ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ… ಹೀಗೆ ಜೀವನದ ಪಯಣದಲ್ಲಿ ನಮ್ಮ ಜತೆಗೆ ನೆನಪುಗಳ ಆಗರ ಇರುತ್ತದೆ. ಈ ನೆನಪಿನ ಬುತ್ತಿಯ ವಿಚಾರ ಹೇಳುವುದಕ್ಕೆ ಕಾರಣವಿದೆ. ಮೊನ್ನೆ ಒಂದು ಪೆನ್ ಖರೀದಿಸಲು ಅಂಗಡಿಗೆ ಹೋದಾಗ ಅಲ್ಲಿ ಅಂಕಲ್ ಅಲ್ಲ ಮಾರಾಯ ನೀನು ಮೊನ್ನೆಯಷ್ಟೇ ಬಂದದ್ದು, ಛೇ ಅಷ್ಟು ಬೇಗ 2 ವರ್ಷ ಕಳೆದು ಹೋಯಿತಲ್ಲ ಎಂದರು. ನನಗೂ ಒಮ್ಮೆ ಹಿಂತಿರುಗಿ ನೋಡಿದಾಗ ಸ್ನಾತ್ತಕೋತ್ತರ ಪದವಿಯ 2 ವರ್ಷಗಳು 2 ನಿಮಿಷದ ಮ್ಯಾಗಿ ನೂಡಲ್ಸ್ ತಯಾರಿಸಿದ ಹಾಗೆ ವೇಗವಾಗಿ ಮುಗಿಯಿತು ಅನಿಸುತ್ತದೆ.
ಲೆಕ್ಕಾಚಾರ ಮಾಡಿ ನೋಡಿದರೆ ತಾರತಮ್ಯ ಇಲ್ಲದೆ ಪ್ರತಿಯೊಬ್ಬರಿಗೂ ಸಿಗುವುದು 24 ಗಂಟೆ ಮಾತ್ರ. ಸಿನೆಮಾದಲ್ಲಿ ಮೊದಲ ಭಾಗದಂತೆ 18 ವರ್ಷಗಳು ಶೈಕ್ಷಣಿಕ ಓದು ಮುಗಿದು ಕೆಲವರು ಪೂರ್ಣ, ಕೆಲವರು ಅಲ್ಪ ವಿರಾಮ ಇರುತ್ತಾರೆ. ನಿಜವಾದ ಕಥೆ ಆರಂಭವಾಗುವುದು ಮಕ್ಕಳು ಚಿಕ್ಕವರಿದ್ದಾಗ. ಮಗು 10ನೇ ತರಗತಿ, ಪಿಯುಸಿ ಚೆನ್ನಾಗಿ ಓದಿದರೆ ಸಾಕು ಲೈಫ್ ಬದಲಾಗುತ್ತದೆ. ಮುಂದೆ ಎಂಜಿನಿಯರಿಂಗ್, ಮೆಡಿಕಲ್, ಬಿಎಸ್ಸಿ , ಎಂಬಿಎ ಕೋರ್ಸ್ ಮುಗಿಸಿದರೆ ಲೈಫ್ ಸೆಟ್ಲ ಎಂಬ ಮಾತುಗಳು ಕೇಳಿ ಬರುವುದು ಸಹಜ. ಇದಕ್ಕೆ ಪ್ರತಿಯಾಗಿ ಖಾಸಗಿ ಸಂಸ್ಥೆಗಳು ಆಯಸ್ಕಾಂತದಂತೆ 100% ಪ್ಲೇಸ್ಮೆಂಟ್ ಗ್ಯಾರಂಟಿ ಎಂದು ಹೇಳಿ ವಿದ್ಯಾರ್ಥಿಗಳನ್ನು ಆಕರ್ಷಿಸುವುದೂ ಉಂಟು, ಸದ್ಯ ಆ ವಿಚಾರ ಬೇಡ.
ಪ್ರಸ್ತುತ ಶಾಸ್ತ್ರಬದ್ಧವಾಗಿ ಸ್ನಾತಕೋತ್ತರ ಪೂರ್ಣಗೊಂಡಿದ್ದು, ನೆನಪುಗಳ ಬುತ್ತಿಯನ್ನು ಒಂದೊಂದಾಗಿ ನೋಡಿದರೆ, ಮೊದಲು ನೆನಪಿಗೆ ಬರುವುದು ಆಹಾರ. ಉತ್ತರ ಕರ್ನಾಟಕದ ಕಡೆಯಲ್ಲ ಊಟದಲ್ಲಿ ಉಪ್ಪು, ಖಾರ, ಇಲ್ಲವಾದರೆ ಊಟಕ್ಕೆ ಸ್ವಾದವೇ ಇರುವುದಿಲ್ಲ. ರೊಟ್ಟಿ, ಪಲ್ಯ, ಶೇಂಗಾ ಹಿಂಡಿ, ಮೊಸರು ಸವಿಯುವುದರ ಸಂತೋಷವೇ ಬೇರೆ. ಮನೆಯಲ್ಲಿ ಸ್ವಲ್ಪ ಹೆಚ್ಚು ಖಾರ ತಿನ್ನು ಅನ್ನುತ್ತಿದ್ದರು. ಆದರೆ ಮಂಗಳೂರಿಗೆ ಬಂದ ಮೊದಲ ದಿನ ನಾನು ಖಂಡಿಸಿದ್ದು ಇಲ್ಲಿನ ಆಹಾರವನ್ನು. ಉಪ್ಪು, ಖಾರ ಪ್ರಮಾಣ ಪರೀಕ್ಷೆಯಲ್ಲಿ ಪಾಸಾಗಲು ಬೇಕಾದ ಅಂಕಗಳ ಹಾಗೇ ಇತ್ತು. ಬೇರೆ ದಾರಿ ಇಲ್ಲದೆ ಪಾಲಿಗೆ ಬಂದದ್ದು ಪಂಚಾಮೃತದಂತೆ ಸ್ವೀಕಾರ ಮಾಡಿದೆ.
ಇನ್ನೂ ಸ್ನಾತಕೋತ್ತರದಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಯಾದ ಕಾರಣ ಶೈಕ್ಷಣಿಕವಾಗಿ ಓದಿನ ಜತೆಗೆ ಕೆಮರಾ, ನಿರೂಪಣೆ, ಎಡಿಟಿಂಗ್, ರಿಪೋರ್ಟಿಂಗ್, ಬರವಣಿಗೆಗಳ ಕೌಶಲದಲ್ಲಿ ಪ್ರಗತಿ ಮತ್ತು ದೊಡ್ಡ ಕಾರ್ಯಕ್ರಮಗಳು, ಸ್ಪರ್ಧೆಗಳಲ್ಲಿ ಭಾಗವಹಿಸಿದರಿಂದ ಚಿಂತನಾ ಲಹರಿ ಇಮ್ಮಡಿಗೊಳಿಸಿದೆ.
ಬದುಕು ಜಟಕಾ ಬಂಡಿಯಂತೆ. ವೀಕೆಂಡ್‌ನಲ್ಲಿ ಜಾಲಿಯಾಗಿ ಬೈಕ್‌ನಲ್ಲಿ ಆಗುಂಬೆ, ಬಲ್ಲಾಳ್‌ರಾಯನ ಬೆಟ್ಟ, ಶೃಂಗೇರಿ, ಹೊರನಾಡು ಹೀಗೆ ಸುತ್ತಮುತ್ತಲಿನ ನಯನ ಮನೋಹರದ ಪರಿಸರದ ಪರಿಚಯ ಮತ್ತು ಹೆಚ್ಚಿನ ಸ್ಥಳಗಳಿಗೆ ಹಾಜರಾತಿ ಆಯಿತು.
ಸೀರಿಯಲ್ ನೋಡುವಾಗ ಬರುವ ಜಾಹೀರಾತುಗಳಂತೆ ಇಂಟರ್ನ್ಶಿಪ್ ಮಾಡುವ ಅವಕಾಶ ದೊರೆಯಿತು. ಮುಂಚೆ ಎಲ್ಲರಂತೆ ಟಿವಿ ತೆರೆಯ ಮೇಲಿನ ಚೆಂದದ ಪ್ರಪಂಚ ಮಾತ್ರ ಕಾಣುತಿತ್ತು. ಇಂಟರ್ನ್ಶಿಪ್ ಮಾಡಿದಾಗ ತೆರೆಯ ಹಿಂದೆ ಕಾಣದ ಕೈಗಳ ಪರಿಶ್ರಮದ ಪರಿಚಯವಾಯಿತು. ಜತೆಗೆ ಹೊಸ ಜನರ ಪ್ರೀತಿಯ ಅನುಬಂಧ ಆರಂಭವಾಯಿತು.
ಅಂತೂ ಇಂತೂ 2 ವರ್ಷಗಳ ಸ್ನಾತಕೋತ್ತರದ ಲೈಫ್ನಲ್ಲಿ ಕಹಿ – ಸಿಹಿಗಳ ಅನುಭವಗಳು ತುಂಬಿವೆ. ಕಾಲೇಜಿನ ಸೆಕ್ಯೂರಿಟಿಯಿಂದ, ಡ್ರೈವರ್ ಅಣ್ಣಾ, ಕ್ಯಾಂಟೀನ್ ಅಂಕಲ್, ಲೈಬ್ರರಿ ಮೇಡಂ, ಮ್ಯೂಸಿಯಮ್ ಗ್ರೇಟ್ ಅಜ್ಜ, ಶಿಕ್ಷಕ ವೃಂದ, ಸ್ನೇಹಿತರು ಹೀಗೆ ಎಲ್ಲ ಸಿಬಂದಿ ಜತೆ ಕಳೆದ ಸಮಯ, ತಮಾಷೆ, ಹರಟೆ, ನೆನಪುಗಳ ಆಗರದೊಂದಿಗೆ ಜೀವನದ ಪಯಣ ಮುಂದುವರೆದಿದೆ.
–
ಆನಂದ ಜೇವೂರ್
ಆಳ್ವಾಸ್ ಕಾಲೇಜು ಮೂಡುಬಿದಿರೆ