ಬೆಂಗಳೂರು: ರಾಜ್ಯದ ಸರಕಾರಿ ಪದವಿ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿಯಾಗಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ವಿವಿಧ ಕಾಲೇಜುಗಳ ಕೋರಿಕೆ ಯಂತೆ ದಾಖಲಾತಿ ಪ್ರಮಾಣಕ್ಕೆ ಅನುಗುಣವಾಗಿ ವಿಭಾಗವಾರು ಲಭ್ಯವಿರುವ ಕೋರ್ಸ್, ತರಗತಿ ಕೊಠಡಿಗಳ ಸಂಖ್ಯೆಯಂತೆ ಹೆಚ್ಚುವರಿಯಾಗಿ ವಿದ್ಯಾರ್ಥಿ ಗಳನ್ನು ದಾಖಲಿಸಿಕೊಳ್ಳಲು ಇಲಾಖೆ ಒಪ್ಪಿದೆ.
ಉನ್ನತ ಶಿಕ್ಷಣ ದಾಖಲಾತಿ ಪ್ರಮಾಣ ಹೆಚ್ಚಿಸಲು ವಿವಿ ಮತ್ತು ಸರಕಾರಿ ಕಾಲೇಜುಗಳಿಗೆ ಈಗಾ ಗಲೇ ಮಂಜೂರಾಗಿರುವ ಪ್ರವೇಶ ಮಿತಿಗಿಂತ ಶೇ. 20ರಷ್ಟು ಹೆಚ್ಚುವರಿ ಪ್ರವೇಶಾತಿಯನ್ನು ನೀಡಬಹು ದಾಗಿದೆ.
ಕಾಲೇಜಿನ ನಿರ್ದಿಷ್ಟ ಇನ್‌ಟೇಕ್ (ಸೀಟು ಹಂಚಿಕೆ ಪ್ರಮಾಣ) ಮೀರಿಯೂ ವಿದ್ಯಾರ್ಥಿಗಳು ಪ್ರವೇಶ ಬಯಸಿದರೆ, ದಾಖಲಿಸಿಕೊಳ್ಳಬೇಕು. ಪ್ರಾಂಶುಪಾಲರಿಗೆ ಈ ಬಗ್ಗೆ ಯಾವುದೇ ಗೊಂದಲ ಬೇಡ. ಲಭ್ಯವಿರುವ ತರಗತಿಗಳ ಅನುಗುಣವಾಗಿ ಪ್ರವೇಶ ನೀಡಬೇಕು. ಒಂದು ವಿಭಾಗಕ್ಕೆ 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದರೆ ಆ ವಿದ್ಯಾರ್ಥಿಗಳನ್ನು ಹಾಲಿ ವಿಭಾಗದಲ್ಲಿಯೇ ಸೇರಿಸಿಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದರೆ ನೂತನ ವಿಭಾಗವನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದು ಕೇವಲ ಐಚ್ಛಿಕ ವಿಷಯಗಳಿಗೆ ಮಾತ್ರ ಅನ್ವಯಿಸಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದ ಕಾರಣಕ್ಕೆ ಮೂಲ ಸೌಕರ್ಯಗಳ ಕೊರತೆ ಎದುರಾದಲ್ಲಿ ಆಯಾ ಕಾಲೇಜುಗಳಲ್ಲಿ ಬ್ಯಾಚ್, ಶಿಫ್ಟ್ ಆಧಾರದಲ್ಲಿ ತರಗತಿ ನಡೆಸಬೇಕು. ಪಾಳಿ ಪದ್ಧತಿಯಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಪ್ರತ್ಯೇಕ ಬ್ಯಾಚ್‌ಗಳನ್ನು ಮಾಡಿ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.
ಕಾರ್ಯಪಡೆ ರಚನೆ
ನ. 17ರಿಂದ ಕಾಲೇಜುಗಳು ಆರಂಭವಾಗಲಿದ್ದು, ಈ ವೇಳೆ ಸುರಕ್ಷಾ ಕ್ರಮ ಅನುಸರಿಸುವುದಕ್ಕಾಗಿ ಕಾಲೇಜು ಹಂತದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಅಧ್ಯಕ್ಷರಾಗಿದ್ದು, ಹೆಚ್ಚುವರಿ ನಿರ್ದೇಶಕರು, ಜಂಟಿ ನಿರ್ದೇಶಕರು, ನೋಡಲ್ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಈ ಸಮಿತಿಯು ಸರಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರಿಗೆ ಸಮನ್ವಯ ಸಾಧಿಸಿ ಎಸ್‌ಒಪಿ ಮಾರ್ಗಸೂಚಿಗಳ ಅನ್ವಯ ತರಗತಿ ಆರಂಭಿಸಬೇಕೆಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ.