ನಟ ಕಂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಮಾದರಿಯಾಗಿ ಇಟ್ಟುಕೊಂಡು ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳಿಗೆ ಬರವಿಲ್ಲ. ಉಪೇಂದ್ರ ಅವರಂಥಾಗಬೇಕು ಎಂದು ಪ್ರತಿದಿನ ಅನೇಕರು ಗಾಂಧಿನಗರದ ಅಡಿಯಿಡುತ್ತಲೇ ಇರುತ್ತಾರೆ. ಅದರಲ್ಲಿ ಯಶಸ್ವಿಯಾಗುವವರು ಎಷ್ಟು ಜನ ಅನ್ನೋದು ಬೇರೆ ಪ್ರಶ್ನೆ. ಆದರೆ ಅಂಥ ಪ್ರಯತ್ನಕ್ಕೆ ಕೈ ಹಾಕುವ ಕೆಲವರು ಆಗಾಗ್ಗೆ ತಮ್ಮ ಚಿತ್ರಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುತ್ತಾರೆ. ಈಗ ಅಂಥದ್ದೇ ಉಪೇಂದ್ರ ಅಭಿಮಾನಿ ರಣ ಚಂದು ಎನ್ನುವವರು, ಉಪ್ಪಿ ಸ್ಟೈಲ್ನಲ್ಲಿ ಚಿತ್ರವನ್ನು ಮಾಡಿದ್ದಾರೆ. ಆ ಚಿತ್ರದ ಹೆಸರು ‘ಡಿಚ್ಕಿ ಡಿಸೈನ್’.
ಅರೇ, ಇದೇನಿದು? ಚಿತ್ರದ ಹೆಸರೇ ವಿಚಿತ್ರವಾಗಿದೆಯಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುವ ರಣ ಚಂದು, ವಿಚಿತ್ರವಾಗಿದೆ ಎನ್ನುವ ಕಾರಣಕ್ಕೇ ಇಂಥದ್ದೊಂದು ಹೆಸರಿಟ್ಟಿದ್ದೇವೆ ಎನ್ನುತ್ತಾರೆ. ಅಂದಹಾಗೆ, ಈ ಚಿತ್ರದಲ್ಲಿ ರಣ ಚಂದು ಅವರೇ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಅಲ್ಲದೆ ಉಪೇಂದ್ರ ಅವರಂತೆಯೇ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಸೇರಿದಂತೆ ಚಿತ್ರದ ಹಲವು ವಿಭಾಗಗಳಲ್ಲಿ ಸ್ವತಃ ತಾವೇ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ರಣ ಚಂದು ಅವರಿಗೆ ನಾಯಕಿಯಾಗಿ ನಿಮಿಕಾ ರತ್ನಾಕರ್ ಜೋಡಿಯಾಗಿದ್ದಾರೆ. ಉಳಿದಂತೆ ನಟನ ಪ್ರಶಾಂತ್, ಸುಕೇಶ್, ರವಿ, ಮನೋಹರ್ ಗೌಡ ಮೊದಲಾದವರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ
ಇನ್ನು ತಮ್ಮ ‘ಡಿಚ್ಕಿ ಡಿಸೈನ್’ ಚಿತ್ರದ ಬಗ್ಗೆ ಮಾತನಾಡುವ ರಣ ಚಂದು, ‘ಒಂದೂವರೆ ಲಕ್ಷದಿಂದ ಶುರುವಾದ ಈ ಚಿತ್ರ ಈಗ ರಿಲೀಸ್ ಹಂತಕ್ಕೆ ಬಂದಿದೆ. ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆದ ನಂತರ ಚಿತ್ರದ ಬಗ್ಗೆ ವಿಶ್ವಾಸ ಹೆಚ್ಚಿತು. ಇನ್ನು ಈ ಚಿತ್ರದಲ್ಲಿ ಕಥೆಯೇ ಹೈಲೈಟ್. ಬೆಂಗಳೂರು ನೋಡಲು ಬರುವ ಹಳ್ಳಿ ಹುಡುಗನೊಬ್ಬ ಏನೇನು ಪರಿಪಾಟಲು ಅನುಭವಿಸುತ್ತಾನೆ ಅನ್ನೋದೆ ಚಿತ್ರದ ಕಥೆ. ಚಿತ್ರದಲ್ಲಿ ನಾಯಕ ನಗಿಸಿದ್ರೆ, ನಾಯಕಿ ಮನ ಕಲಕುವಂತೆ ಮಾಡುತ್ತಾಳೆ. ಕಾಲೇಜ್‌ನಲ್ಲಿ ‘ಡಿಚ್ಕಿ ಡಿಸೈನ್’ ಅಂಥ ಪದ ಬಳಸುತ್ತಾರೆ. ಈ ಪದಕ್ಕೆ ಕಲರ್‌ಫುಲ್ ಅಂತ ಅರ್ಥ ಬರುತ್ತದೆ. ಇಲ್ಲಿ ಹಿಪ್-ಹಾಪ್ ಇದೆ, ಕಾಲೇಜ್ ಲೈಫ್ ಇದೆ. ಇದೊಂದು ಯೂಥ್ಸ್ ಸಬ್ಜೆಕ್ಟ್ ಚಿತ್ರ’ ಎಂದು ವಿವರಣೆ ಕೊಡುತ್ತಾರೆ.
ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಮಾತನಾಡುವ ನಾಯಕಿ ನಿಮಿಕಾ ರತ್ನಾಕರ್, ‘ಮೊದಲ ಬಾರಿಗೆ ನಾನು ಹೀರೋಯಿನ್ ಆಗಿ ಮಾಡಿದ ಚಿತ್ರ ಇದು. ಈ ಚಿತ್ರದಲ್ಲಿ ನನಗೆ ಹೋಮ್ಲಿ, ಪೊಲೀಸ್ ಮತ್ತು ಗ್ಲಾಮರ್ ಹೀಗೆ 3 ವಿಭಿನ್ನ ಶೇಡ್‌ಗಳ ಪಾತ್ರವಿದೆ. ಒಂದೊಳ್ಳೆ ಚಿತ್ರ ಮಾಡಿರುವುದಕ್ಕೆ ಖುಷಿ ಇದೆ’ ಎಂದರು.
ಸುಮಾರು 2 ವರ್ಷದ ಹಿಂದೆ ಶುರುವಾದ ಈ ಚಿತ್ರ ಸದ್ಯ ತನ್ನ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ಧವಾಗಿದೆ. ಬೆಳಗಾವಿ, ಗೋವಾ ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಎಸ್. ಸಾಮ್ರಾಟ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಕಾರ್ಯವಿದೆ. ಚಿತ್ರದ 3 ಹಾಡುಗಳಿಗೆ ಕಾರ್ತಿಕ್ ಚೆನ್ನೋಜಿ ರಾವ್, ರೋಣದ ಬಕ್ಕೇಶ್ ಸಂಗೀತವಿದೆ