Advertisement

ಗೆಜ್ಜೆಕಟ್ಟಿ ಹೆಜ್ಜೆ ತಪ್ಪದ ಬೋಧಕರು

07:21 PM Apr 04, 2019 | mahesh |

ತೆಂಕಿನ ನಾಟಕೀಯ ಬಣ್ಣಗಾರಿಕೆಯ ವೇಷಗಾರಿಕೆ ಮೂಲಕ, ಕಂಸನ ಮಾನಸಿಕ ತುಮುಲಗಳನ್ನು, ಕನಸಿನಲ್ಲಿ ಕಂಡ ಭಯಂಕರಗಳನ್ನು, ಕೃಷ್ಣನನ್ನು ಕೊಲ್ಲುವೆನೆಂಬ ಭ್ರಮೆಯನ್ನು, ಹುಚ್ಚು ಧೈರ್ಯವನ್ನು ಅಚ್ಚುಕಟ್ಟಾಗಿ ಅಭಿನಯಿಸಿದರು. ಸ್ವರಗಾಂಭೀರ್ಯದ ಮೂಲಕ ಕಂಸನಿಗೊಂದು ಗತ್ತು ಗೈರತ್ತು ಒದಗಿಸಿಕೊಟ್ಟರು.

Advertisement

ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಚಾರ್ಯ, ಬೋಧಕರು ಕಾಲೇಜು ವಾರ್ಷಿಕೋತ್ಸವ ನಿಮಿತ್ತ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಯಕ್ಷಗಾನ ಪ್ರದರ್ಶಿಸಿದರು. ಅದಕ್ಕಾಗಿ ಅವರು ಆಯ್ದುಕೊಂಡದ್ದು ಕಂಸವಧೆ ಪ್ರಸಂಗ. ಕಂಸನಾಗಿ ಘನ ಗಾಂಭೀರ್ಯದಿಂದ ಮಿಂಚಿದ್ದು ಕಾಲೇಜಿನ ಪ್ರಭಾರ ಪ್ರಾಚಾರ್ಯ ಚೇತನ್‌ ಶೆಟ್ಟಿ ಕೋವಾಡಿ .ಆರಂಭದಲ್ಲಿ ಯಕ್ಷಗಾನದ ಪೂರ್ವರಂಗ ಪ್ರದರ್ಶನ ನಡೆಯಿತು. ಇದರಲ್ಲಿ ಬಾಲಗೋಪಾಲರಾಗಿ ಪ್ರಥಮ ಬಿ.ಕಾಂ. ಎ ವಿಭಾಗ ವಿದ್ಯಾರ್ಥಿ ಪ್ರಸನ್ನ, ಪ್ರಥಮ ಬಿ.ಕಾಂ. ಬಿ ವಿಭಾಗದ ವಿದ್ಯಾರ್ಥಿನಿ ರಶ್ಮಿ ಚೆಂದನೆಯ ಪ್ರಸ್ತುತಿ ನೀಡಿದರು. ಪ್ರಸಂಗ ಪ್ರಾರಂಭವಾದಾಗ ಅಕ್ರೂರನ ಮೂಲಕ ಕಂಸವಧೆಗೆ ಶ್ರೀಕಾರ ಹಾಕಿದ್ದು ವಾಣಿಜ್ಯ ಉಪನ್ಯಾಸಕ ಯೋಗೀಶ್‌ ಶಾನುಭೋಗ್‌. ಕೃಷ್ಣನ ಮೇಲಿನ ಪ್ರೀತಿ, ಭಕ್ತಿ, ಕಂಸನ ಮೇಲಿನ ರಾಜಭಯವನ್ನು ಸಾತ್ವಿಕವಾಗಿ ಪ್ರಸ್ತುತಪಡಿಸಿ ಬಿಲ್ಲಹಬ್ಬಕ್ಕೆ ಕೃಷ್ಣನನ್ನು ಆಹ್ವಾನಿಸಿ, ಅಲ್ಲಿ ಬರಿಯ ಬಿಲ್ಲಹಬ್ಬ ಅಲ್ಲ ಅದು ಕೃಷ್ಣನನ್ನು ಕೊಲ್ಲುವ ಹಬ್ಬವಾಗಲಿದೆ ಎಂಬ ಸೂಕ್ಷ್ಮವನ್ನು ಹೇಳಿದರು. ಇಡೀ ಪ್ರಸಂಗದುದ್ದಕ್ಕೂ ಗಮನ ಸೆಳೆವಂತೆ, ವೃತ್ತಿಪರ ಕಲಾವಿದರಿಗೆ ಸಮದಂಡಿಯಾಗಿ, ಅಭಿನಯಚಾತುರ್ಯ, ವಾಕ್‌ಚಾತುರ್ಯದ ಮೂಲಕ ಒಟ್ಟು ರಂಗದಲ್ಲಿ ಕಳೆಗಟ್ಟಿಸಿದ್ದು ಕೃಷ್ಣ ಪಾತ್ರಧಾರಿ ವಾಣಿಜ್ಯ ಉಪನ್ಯಾಸಕ ರಕ್ಷಿತ್‌ ರಾವ್‌ ಗುಜ್ಜಾಡಿ. ದೇಹವನ್ನು ಬಾಗಿಸಿ, ಕುಣಿಸಿ, ದಂಡಿಸಿ, ಅಭಿನಯಿಸಿ ಸಾರ್ಥಕವಾಗಿ ರಂಗವನ್ನು ಬಳಸಿಕೊಂಡರು.

ಇದಕ್ಕೆ ಅನುಕೂಲ ಒದಗಿಸುವ ಹಾಡುಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಭಾಗವತ ಭಾಸ್ಕರ್‌ ಆಚಾರ್ಯ ಅವರು ನೀಡಿದರು. ಕೃಷ್ಣನ ತುಂಟಾಟ, ಕಂಸವಧೆಗೆ ಹೊರಡುವಾಗಿನ ಗಾಂಭೀರ್ಯ, ದುಷ್ಟವಧೆ ಮಾಡಬೇಕೆನ್ನುವ ಕಳಕಳಿ, ಶಿಷ್ಟ ರಕ್ಷಣೆ ಮಾಡಬೇಕೆಂಬ ತುಡಿತ, ಪ್ರಪಂಚವನ್ನು ರಕ್ಷಿಸಬೇಕೆಂಬ ಧಾವಂತ ಇದೆಲ್ಲ ಅವರ ಮಾತಿನಲ್ಲಿ ಕಂಡುಬಂತು. ಯಕ್ಷಗಾನದಲ್ಲಿ ಇಂದಿನ ಮಕ್ಕಳಿಗೆ ಆಸಕ್ತಿ ಇಲ್ಲದೆ ಅಲ್ಲ ನಾವು ಆಸಕ್ತಿ ಹುಟ್ಟಿಸಬೇಕು ಎನ್ನುವುದು ಈ ಪ್ರದರ್ಶನದಿಂಧ ಶ್ರುತಪಟ್ಟಿತು. ಇದಕ್ಕೆ ಪೂರಕವಾಗಿ ಕೃಷ್ಣ ಪಾತ್ರಧಾರಿ ಅರ್ಥದಲ್ಲಿ ಇವರೆಲ್ಲ ಇಲ್ಲಿ ಕುಳಿತದ್ದು ನಾನು ಕೇಳುತ್ತೇನೆ ಎಂಬ ಭಯದಿಂದ ಅಲ್ಲ ಎಂದರು. ಇಂಗ್ಲೀಷ್‌ ಉಪನ್ಯಾಸಕಿ ಅಮೃತಾ ಅವರು ನಗುಮುಖದಿಂದ ಕೃಷ್ಣನ ಅವತಾರ ಕಾರ್ಯಗಳಿಗೆ ನೆರವಾಗುವ ಬಲರಾಮನಾಗಿ ಅಭಿನಯಿಸಿದರು.

ಕುಣಿದು ದಣಿದು ಅರ್ಥ ಹೇಳಲು ತೊಡಕಾಗದಂತೆ ಕೃಷ್ಣ ಪಾತ್ರಧಾರಿ ಸಹಕರಿಸಿದ್ದು ಕಲಾವಿದರೊಳಗಿನ ಹೊಂದಾಣಿಕೆ ಹಾಗೂ ಒಟ್ಟಂದದ ಪ್ರದರ್ಶನದ ಮೇಲೆ ಅವರಿಗಿದ್ದ ಕಾಳಜಿಯನ್ನು ಕಾಣಿಸಿತು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರವೀಣ್‌ ಮೊಗವೀರ ಗಂಗೊಳ್ಳಿ ರಾಜ ರಜಕನಾಗಿ ಹಾಸ್ಯವನ್ನು ತಂದರು. ಚಾಣೂರನಾಗಿ ವಾಣಿಜ್ಯ ಉಪನ್ಯಾಸಕ ಸತೀಶ್‌ ಶೆಟ್ಟಿ ಹೆಸ್ಕತ್ತೂರು, ಮುಷ್ಟಿಕನಾಗಿ ಗಣಕ ವಿಜ್ಞಾನ ವಿಭಾಗ ಉಪನ್ಯಾಸಕ ಹರೀಶ್‌ ಕಾಂಚನ್‌ ಅಭಿನಯಿಸಿದರು. “ಧೂರ್ತ ಕಂಸನ ಹೃದಯ ಸ್ತಂಭಿಸಲು ಗೋವಳರ ವರ್ತಮಾನವ ಕೇಳಿ’, “ಈ ಪರಿಯ ಚಿಂತಿಸುತ ಭಯದಿಂ, ಏನ ಮಾಡಲಿ ನಾನಿನ್ನೇನ ಮಾಡಲಿ ಏನ ಕಂಡೆನು ಕನಸ’ ಎಂದು ಕನಸು ಕಂಡ ಕಂಸ, “ಉರಿವುದು ಒಂದೇ ದೀಪ’, “ನೆತ್ತಿಗೆ ತೈಲವನೊತ್ತುತ’ ಮೊದಲಾದ ಪದ್ಯಗಳಿಗೆ ಅತ್ಯಂತ ಸುಂದರವಾದ ಅಭಿನಯ ಮಾತುಗಾರಿಕೆ ಪ್ರಸ್ತುತಿಯನ್ನು ನೀಡಿದ್ದು ಕಾಲೇಜಿನ ಪ್ರಭಾರ ಪ್ರಾಂಶುಪಾಲ, ಕಂಸ ಪಾತ್ರಧಾರಿ ಚೇತನ್‌ ಶೆಟ್ಟಿ ಕೋವಾಡಿ. ತೆಂಕಿನ ನಾಟಕೀಯ ಬಣ್ಣಗಾರಿಕೆಯ ವೇಷಗಾರಿಕೆ ಮೂಲಕ, ಕಂಸನ ಮಾನಸಿಕ ತುಮುಲಗಳನ್ನು, ಕನಸಿನಲ್ಲಿ ಕಂಡ ಭಯಂಕರಗಳನ್ನು, ಕೃಷ್ಣನನ್ನು ಕೊಲ್ಲುವೆನೆಂಬ ಭ್ರಮೆಯನ್ನು, ಹುಚ್ಚು ಧೈರ್ಯವನ್ನು ಅಚ್ಚುಕಟ್ಟಾಗಿ ಅಭಿನಯಿಸಿದರು. ಸ್ವರಗಾಂಭೀರ್ಯದ ಮೂಲಕ ಕಂಸನಿಗೊಂದು ಗತ್ತು ಗೈರತ್ತು ಒದಗಿಸಿಕೊಟ್ಟರು.

“ಮಲೆತು ನಿಲುವೆ ಏಕೆ ಮಾವ ಅಳಿಯನಲ್ಲವೇ’ ಎಂದು ಕೃಷ್ಣ ಕಂಸರ ಸಂಭಾಷಣೆ ಸೇರಿದಂತೆ ಎಲ್ಲೂ ಇವರೆಲ್ಲ ವೃತ್ತಿಪರರಲ್ಲ, ಹವ್ಯಾಸಿಗಳು ಎಂದು ತೋರ್ಗೊಡದೆ ನೀಡಿದ ಪ್ರದರ್ಶನ ಇದಾಗಿತ್ತು. ಜತೆಗೆ ಕನ್ನಡ ಉಪನ್ಯಾಸಕ ಸುಕುಮಾರ ಶೆಟ್ಟಿ ಕಮಲಶಿಲೆ ಅವರ ಭಾಗವತಿಕೆಗೂ ಚಪ್ಪಾಳೆ ಬೀಳುತ್ತಿತ್ತು. ತೆಂಕು ಬಡಗಿನ ವೇಷಭೂಷಣ ಇದ್ದರೂ ಹಾಡುಗಾರಿಕೆ ಬಡಗುತಿಟ್ಟು ಮಾತ್ರವಿತ್ತು. ಖಳ ವೇಷಗಳಿಗೆ ತೆಂಕಿನ ವೇಷಗಾರಿಕೆ ಬಳಸಲಾಗಿತ್ತು. ಹಿಮ್ಮೇಳದಲ್ಲಿ ಭಾಗವತರಾಗಿ ಭಾಸ್ಕರ್‌ ಆಚಾರ್ಯ ಮಾರಣಕಟ್ಟೆ, ಮದ್ದಳೆ- ಪ್ರಭಾಕರ ಆಚಾರ್ಯ ಮಾರಣಕಟ್ಟೆ, ಚಂಡೆ-ಭಾಸ್ಕರ್‌ ಆಚಾರ್ಯ ಕನ್ಯಾನ ಅವರಿದ್ದರು.

Advertisement

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next