ಜೀವನವೆಂಬುದು ಸಮುದ್ರದಂತೆ, ಕಡಲ ತೀರದಲ್ಲಿ ನಡೆಯುತ್ತಾ ಹೋದರೆ ಸಾಗುತ್ತಲೇ ಇರುವುದು ಪಯಣ. ಯಾರಿಗೂ ತಿಳಿಯದು, ಇನ್ನೂ ಎಷ್ಟು ದೂರವಿರಬಹುದು ಎಂದು. ಕನಸೆಂಬ ಹೆಮ್ಮರವನ್ನು ಹೊತ್ತು ಸಾಗುತ್ತಿದ್ದ ನನಗೆ, ಸಮುದ್ರದ ಅಲೆಗಳಂತೆ ಕೆಲ ವ್ಯಕ್ತಿಗಳು ಕೆಲ ಕಾಲ ಸ್ನೇಹಿತರಂತೆ ಇದ್ದು ಈಗ ಬಾರಿ ನೆನಪು ಮಾತ್ರ. ಆದರೆ ಪಯಣ ಮಾತ್ರ ಸಾಗುತ್ತಲೇ ಇತ್ತು. ಹೆಚ್ಚಿನ ವ್ಯಾಸಂಗಕ್ಕಾಗಿ ಗೊತ್ತಿಲ್ಲದ ಊರು, ಕಾಲೇಜು, ಜನರ ನಡುವೆ ನಾನೊಬ್ಬಳು ಏಕಾಂಗಿ ಎನಿಸುತ್ತಿತ್ತು.
ಜೀವನದ ಕೆಲವು ಕಹಿ ಘಟನೆಗಳಿಂದ ಯಾರನ್ನು ನಂಬುವುದು. ಯಾರನ್ನು ಬಿಡುವುದು ತಿಳಿದಿರಲಿಲ್ಲ. ನೋವಿನ ಕಣ್ಣೀರ ಹನಿ ಸುರಿದು ಮುಗಿದ ಮೇಲೆ ನಗುಮುಖದಿ ನೋಡಿದರೆ ಎಲ್ಲರೂ ಸ್ನೇಹಿತರು, ಆತ್ಮೀಯರಂತೆ ಕಾಣುವರು. ಸ್ನೇಹವೆಂಬುದು ಎರಡು ಮನಸ್ಸುಗಳ ನಡುವೆ ಬರುವ ನಿಷ್ಕಲ್ಮಶ, ಭಾವುಕ ಸಂಬಂಧ. ಕತ್ತಲೆಂಬ ಬದುಕಿಗೆ ದಾರಿದೀಪವಾಗುವ ಸುಂದರ ಆತ್ಮದ ಬಂಧ.
ಕಾಲೇಜು ಲೈಫ್ ಇಸ್ ಗೋಲ್ಡನ್ ಲೈಫ್ ಅನ್ನೋ ಮಾತು ಸತ್ಯ. ಸ್ನೇಹಕ್ಕೆ ವಯಸ್ಸು, ಜಾತಿ, ಬಣ್ಣ ಬೇಕಾಗಿಲ್ಲ. ಬದಲಾಗಿ ಪುಟ್ಟ ಮನಸ್ಸಿದ್ದರೆ ಸಾಕು. ಕಾಲೇಜಿನಲ್ಲಿ ಕೆಲವರ ಪರಿಚಯ, ಆ ಪರಿಚಯ ನಿಷ್ಕಲ್ಮಶ ಗೆಳೆತನವಾಗಿ ಬದಲಾಯಿತು. ಗೆಳೆಯರೊಂದಿಗೆ ಇದ್ದಾಗ ನಮ್ಮ ನಿಜವಾದ ವ್ಯಕ್ತಿತ್ವ ಹೊರಬರುತ್ತದೆ. ಕಾಲೇಜಿನಲ್ಲಿ ಮಾಡಿದ ಮೋಜು, ಮಸ್ತಿಗಳಿಗೆ ಲೆಕ್ಕವೇ ಇಲ್ಲ. ಕಾಲೇಜು ಮೆಟ್ಟಿಲು ಹತ್ತಿದ್ದ ನನಗೆ, ಕಾಗದದ ದೋಣಿಯಲ್ಲಿ ನನ್ನನ್ನು ತುಂಬಿ ನೀರಿನಲ್ಲಿ ಬಿಟ್ಟ ಹಾಗೇ ಅನಿಸುತ್ತಿತ್ತು. ಎಲ್ಲಿ ನನ್ನ ಕನಸು