ನವದೆಹಲಿ: ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲೀಜಿಯಂ ವ್ಯವಸ್ಥೆ “ಈ ನೆಲದ ಕಾನೂನು’ ಆಗಿದ್ದು, ಅದನ್ನು ಅಕ್ಷರಶಃ ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಖಾರವಾಗಿ ತಾಕೀತು ಮಾಡಿದ್ದು, ಕೊಲೀಜಿಯಂ ವಿರುದ್ಧ ಶಾಸಕಾಂಗದ ಕೆಲವರು ನೀಡಿರುವ ಹೇಳಿಕೆಗಳನ್ನು ಸಹಿಸಲು ಅಸಾಧ್ಯ ಎಂದಿದೆ.
ಕೊಲೀಜಿಯಂ ವ್ಯವಸ್ಥೆಯ ಬಗ್ಗೆ ಕೇಂದ್ರ ಸರಕಾರ ಮತ್ತು ನ್ಯಾಯಾಂಗದ ನಡುವೆ ಪ್ರಸ್ತುತ ಉಂಟಾಗಿರುವ ಅಭಿಪ್ರಾಯ ಬೇಧ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮತ್ತು ಕೇಂದ್ರ ಕಾನೂನು ಸಚಿವ ಕಿರಣ್ ರೆಜಿಜು ಈ ಬಗ್ಗೆ ನೀಡಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಈ ನಿಲುವನ್ನು ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳ ನೇಮಕ ನಡೆಸಲು ಕೊಲೀಜಿಯಂ ವ್ಯವಸ್ಥೆಯನ್ನು ರೂಪಿಸಿದ ಸಾಂವಿಧಾನಿಕ ಪೀಠದ ತೀರ್ಪನ್ನು ಎಲ್ಲರೂ ಅನುಸರಿಸಲೇ ಬೇಕಿದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾ| ಎ.ಎಸ್. ಓಕಾ ಮತ್ತು ನ್ಯಾ| ವಿಕ್ರಮ್ ನಾಥ್ ಅವರಿದ್ದ ನ್ಯಾಯಪೀಠವು ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿದೆ.
ಕೊಲೀಜಿಯಂ ಮಾಡಿರುವ ಶಿಫಾರಸುಗಳನ್ನು ನ್ಯಾಯಾಲಯ ಹಾಕಿರುವ ಸಮಯಮಿತಿಯಲ್ಲಿ ಕೇಂದ್ರ ಸರಕಾರವು ಅಂಗೀಕರಿಸುತ್ತಿಲ್ಲ ಎಂಬುದಾಗಿ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.
ವಿಚಾರಣೆಯ ವೇಳೆ “ಸಾಂವಿಧಾನಿಕ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳು’ ಕೊಲೀಜಿಯಂ ವ್ಯವಸ್ಥೆಯ ವಿರುದ್ಧ ಹೇಳಿಕೆ ನೀಡಿರುವುದನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು. ಕೊಲೀಜಿಯಂ ವಿಚಾರದಲ್ಲಿ ಎಚ್ಚರಿಕೆಯಿಂದ ಮಾತನಾಡುವಂತೆ ಸರಕಾರದ ಭಾಗವಾಗಿರುವವರಿಗೆ ಸೂಚಿಸುವಂತೆ ನ್ಯಾ| ವಿಕ್ರಮ್ ನಾಥ್ ಅಟಾರ್ನಿ ಜನರಲ್ ಅವರಿಗೆ ತಾಕೀತು ಮಾಡಿದರು.