Advertisement

ಮಕ್ಕಳ ಕೈಯಲ್ಲಿ ಅರಳಿದ ಬಣ್ಣಬಣ್ಣದ ಚಿತ್ತಾರ

11:52 AM Feb 12, 2018 | |

ಮೂಡಬಿದಿರೆ: ಪುರಸಭಾ ವ್ಯಾಪ್ತಿಯ ಪ್ರಾಂತ್ಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಈಗ ವರ್ಲಿ ಕಲೆಯ ಸೊಬಗನ್ನು ಹೊದ್ದು ಕಂಗೊಳಿಸುತ್ತಿದೆ. ಶನಿವಾರ ನಡೆದ ವರ್ಲಿ ಆರ್ಟ್‌ ಶಿಬಿರದಲ್ಲಿ ಮಂಚಿ ಕೊಲ್ನಾಡು ಪ್ರೌಢಶಾಲೆಯ ಕಲಾಶಿಕ್ಷಕ ತಾರಾನಾಥ ಕೈರಂಗಳ ಅವರು ತಮ್ಮ ಶಾಲೆಯ 23 ಮಕ್ಕಳನ್ನು ಕರೆದುಕೊಂಡು ಬಂದು ಪ್ರಾಂತ್ಯ ಶಾಲೆಯ 24 ಮಕ್ಕಳ ಕೈಗೆ ಕುಂಚ ಕೊಟ್ಟು ವರ್ಲಿ ಆರ್ಟ್‌ ಬಿಡಿಸಲು ಹೇಳಿ ಕೊಟ್ಟಿರುವುದರ ಫಲಶ್ರುತಿ ಇದಾಗಿದೆ.

Advertisement

ಕುತೂಹಲವೆಂದರೆ ಈ ವರ್ಲಿ ಆರ್ಟ್‌ ಶಿಬಿರವನ್ನು ಉದ್ಘಾಟಿಸಿದ ಎಸ್‌ಡಿಎಂಸಿ ಅಧ್ಯಕ್ಷ, ಕಾಷ್ಠ ಶಿಲ್ಪಿ ಸುಂದರ ಆಚಾರ್ಯ ಅವರು ಸ್ವತಃ ಕುಂಚ ಹಿಡಿದು ಕಂಪ್ಯೂಟರ್‌ ಕೊಠಡಿಯ ಹೊರಗಿನ ಸ್ತಂಭದಲ್ಲಿ ವರ್ಲಿ ಕಲೆಯನ್ನು ಮೂಡಿಸಿದ್ದು. ನಮಗೆ ಇದು ಸಹಜವಾಗಿ ಗೊತ್ತಿರುವ ಕಲೆ ಅಲ್ವಾ? ಎಂದು ಕೆಲಸ ಮುಂದುವರಿಸಿದರು. ಮುಖ್ಯ ನಿರ್ದೇಶಕ ತಾರಾನಾಥ ಕೈರಂಗಳ ಮಾತನಾಡಿ, ಇವತ್ತೇ ಮಕ್ಕಳಿಗೆ ಬೋರ್ಡ್‌ ಮೇಲೆ ಒಂದಿಷ್ಟು ಮಾಹಿತಿ ನೀಡಿದ್ದೇವೆ.

ಮಕ್ಕಳು ಕೂಡಲೇ ಗ್ರಹಿಸುತ್ತಾರೆ. ಕುಂಚ ಹಿಡಿಯುವ ಧೈರ್ಯ ತೋರುತ್ತಾರೆ. ಈಗ ನಾವು ಮೂಲ ಗೆರೆಗಳನ್ನು ಬಿಡಿಸಿ
ಕೊಡ್ತೇವೆ. ಇಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮಕ್ಕಳು ತಾವಾಗಿಯೇ ಸ್ಕೆಚ್‌ ಹಾಕಿಕೊಂಡು ಬಣ್ಣ ಲೇಪಿಸಲು
ಮುಂದಾಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ವತ್ಛ ಪರಿಸರ, ಕಲಾಪ್ರಜ್ಞೆ, ಕಲಾಸಕ್ತಿ, ಲಭ್ಯ ಜಾಗದ ಸುಂದರೀಕರಣದೊಂದಿಗೆ ಮಾಹಿತಿಗಳನ್ನೂ ವರ್ಲಿ ಆರ್ಟ್‌ ಮೂಲಕ ವ್ಯಕ್ತಪಡಿಸಲು ಸಾಧ್ಯ ವಾಗುತ್ತಿದೆ ಎಂದರು. 

ಶಿಕ್ಷಣ ಸಂಯೋಜಕ ದೇವದಾಸ್‌ ಹೇಳುವಂತೆ ಇದೊಂದು ಸಮಾಜ ಸೇವೆ. ‘ನಾವೇನೂ ಪ್ರತಿಫಲ ಅಪೇಕ್ಷಿಸುವುದಿಲ್ಲ. ಶಾಲೆಯವರು ಒಂದಿಷ್ಟು ಬಣ್ಣ ದ ವೆಚ್ಚ, ಉಪಾಹಾರದ ವ್ಯವಸ್ಥೆ ಮಾಡಿದರಾಯಿತು. ಹಾಗೆಂದು ಸಂಪರ್ಕಕ್ಕೆ ಬಂದ ಯಾವ ಶಾಲೆಯವರೂ ಇಂಥದ್ದಕ್ಕೆಲ್ಲ ಬೇಡ, ಆಗುವುದಿಲ್ಲ ಅಂದದ್ದಿಲ್ಲ.