ನೀರಿನಲ್ಲಿ ಮುಳುಗುತ್ತದೆಯೇ ಏನೋ ಭಯ ಒಂದು ಕಡೆ ಕಾಡತೊಡಗಿತ್ತು. ಏಕೆಂದರೆ ನನ್ನೊಡನೆ ಇರುವವರ ಯೋಚನೆ ಮತ್ತು ಬರವಣಿಗೆ , ವಿಚಾರವನ್ನು ನೋಡಿದಾಗ ಪರ್ವತದ ಮುಂದೆ ನಿಂತ ಸಣ್ಣ ತೃಣದ ಹಾಗೆ ಭಾಸವಾಗುತ್ತಿತ್ತು. ಆ ಸಮಯದಲ್ಲಿ ನನ್ನ ಕೈ ಹಿಡಿದು ದಾರಿ ತೋರಿದವರು ಭವಿತಾ (ಅಕ್ಕ). ನನಗಿಂತ ಒಂದು ತರಗತಿಯಲ್ಲಿ ಹಿರಿಯರಾದರು ದರ್ಪ, ಅಸೂಯೆ, ಅಹಂಕಾರವಿಲ್ಲದೆ, ಸ್ನೇಹಿತರಂತೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು. ಅವರಿಗೆ ತಿಳಿದಿರುವ ವಿಚಾರ, ಬರಹ ವೈಖರಿ, ಪದಗಳ ಮಂಡನೆ ಹೊರ ಜಗತ್ತಿನ ವಿಶಾಲವನ್ನು ಮನವರಿಕೆ ಮಾಡಿ ಕೊಡುತ್ತ, ನನ್ನ ಜೀವನದ ಹಾದಿಯಲ್ಲಿ ಸಹನೆ ಮತ್ತು ಶಾಂತಿಯುತ ದಾರಿಯನ್ನು ತೋರುವಲ್ಲಿ ನೆರವಾಯಿತು.
ಕಾಲೇಜು ಜೀವನದಲ್ಲಿ ಭವಿತಾ ನನಗೆ ಸಿಕ್ಕ ಅತ್ಯಮೂಲ್ಯ ವ್ಯಕ್ತಿ. ಕಾಲೇಜು ಪಯಣವನ್ನು ತುಂಬ ಸಂತೋಷದಿಂದ ದಾಟಿ, ಮುಂದಿನ ವ್ಯಾಸಂಗಕ್ಕಾಗಿ ಬೇರೆ ಬೇರೆ ಕಡೆಗಳಿಗೆ ಹೆಜ್ಜೆ ಹಾಕಿದ್ದೇವೆ. ಆದರೂ ಕೂಡ ಇವತ್ತಿನ ದಿನಗಳವರೆಗೂ ಏನೇ ಸಂಕಷ್ಟ, ಗೊಂದಲ ಎದುರಾದರೂ ಒಂದೇ ಒಂದು ಬಾರಿ ಅವರಿಗೆ ಕರೆ ಮಾಡಿದರೆ ಸಾಕು. ತಾನು ಎಷ್ಟೇ ಕಾರ್ಯ ನಿರತರಾಗಿದ್ದರೂ ಕೂಡ ತಾಳ್ಮೆಯಿಂದ ಸಾವಿರ ಪ್ರಶ್ನೆಗಳಿಗೂ ನಗುಮುಖದಿ ಶಾಂತಯುತವಾಗಿ ವಿವರಿಸುತ್ತಾ ಸದಾ ಬೆನ್ನೆಲುಬಾಗಿ ನಿಂತು ಮಾರ್ಗದರ್ಶಿಸುತ್ತಿರುವ ನಿಮಗೆ ನಾನು ಸದಾ ಚಿರಋಣಿ. ನಿಮ್ಮ ಸಹಾಯ, ತಾಳ್ಮೆ, ಸ್ನೇಹಯುತ ಮನೋಭಾವನೆಯನ್ನು ಬದಲಾಯಿಸಬೇಡಿ. ನೀವು ಕಂಡ ಕನಸುಗಳೆಲ್ಲ ನನಸಾಗಲಿ.
ಕೀರ್ತಿ, ಪುರ
ಫಿಲೋಮಿನಾ ಕಾಲೇಜು, ಪುತ್ತೂರು