ಬೊಗೊಟಾ: ಇಕ್ವೆಡಾರ್‌ನ ಪ್ರಮುಖ ನಗರ ಗಯಾಕ್ವಿಲ್‌ನ ಬೀದಿಯಲ್ಲಿ ಸಂಸ್ಕಾರಕ್ಕೆ ಕಾಯುತ್ತಿರುವ ಶವಗಳ ಚಿತ್ರಗಳನ್ನು ನೋಡಿ ವಿಚಲಿತರಾದ ಕೊಲಂಬಿಯಾದ ಉದ್ಯಮಿಯೊಬ್ಬರು ಇಂತಹ ದೃಶ್ಯಗಳು ಪುನರಾವರ್ತನೆ ಆಗುವುದನ್ನು ತಪ್ಪಿಸುವ ಸಲುವಾಗಿ ವಿಶಿಷ್ಟ ರೀತಿಯ ಬೆಡ್‌ಗಳನ್ನು ಆಸ್ಪತ್ರೆಗಳಿಗೆ ಕೊಡುಗೆ ನೀಡಿದ್ದಾರೆ. ಅಗತ್ಯವಿದ್ದಲ್ಲಿ ಅವುಗಳನ್ನು ಶವಪೆಟ್ಟಿಗೆಗಳಾಗಿ ಪರಿವರ್ತಿಸಲೂ ಸಾಧ್ಯವಾಗುವ ವಿನ್ಯಾಸ ಇವುಗಳಲ್ಲಿದೆ.
ಕೊಲಂಬಿಯಾದಲ್ಲಿ ಕೋವಿಡ್-19 ಅಷ್ಟೊಂದು ತೀವ್ರವಾಗಿಲ್ಲ. ಬೇರೆ ಕಡೆಗಳಲ್ಲಿ ಮಾತ್ರ ಆಸ್ಪತ್ರೆಗಳು ಹಾಗೂ ಶವಾಗಾರಗಳು ತುಂಬಿ ತುಳುಕುತ್ತಿವೆ. ತನ್ನ ದೇಶದಲ್ಲಿ ಇಂತಹ ಸ್ಥಿತಿ ಉದ್ಭವಿಸಿದರೆ ಉಪಯೋಗಕ್ಕಿರಲಿ ಎಂದು ರುಡಾಲೊ ಗೋಮೆಜ್ ಅವರ ಕಂಪನಿಯಲ್ಲಿ ಕಾರ್ಡ್ ಬೋರ್ಡ್‌ಗಳನ್ನು ಬಳಸಿ ಬೆಡ್-ಕಾಫಿನ್‌ಗಳನ್ನು ರೂಪಿಸಲಾಗಿದೆ.
ಇಕ್ವೆಡಾರ್‌ನಲ್ಲಿ ಜನರು ತಮ್ಮ ಸಂಬಂಧಿಕರ ಹೆಣಗಳನ್ನು ಹೊತ್ತು ಬೀದಿಗೆ ಬರುತ್ತಿದ್ದಾರೆ. ಶವಾಗಾರಗಳಲ್ಲೂ ವಿಪರೀತ ಒತ್ತಡವಿದೆ. ಇಂತಹ ಸ್ಥಿತಿಯಲ್ಲಿ ಉಪಯೋಗವಾಗಲೆಂದು ಇಂಥ ಬೆಡ್ ವಿನ್ಯಾಸ ಮಾಡಿದ್ದಾಗಿ ರುಡಾಲೊ#à ವಿವರಿಸಿದರು. ಲೋಹದ ರೇಲಿಂಗ್, ಚಕ್ರಗಳು, ಹಿಡಿಕೆಗಳು ಇರುವ ಈ ಹಾಸಿಗೆ 150 ಕೆ.ಜಿ. ಭಾರ ತಾಳಿಕೊಳ್ಳಬಲ್ಲದು. ಇದರ ವೆಚ್ಚ 92ರಿಂದ 132 ಡಾಲರ್. ಅಕಸ್ಮಾತ್ ರೋಗಿ ತೀರಿಕೊಂಡರೆ, ಇದನ್ನೇ ಶವ ಪೆಟ್ಟಿಗೆಯಾಗಿ ಬಳಸಬಹುದು. ಇದರಿಂದ ರೋಗ ಹರಡುವ ಸಾಧ್ಯತೆಯನ್ನೂ ಕಡಿಮೆ ಮಾಡಿದಂತಾಗುತ್ತದೆ. ಇವರ ಕಾರ್ಖಾನೆ ತಿಂಗಳಿಗೆ ಇಂತಹ 3,000 ಹಾಸಿಗೆಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಅತಿ ಹೆಚ್ಚು ಸಂಖ್ಯೆಯ ರೋಗಿಗಳಿರುವ ಲಿಟೀಶಿಯಾ ನಗರದ ಆಸ್ಪತ್ರೆಗೆ ಮೊದಲ ಹಾಸಿಗೆಯನ್ನು ಕೊಡುಗೆಯಾಗಿ ನೀಡಲಾಗಿದೆ. ಪೆರು, ಚಿಲಿ, ಬ್ರೆಜಿಲ್, ಮೆಕ್ಸಿಕೋ ಹಾಗೂ ಅಮೆರಿಕದಿಂದಲೂ ಇಂತಹ ಹಾಸಿಗೆಗಳಿಗೆ ಬೇಡಿಕೆ ಬಂದಿದೆ ಎಂದು ರುಡಾಲೊ ತಿಳಿಸಿದ್ದಾರೆ.