ಬ್ಯಾಗ್‌ ರಹಿತ ಶನಿವಾರದ ಸದುಪಯೋಗ
ಶನಿವಾರ. ಬ್ಯಾಗ್‌ ರಹಿತ ದಿನ. ಬ್ಯಾಗ್‌ ನ ಹೊರೆ ಇಲ್ಲ. ಶಾಲೆಯಲ್ಲಿ ಆಟದ ಬಯಲಿಗೆ ಬಿಡದೆ, ಪಾಠಗಳಿಗೆ ಪೂರಕ
ವಾಗಬಲ್ಲ ಅನೇಕ ಚಟುವಟಿಕೆಗಳನ್ನು ನಡೆಸಲು ಶನಿವಾರ ಅನುಕೂಲವಾಗಿದೆ ಎಂದು ಹೇಳಿದವನು ಪ್ರಾಂತ್ಯ ಶಾಲೆಯ ಖುಷಿರಾಜ್‌ ಮತ್ತು ಅಮೀರ್‌. ಮಂಚಿ ಶಾಲೆಯಿಂದ ಬಂದ ಹಂಸಿಲ, ಮೋಕ್ಷಿತಾ, ಗೌತಮಿ, ಧನ್ಯಶ್ರೀ ಇವರೆಲ್ಲ ಈಗಾಗಲೇ 3ರಿಂದ 5 ಕಡೆ ವರ್ಲಿ ಆರ್ಟ್‌ ಶಿಬಿರಗಳಲ್ಲಿ ಪಾಲ್ಗೊಂಡ ಅನುಭವಿಗಳು. 

Advertisement

ಇವರೊಂದಿಗೆ ಪ್ರಾಂತ್ಯಶಾಲೆಯ ಸುಮಿತ್ರಾ ಬಾಗಲಕೋಟೆ, ರಜ್ವಿನಾ, ಜಿತೇಶ್‌ ಮೊದಲಾದವರೆಲ್ಲ ಅನುಭವ ಪಡೆದು ಚಿತ್ರ ಬಿಡಿಸುತ್ತ ಮನೆಯ ಸುತ್ತಮುತ್ತಲೂ ಹೆತ್ತವರ ಅನುಮತಿಯೊಂದಿಗೆ ವರ್ಲಿ ಚಿತ್ತಾರ ಬಿಡಿಸುವ ಉತ್ಸಾಹ ವ್ಯಕ್ತಪಡಿಸಿದರು. ಹೊಸದಾಗಿ ಮೂಡಬಿದಿರೆಗೆ ಬಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ, ಸಿಆರ್‌ಪಿಗಳಾದ ಡೇಸಿ ಪಿಂಟೋ, ದಿನಕರ ಎಂ. ಸಹಕಾರದೊಂದಿಗೆ ಪ್ರಾಂತ್ಯ ಶಾಲಾ ಮುಖ್ಯಶಿಕ್ಷಕಿ ಭಾರತಿ, ಶಿಕ್ಷಕರು ಪಾಲ್ಗೊಂಡರು.

ವರ್ಲಿ ಆರ್ಟ್‌
ವ‌ರ್ಲಿ ಆರ್ಟ್‌ ಮೂಲತಃ ಮಹಾರಾಷ್ಟ್ರದ ಆದಿವಾಸಿ ಕಲೆ. ಗೋಡೆಗೆ ಸುಣ್ಣ ಬಳಿದು ಚೆನ್ನಾಗಿ ಒಣಗಿದ ಬಳಿಕ ಕಾವಿ ಕಲಸಿ ಪೇಂಟ್‌ ಮಾಡಿ ಅದರ ಮೇಲೆ ಕಬ್ಬಿಣದ ಮೊಳೆಯಿಂದ ಗೆರೆಗಳನ್ನು ಎಳೆಯುತ್ತ ಹೋದಂತೆ ಬಿಳಿಯ ಚಿತ್ತಾರ ಮೂಡುವುದೇ ವರ್ಲಿ ಅಥವಾ ವಾರ್ಲಿ ಆರ್ಟ್‌ ಎಂದೆನ್ನಲಾಗುತ್ತಿದೆ. ಆದರೆ ಈಗ ಬಿಳಿಯ ಗೋಡೆಯ ಮೇಲೆ
ಕಾವಿ ಚಿತ್ತಾರ ಮೂಡಿಸುವ ಅಥವಾ ಸ್ಥಾಯಿಯಾಗಿರುವ ಒಂದು ಬಣ್ಣದ ಮೇಲೆ ಬಿಳಿ ಅಥವಾ ಇತರ ಬಣ್ಣದ ಗೆರೆಗಳನ್ನು ಬರೆದು ಅವಶ್ಯವಿರುವಲ್ಲಿ ಬಣ್ಣ ತುಂಬುವ ಪ್ರಕ್ರಿಯೆ ನಡೆಸಲಾಗುತ್ತದೆ.

ವಿಷಯ ವೈವಿಧ್ಯ
ಮಕ್ಕಳಿಗೆ ವಿಷಯ ಯಾವುದೆಂಬುದು ಸಮಸ್ಯೆಯಾಗಿ ಕಾಡಿದಂತೆ ತೋರಲಿಲ್ಲ. ಮನೆ, ಹಟ್ಟಿ, ಆಟದ ಬಯಲು, ಆಟೋಟ, ನಲಿದಾಟ, ಗಿಡ, ಮರ, ಹಣ್ಣು , ಹಂಪಲು, ನದಿ, ಕಾಡು, ಬೆಟ್ಟ ಹೀಗೆ ಪರಿಸರದ ನೋಟಗಳು, ಶಾಲಾವರಣ, ಅಕ್ಷರದಾಸೋಹ ಕೊಠಡಿ ಹೀಗೆ ಹಲವು ಚಿತ್ತಾರಗಳು ಮಕ್ಕಳ ಕೈಯಲ್ಲಿ ಸುಂದರವಾಗಿ ಅರಳಿದವು.

 ಧನಂಜಯ್‌ ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next