Advertisement

ಹೊಸಬೆಟ್ಟು ಶಾಲೆಯ ಗೋಡೆ ಮೇಲೆ ವರ್ಣ ಚಿತ್ತಾರ

02:02 PM Nov 23, 2021 | Team Udayavani |

ಸುರತ್ಕಲ್‌: ಇಲ್ಲಿನ ಹೊಸಬೆಟ್ಟುವಿನ ದ.ಕ. ಜಿಲ್ಲಾ ಪಂಚಾಯತ್‌ ಸರಕಾರಿ ಹಿ.ಪ್ರಾ. ಶಾಲೆಯ ಗೋಡೆ ತುಂಬಾ ಬಿಡಿಸಲಾದ ಬಣ್ಣ ಬಣ್ಣದ ಚಿತ್ರ ಕಲೆ ಇದೀಗ ಜನಾಕರ್ಷಣೆ ಪಡೆಯುತ್ತಿದೆ.

Advertisement

ತಾವು ಕಲಿತ ಶಾಲೆಯನ್ನು ಮಕ್ಕಳಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿಸುವ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿನಿ ಇದೀಗ ಬಿಸಿಯೂಟ ಅಕ್ಷರ ದಾಸೋಹ ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಇದರ ಜಿಲ್ಲಾ ನೋಡಲ್‌ ಅಧಿಕಾರಿಯಾಗಿರುವ ದಯಾವತಿ ಅವರು ಈ ಹೊಸ ಯೋಜನೆ ರೂಪಿಸಿ ಯಶಸ್ವಿಯಾಗಿದ್ದಾರೆ. ಬಿಸಿಯೂಟ ವಿಭಾಗದ ಇಒ ಆಗಿದ್ದ ಸಂದರ್ಭ 2008ರಲ್ಲಿ ಜಿಲ್ಲಾಡಳಿತದಿಂದ ಸಾರ್ವಜನಿಕ ಸೇವಾ ವಿಭಾಗದಲ್ಲಿ ಅವರು ಪ್ರಶಸ್ತಿ ಪಡೆದಿದ್ದರು. ಶಾಲೆಯ ಸೌಂದರ್ಯ ವರ್ಧನೆಗೆ 2.50 ಲಕ್ಷ ರೂ. ವೆಚ್ಚವನ್ನು ದಯಾವತಿ ಅವರೇ ಭರಿಸಿದ್ದಾರೆ. ಒಟ್ಟು 27 ಶಿಕ್ಷಕರು 4 ದಿನಗಳ ಕಾಲ ಶಾಲೆ ಸೌಂದರ್ಯ ಹೆಚ್ಚಿಸಲು ಶ್ರಮ ವಹಿಸಿದರು. ಶಾಲೆಯ ಗೋಡೆಗಳಲ್ಲಿ ಲಗೋರಿ, ಚಿನ್ನಿದಾಂಡು, ಕುಟ್ಟಿ ದೊಣ್ಣೆ, ಕಣ್ಣು ಮುಚ್ಚಾಲೆ, ಜೋಕಾಲಿ, ವ್ಯವಸಾಯ, ಮೀನುಗಾರಿಕೆ ಮತ್ತು ಹೈನುಗಾರಿಕೆ ಮುಂತಾದ ಚಿತ್ರಗಳನ್ನು ವರ್ಣಮ ಯವಾಗಿ ಚಿತ್ರಿಸಲಾಗಿದೆ. ಶಾಲೆಯ ವಿದ್ಯಾರ್ಥಿಗಳು ಸಹ ತಮಗೆ ಇಷ್ಟವಾದ ಚಿತ್ರಗಳನ್ನು ಪ್ರತ್ಯೇಕ ಗೋಡೆಯಲ್ಲಿ ರಚಿಸಿ ಸಂಭ್ರಮಿಸಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ಶರ್ಮಿಳಾ ಮತ್ತು ಸಿಬಂದಿ ವರ್ಗದವರ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಸಹಕಾರ ನೀಡಿದ್ದಾರೆ.

ಒಂದೆಡೆ ಚಿತ್ರಗಳು ಶಾಲೆಯ ಅಂದವನ್ನು ಹೆಚ್ಚಿಸಿದರೆ, ಇನ್ನೊಂದೆಡೆ ಕಲಾವಿದ ಶಿಕ್ಷಕರು ತಮ್ಮ ಕುಂಚದ ಮೂಲಕ ಬಿಡಿಸಿದ ಈ ಕಲಾಕೃತಿಗಳು ಕಲಾಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗುತ್ತಿವೆ.

ಹೊಸತನ ಮೂಡಿಸುವ ಉದ್ದೇಶ
ತಾನು ಕಲಿತ ಈ ಶಾಲೆಗೆ ಕೊಡುಗೆಯಾಗಿ ಅದರ ಗೋಡೆಗಳ ಸೌಂದರ್ಯ ವೃದ್ಧಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗೆ ಸುಣ್ಣ ಬಣದಿಂದ ಹೊಸತನ ಮೂಡಿಸುವ ಯೋಚಿಸಿದ್ದೆ. ಅದಕ್ಕೆ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ವರ್ಷ ಸೂಕ್ತ ಅನಿಸಿತು. ಸರಕಾರಿ ಶಾಲೆ ಎಂದರೆ ಅದೇ ಹಳೆಯ ಕಟ್ಟಡ, ಬಣ್ಣ ಹೋದ ಗೋಡೆಗಳ ಕಲ್ಪನೆ ಎದುರಿಗೆ ಬರುತ್ತದೆ. ಅದಕ್ಕೆ ಪೂರ್ಣ ಹೊಸತನವನ್ನು ನೀಡಿ, ಸೌಂದರಗೊಳಿಸಿ, ಶಾಲಾ ವಿದ್ಯಾರ್ಥಿಗಳ ಮನಸ್ಸನ್ನು ಸಂತೋಷಗೊಳಿಸುವುದು ಉದ್ದೇಶವಾಗಿತ್ತು. ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಮತ್ತು ಬಂಟ್ವಾಳ ತಾಲೂಕಿನ ಸುಮಾರು 27 ಮಂದಿ ಉದಯೋನ್ಮುಖ ಚಿತ್ರಕಲಾ ಶಿಕ್ಷಕರು 4 ದಿನಗಳ ಕಾಲ ವರ್ಣ ಸ್ಪರ್ಶ ಚಿತ್ರ ರಚನ ಕಾರ್ಯದಲ್ಲಿ ಸಹಕಾರ ನೀಡಿದ್ದಾರೆ.
-ದಯಾವತಿ,
ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next