Advertisement

ಕಾಲೇಜು ರಾಜಕೀಯ

06:30 AM Sep 01, 2017 | Team Udayavani |

ನಮ್ಮ ಭಾರತ ದೇಶವು ಪ್ರಜಾಪ್ರಭುತ್ವ ಹೊಂದಿರುವ ಮಹಾನ್‌  ದೇಶ ಎಂಬುದು ಎಲ್ಲರಿಗೂ ತಿಳಿದ ವಿಷಯ. ಈ ವ್ಯವಸ್ಥೆಯಿಂದಾಗಿ “ರಾಜಕೀಯ’ ಎಂಬ ಪದವು ನಾಡಿನ ಮೂಲೆ ಮೂಲೆಗೂ ಆಕ್ರಮಿಸಿಕೊಂಡಿರುವಂತಾಗಿದೆ. ಪ್ರಸಕ್ತ ಸಮಾಜದಲ್ಲಿ ರಾಜಕೀಯಕ್ಕೆ ಹೊಲಸು ಸ್ಪರ್ಶಿಸಿರುವುದು ಸುಳ್ಳಲ್ಲ. ಈ ರಾಜಕೀಯದ ಏರಿಳಿತದ ಪ್ರಕ್ರಿಯೆಗಳು ಸಮಾಜದಲ್ಲಿ ತೀವ್ರ ರೀತಿಯಲ್ಲಿದ್ದರೂ, ಅದು ಮೊದಲಾಗಿ ಚಿಗುರೊಡೆಯುವುದು ಕಾಲೇಜು ಶಿಕ್ಷಣದೊಂದಿಗಿನ ವಿದ್ಯಾಭ್ಯಾಸದಲ್ಲಿ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ  ಪಾರ್ಲಿಮೆಂಟ್‌ಗಳು ಇದ್ದರೂ ಚುನಾವಣೆಯ ಕಿಚ್ಚು ಅಷ್ಟೊಂದು ಪ್ರಭಾವಿಯಾಗಿರಲಾರದು. ಬದಲಾಗಿ  ಮೇಲೇರಿದಂತೆ ಅಂದರೆ ಪದವಿ ಹಾಗೂ ಡಿಗ್ರಿ ತರಗತಿಗಳಲ್ಲಿ ಅದರ ತೀವ್ರತೆ ಇನ್ನೂ ನೈಜ ಸ್ವರೂಪವ ತಾಳಿಕೊಳ್ಳುವುದಂತೂ ನಿಶ್ಚಿತ. ಆಲೋಚನೆಗಳಿಂದಲೇ ದೂರ ಸರಿದು, ಬಣ್ಣನೆಗೆ ನಿಲುಕದ ವಿಚಾರಗಳ ಸ್ಪಷ್ಟ ಚಿತ್ರಣಗಳೇ ಕೈಸಿಗದಂತೆ ಬೆಳೆದು ಬಂದಿದೆ ಕಾಲೇಜು ಆವರಣದ ಎಲೆಕ್ಷನ್‌ಗಳು.

Advertisement

ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘವನ್ನು ಅಸ್ತಿತ್ವದಲ್ಲಿಡಲು ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿ ಸಮಾಜಮುಖೀ ಕಾರ್ಯಗಳ ಮುಂದಾಗುವಿಕೆಗೆ ತಮ್ಮಿಂದಾಗುವ ಸಹಕಾರದ ಉದ್ದೇಶವನ್ನಿರಿಸಿ ಆಯಾ ಕಾಲೇಜು ಆಡಳಿತ ಮಂಡಳಿಯು ಪ್ರತಿ ಕಾಲೇಜುಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಹಮ್ಮಿಕೊಳ್ಳುವುದಂತೂ ಸರ್ವೇಸಾಮಾನ್ಯವಾದುದು. 

