ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಹೋಗುವಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಡೆಲಿವರಿ ಬಾಯ್‌ಯೊಬ್ಬ ರಾಜಕಾಲುವೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬ್ಯಾಟರಾಯನಪುರ ನಿವಾಸಿ ಹೇಮಂತ್ ಕುಮಾರ್ (28) ನಾಪತ್ತೆಯಾಗಿರುವ ಡೆಲಿವರಿ ಬಾಯ್. ಈತನ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದುವರೆಗೂ ಆತ ಪತ್ತೆಯಾಗಿಲ್ಲ. ಭಾನುವಾರ ಕೂಡ ಶೋಧ ಕಾರ್ಯ ನಡೆಯಲಿದೆ ಎಂದು ಪೊಲೀಸರು ಹೇಳಿದರು.
ಪೋರ್ಟರ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಹೇಮಂತ್ ಕುಮಾರ್, ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮೈಸೂರು ರಸ್ತೆಯ ಜ್ಞಾನಭಾರತಿ ಕಡೆಯಿಂದ ಬ್ಯಾಟರಾಯನಪುರ ಕಡೆ ತೆರಳುತ್ತಿದ್ದ. ಮಾರ್ಗ ಮಧ್ಯೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಹೇಮಂತ್ ಕುಮಾರ್, ಬೈಕ್‌ನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದುಕೊಂಡಿದ್ದಾನೆ. ಬಳಿಕ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ರಾಜಕಾಲುವೆಗೆ ಬಿದ್ದಿದ್ದು, ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಆತ ಕೊಚ್ಚಿ ಹೋಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಪೊಲೀಸರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿ ಶುಕ್ರವಾರ ರಾತ್ರಿಯೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ತಡರಾತ್ರಿವರೆಗೂ ಹೇಮಂತ್ ಕುಮಾರ್ ಪತ್ತೆಯಾಗಿಲ್ಲ. ಹೀಗಾಗಿ ಶನಿವಾರ ಕೂಡ ಸುಮಾರು 2-3 ಕಿಲೋ ಮೀಟರ್ ಶೋಧ ಕಾರ್ಯ ನಡೆಸಿದರು. ಆದರೂ ಆತನ ಸುಳಿವು ಸಿಕ್ಕಿಲ್ಲ. ಆದರಿಂದ ಸದ್ಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸ ಲಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಮಧ್ಯೆ ಇದ್ದ ಕಂದಕ ಮುಚ್ಚದ್ದರಿಂದ ಅವಘಡ:
ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೋ ನಿಲ್ದಾಣ ಸಮೀಪದಲ್ಲಿ ದ್ವಿಮುಖ ರಸ್ತೆಗಳಿದ್ದು, ಒಂದು ಮೈಸೂರು ಕಡೆ, ಮತ್ತೂಂದು ಬ್ಯಾಟರಾಯನಪುರ ಕಡೆ ಸಂಪರ್ಕಿಸುತ್ತದೆ. ಈ ಎರಡು ರಸ್ತೆಗಳ ಮಾರ್ಗದಲ್ಲಿ ರಾಜಕಾಲುವೆ ಹಾದು ಹೋಗಿದ್ದು, ತಡೆಗೋಡೆ ನಿರ್ಮಿಸ ಲಾಗಿದೆ. ಆದರೆ, ಈ ಎರಡು ರಸ್ತೆಗಳ ಮಧ್ಯೆ ಸುಮಾರು 3-4 ಅಡಿ ಅಗಲ ಅಂತರದ ಕಂದಕ ವಿದ್ದು, ಅದನ್ನು ಬಿಬಿಎಂಪಿ ಅಧಿಕಾರಿಗಳು ಮುಚ್ಚಿಲ್ಲ. ಅದರಿಂದಲೇ ಈ ಅವಘಡ ಸಂಭವಿ ಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.