರಿಯಿತು. ರಾಜಗೋಪುರದ ಬಳಿಗೆ ಹಿಂದಿರುಗಿ ಬಂದ ಬ್ರಹ್ಮರಥದಿಂದ ದೇವರು ಇಳಿದು, ಬಲಾ°ಡು ಉಳ್ಳಾಲ್ತಿ ದೈವಗಳನ್ನು ಬಂಗೇರ್‌ ಕಾಯರ್‌ಕಟ್ಟೆಯವರೆಗೆ ತೆರಳಿ ಬೀಳ್ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next