ಹಾಗೆಯೇ ಮುಂದಿನ ಹಂತದ ಏಳಿಗೆಗೆ ಪ್ರಾಥಮಿಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಭವಿಷ್ಯದ ರಾಜಕೀಯ ಪ್ರಪಂಚಕ್ಕೆ ತನ್ನ ಹೆಜ್ಜೆಯಿರಿಸಲು ಇದು ಬಹಳ ಉಪಕಾರಿ. ಆದರೆ, ಇವೆಲ್ಲವೂ ಕೇವಲ ಈ ಸಂದರ್ಭಕ್ಕೆ ಮೊಟಕುಗೊಂಡಿತ್ತೆಂತಾದರೆ ಕಾಲೇಜು ಚುನಾವಣೆಯು ಸೂತ್ರರಹಿತ ಗಾಳಿಪಟವನ್ನು  ಗಾಳಿಯಲ್ಲಿ  ತೂರಿಬಿಟ್ಟಾಗ ಅದು ಹಾರಾಡುವ ಸ್ಥಿತಿಗೆ ಬಂದುಬಿಡುವುದು ನಿಶ್ಚಿತ. ಇಂದು ಅದೇ ಮಟ್ಟಕ್ಕೆ ಬಂದ ಶೋಚನೀಯ ಸ್ಥಿತಿ ಸಮಾಜದಲ್ಲಿ ಕಣುಟುಕುವಂತಾಗಿದೆ. ಕಾಲೇಜಿನಲ್ಲಿ ನಾಯಕತ್ವದ ಗುಣ ಬೆಳೆಸಿದವ ಮುಂದಿನ ರಾಜಕೀಯ ರಂಗದಲ್ಲಿ ಕಂಡುಬರುವುದು ಕೇವಲ ಬೆರಳೆಣಕೆಯಷ್ಟು. ಹಾಗಾದರೆ ಈ ಚುನಾವಣಾ ಕಾರ್ಯವೈಖರಿ ಕೇವಲ ಕಾಲೇಜಿನ ಆವರಣದ ಶೋಭೆಗೆ ಮಾತ್ರ ಸೀಮಿತವೇ? ಅಥವಾ ಮನೋರಂಜನೆಯ ಉದ್ದೇಶವೆ? ಒಟ್ಟಾಗಿ ಇವೆಲ್ಲವೂ ಇಂದು ವಿರುದ್ಧ ದಿಕ್ಕಿಗೆ ಹೆಜ್ಜೆಹಾಕಿದಂತಿದೆ ಎಂದು ಹೇಳಬಹುದು. 

ತಂತ್ರಗಾರಿಕೆ
ಕಾಲೇಜು ಚುನಾವಣೆಗೂ-ರಾಷ್ಟ್ರ ಚುನಾವಣೆಗೂ ಅಜಗಜಾಂತರ ವ್ಯತ್ಯಯಗಳು ಇರುವುದು ಸಹಜ. ಆದರೆ, ಮತ ಕೇಳಿ ಪಡೆಯುವ ನೀಚ ಕಾರ್ಯದ ಆಳಕ್ಕೆ ಇಳಿವ ವ್ಯವಸ್ಥೆ ಮಾತ್ರ ಎಲ್ಲೆಡೆ ವಿಸ್ತರಿಸಿರುವಂತಾದು. ಪ್ರತಿಯೊಂದು ಕಾಲೇಜಿನಲ್ಲಿ ಎರಡೋ-ಮೂರೋ ಚುನಾವಣಾ ಪಕ್ಷಗಳು ಕಣದಲ್ಲಿರುವುದು ಸಾಮಾನ್ಯ. ಇವೆಲ್ಲವೂ ಕಾಲೇಜು ಆವರಣಕ್ಕೆ ಮಾತ್ರ ಸೀಮಿತ ವಾಗಿದ್ದರೂ ಆ ಪಕ್ಷಗಳಿಗೆ ಅವರದ್ದೇ ಆದ ಧ್ಯೇಯ, ಸಂಕೇತಗಳನ್ನು ಚಿತ್ರಿಸಿಕೊಳ್ಳುವುದೂ ಇದೆ. ಆದರೆ  ಅದನ್ನೇ ಮುಂದಿಟ್ಟುಕೊಂಡು ತಪ್ಪುದಾರಿ ಹಿಡಿದರೆ? ಚುನಾವಣಾ ಸಂದರ್ಭದಲ್ಲಿ  ಒಂದು ಪಕ್ಷವು ಇನ್ನೊಂದು ಪಕ್ಷದ ವಿರುದ್ಧ ಅವರ ನೂನ್ಯತೆಗಳನ್ನು ಗುರುತಿಸಿಕೊಂಡು, ಅದನ್ನೇ ಕೇಂದ್ರೀಕರಣಗೊಳಿಸಿ ಎದುರಾಳಿಗಳನ್ನು  ಬಗ್ಗುಬಡಿದು ಮತಗಳಿಸುವ ಸಂಚುಹೂಡುತ್ತಾರೆ. ಅದರೊಂದಿಗೆ ಏನೆಲ್ಲಾ ತಂತ್ರವನ್ನು ಹೆಣೆಯುತ್ತಾರೆ. ಕೆಲವು ಕಾಲೇಜುಗಳಲ್ಲಿ ಅಸ್ತಿತ್ವದಲ್ಲಿರುವ ಪಕ್ಷಗಳಿಗೆ ಧ್ಯೇಯ, ಉದ್ದೇಶ, ಸಂಕೇತಗಳೇ ಇಲ್ಲದೆ ಕೇವಲ ಚುನಾವಣಾ ಹಿನ್ನೆಲೆಯಲ್ಲಿ ಯಾವುದೋ ರಾಜಕೀಯ ಪಕ್ಷದ ಅಡಿಯಾಳಾಗಿ ಕಾಲೇಜಿನಲ್ಲಿ ನೆಲೆಯೂರಿಕೊಂಡು ಕಾರ್ಯಕರ್ತರನ್ನು ಜೊತೆಗೂಡಿಸುವ ಹುರುಪಿನಲ್ಲಿರುತ್ತಾರೆ. ಅಂತಹ ಕಾಲೇಜಿನ ಚುನಾವಣಾ ಪ್ರಚಾರವು ತೀರಾ ಬದಲಾವಣೆಯಿಂದ ಕೂಡಿರಲೂಬಹುದು. ಹೇಗೆಂದರೆ ಅನೇಕ ಇತಿಹಾಸ ಹಾಗೂ ಹೆಸರುವಾಸಿಯಾದ ಪಕ್ಷವು ಒಂದೆಡೆ ನೆಲೆಯಾಗಿದೆಯೆಂದಾದರೆ ಆ ಪಕ್ಷದ ವಿರುದ್ದ ಬೇಡದ ಅವಹೇಳನ ಮಾತುಗಳು, ಅಪ್ರಚಾರ ಮಾಡುವುದೇ ಅವರ ಧ್ಯೇಯವಾಗಿರುತ್ತದೆ. ಒಟ್ಟಿನಲ್ಲಿ ಎದುರಾಳಿ ಪಕ್ಷದ ಅಸ್ತಿತ್ವವನ್ನು ಅಲ್ಲೋಲಕಲ್ಲೋಲಗೊಳಿಸಿ ನಾಯಕ ಸ್ಥಾನದ ಮಹದಾಸೆಯಿಂದ ಆ ಹಂತಕ್ಕೆ ತಮ್ಮನ್ನು ಗುರುತಿಸಿಕೊಳ್ಳಲು ಇವೆಲ್ಲ ಇವರ ನಿತ್ಯಕಾರ್ಯವೇ ಎಂದು ಹೇಳಬಹುದು.  
     
ವಾಕ್ಸಮರಗಳು
ಚುನಾವಣಾ ಪ್ರಸ್ತುತತೆಯಲ್ಲಂತೂ ಎಲ್ಲಾ ರೀತಿಯ ಅಗೋಚರ ಸಂಗತಿಗಳು ಕಣ್ಮುಂದೆ ಗೋಚರವಾಗುವ ಸಾಧ್ಯತೆಗಳೇ ಹೆಚ್ಚು. ಆದರೆ, ನಾವ್ಯಾರ ತಂಟೆಗೂ ಇಲ್ಲಪಾ, ನಾವಾಯಿತು ನಮ್ಮ ಪಾಡಾಯಿತು ಅನ್ನುತ್ತಾ ಕೂರಿಬಿಡುವ ವಿದ್ಯಾರ್ಥಿಗಳೂ ಇದ್ದಾರೆ. ಚುನಾವಣಾ ಸಂದರ್ಭದಲ್ಲಿ ವಿದ್ಯಾರ್ಥಿಗಳು  ಕಣಳ ಚಲನೆ ಸರಿದಾಡಲೂ ಪುರುಸೊತ್ತು ಕೊಡದೇ ನೋಡನೋಡುತ್ತಿದ್ದಂತೆ ಎದುರಾಳಿ ಪಕ್ಷದ ಮೇಲಿನ ಮುನಿಸಿಗೋ ಅಥವಾ ಕಾರಣ ರಹಿತವಾಗಿಯೂ ಜಗಳಕ್ಕೆ ಮುಂದಾಗುವುದು ಕಂಡುಬರುವ ವಿಷಯ. 

ಯಾರದೋ ವಿಚಾರ ಮುಂದಿಟ್ಟುಕೊಂಡು ಇಂತೆಲ್ಲ  ಕೃತ್ಯಗಳಿಗೆ ಮುಂದಾಗಿ, ಕಾಲೇಜಿನ ಮರ್ಯಾದೆ ಹಾನಿ ಮಾಡುವ ಸಂಗತಿಗಳು ನಡೆಯುವುದುಂಟು. ಇವೆಲ್ಲ ನಡೆದಾಗ ಮುಖ್ಯ ವ್ಯಕ್ತಿಗಳ ಆಗಮನ ಅಥವಾ ಪೊಲೀಸರ ಶಿಸ್ತಿನ ಕಟ್ಟುನಿಟ್ಟು ಅಗತ್ಯವೇ ಸರಿ. ಜಗಳ ಎನ್ನುವಂತಾದುದು ಮಾಮೂಲಿ. ವರ್ಷದ ಚುನಾವಣೆಗೆ ಸಣ್ಣ ಮಟ್ಟದಲ್ಲಾದರೂ ಕಾಲುಜಗಳಕ್ಕೆ ಅಣಿಹಾಕದೇ ಹೋದಲ್ಲಿ ಆ ಚುನಾವಣೆ ವಿಜೃಂಭಿಸದು. ಚುನಾವಣಾ ಪ್ರಿಯಕರಿಗೆ ಅದು ಅಪೂರ್ಣವೆಂದು ಅಂದರೂ ತಪ್ಪಿಲ್ಲ. ಇಷ್ಟೆಲ್ಲ  ವಿವಾದಗಳ ನಡುವೆಯೂ ಕಾಲೇಜಿನಲ್ಲಿ  ಚುನಾವಣೆಗಳು ಕೇಂದ್ರ ಬಿಂದುವಾಗಿ ಕಂಡುಬರುತ್ತದೆ. ಕಾಲೇಜಿನ ಚುನಾವಣೆ ಕೇವಲ ಕಾಲೇಜಿನ ಆವರಣಕ್ಕೆ ಸೀಮಿತವಾಗಿರಬೇಕೇ ಹೊರತು ಸಮಾಜದ ಮೂರನೇ ವ್ಯಕ್ತಿ ನಮ್ಮೊಂದಿಗೆ ಬೆರೆಯುವುದು ಸರಿಯಲ್ಲ. ಹೀಗೆ ಯಾವುದೇ ಆಗಿರಲಿ, ಅವೆಲ್ಲವೂ ಸಮತಲದಲ್ಲಿದ್ದರೆ ಅದಕ್ಕೊಂದು ಕಳೆಯಿದ್ದಂತೆ ಹಾಗೂ  ಇವೆಲ್ಲ ಇಲ್ಲಿಗೆ ಮಾತ್ರ ಸೀಮಿತವಾಗಿದ್ದರೆ ಅರ್ಥಪೂರ್ಣ. ಆದರೆ, ಭವಿಷ್ಯದ ರಾಜಕೀಯಕ್ಕೆ ಇಲ್ಲಿಂದಂತೂ ನಾಯಕರು ಸಿಗಲಾರರು ಎಂಬುದು ಹಲವರ ಅಭಿಪ್ರಾಯ, ಸಿಕ್ಕರೂ ಬೆರಳೆಣಿಕೆಯಷ್ಟು. ಏಕೆಂದರೆ ಈ ವಿಷಯದಲ್ಲಿ ಭವಿಷ್ಯದ ಕುರಿತು ಮಗ್ನರಾಗುವುದು ಬಹಳ ವಿರಳ. 

Advertisement

– ಗಣೇಶ ಪವಾರ್‌
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next