Advertisement

Kottigehara: ಸರ್ಕಾರಿ ಬಸ್ಸುಗಳ ಮುಖಾಮುಖಿ ಡಿಕ್ಕಿ, ಹಲವರಿಗೆ ಗಾಯ

02:51 PM Dec 10, 2023 | Team Udayavani |

ಕೊಟ್ಟಿಗೆಹಾರ: ಎರಡು ಸರ್ಕಾರಿ ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿ ಎರಡೂ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಬಳಿ ನಡೆದಿದೆ.

Advertisement

ಸರ್ಕಾರಿ ಬಸ್ಸುಗಳ ಅಪಘಾತಕ್ಕೆ ಎರಡೂ ಬಸ್ಸಿನ ಚಾಲಕರ ಬೇಜವಬ್ದಾರಿ ಹಾಗೂ ಅತಿ ವೇಗವಾಗಿ ಬಸ್‌ ಚಲಾಯಿಸಿದ್ದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಪಘಾತದ ಪರಿಣಾಮ ಎರಡು ಬಸ್ಸಿನ ಚಾಲಕರಿಗೆ ತುಸು ಹೆಚ್ಚಾಗಿ ಗಾಯವಾಗಿದೆ. ಏಕೆಂದರೆ ಬಸ್ಸುಗಳು, ಮುಖಾಮುಖಿ ಡಿಕ್ಕಿಯಾದ ಸಂದರ್ಭದಲ್ಲಿ ಕೂಡ ಎರಡು ಬಸ್ಸಿನ ಡ್ರೈವರ್ ಸೀಟಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಹಾಗಾಗಿ, ಎರಡು ಬಸ್ಸಿನ ಚಾಲಕರಿಗೂ ತುಸು ಹೆಚ್ಚಾಗಿ ಗಾಯವಾಗಿದೆ.

ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು 5 ಆಂಬುಲೆನ್ಸ್ ಗಳಲ್ಲಿ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಡಿಗೆರೆ ತಾಲೂಕು ಬಹುತೇಕ ಮಲೆನಾಡು ಭಾಗದಿಂದ ಕೂಡಿದೆ. ಇಲ್ಲಿ ಹಾವು ಬಳಕಿನ ಮೈ ಕಟ್ಟಿನ ರಸ್ತೆಯೇ ಹೆಚ್ಚು. ಹಾಗಾಗಿ, ವಾಹನಗಳ ಚಾಲಕರು ಅತ್ಯಂತ ಜಾಗರೂಕರಾಗಿ ವಾಹನ ಚಲಾಯಿಸಬೇಕು. ಇಲ್ಲವಾದರೆ ಅಪಘಾತ ಕಟ್ಟಿಟ್ಟ ಬುತ್ತಿ.

Advertisement

ಇಲ್ಲಿ ಹಾವು ಬಳುಕಿನ ಮೈಕಟ್ಟಿನ ರಸ್ತೆಯಾಗಿರುವುದರಿಂದ ಮೂಡಿಗೆರೆ ತಾಲೂಕಿನ ಅಲ್ಲಲ್ಲೇ ಸಾಕಷ್ಟು ಅಪಘಾತಗಳು ಕೂಡ ಸಂಭವಿಸುತ್ತಿವೆ. ಆದರೆ, ತರಬೇತಿ ಪಡೆದ ಸರ್ಕಾರಿ ಬಸ್ಸಿನ ಚಾಲಕರು ವೇಗವಾಗಿ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿರುವುದಕ್ಕೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next