Advertisement

College Days: ಕಾಲೇಜು ದಿನಗಳು

03:01 PM Mar 09, 2024 | Team Udayavani |

ಕಾಲೇಜಿನಲ್ಲಿ ಕಳೆದ ದಿನಗಳು ಪುನಃ ಮರುಕಳಿಸಲು ಸಾಧ್ಯವಿಲ್ಲ. ಆದರೆ ನೆನಪುಗಳನ್ನು ಜೀವನವಿಡೀ ನೆನೆಯುತ್ತ ಖುಷಿ ಪಡಬಹುದು.

Advertisement

ಅದೊಂದು ದಿನ ನಾನು ಮೊದಲ ದಿನ ಡಿಗ್ರಿ ಕಾಲೇಜಿಗೆ ಹೋದಾಗ ನನ್ನ ಮನ ಮಂಕಾಗಿ ಕೂತಿದ್ದು ಮಾತ್ರ ನಿಜ ಆದರೆ ನನಗೆ ಅನಿಸಿದ್ದು ವಾತಾವರಣವೇ ನನ್ನ ಭಯವನ್ನು ಕಂಡು ಮಂಕಾಗಿತ್ತ ಎಂದು ನಾನು ಮುಂದೆ ಹೆಜ್ಜೆ ಇಡುತ್ತ ನಾನು ಕಲಿತ ಕ್ಲಾಸ್‌ ರೂಮಿನತ್ತ ನನ್ನ ಮನಸ್ಸು ಕರೆದುಕೊಂಡು ಹೋದಂತೆ, ಅದೇ ಜಾಗದಲ್ಲಿ ಕಳೆದ ಮೂರು ವರ್ಷಗಳು, ಹಿಂದೆ ಇದೇ ಕ್ಲಾಸ್‌ ರೂಮ್‌ “ಭೂತ ಬಂಗಲೆ’ ತರಹ ಕಾಣುತ್ತಿತ್ತು, ಇದೇ ಕ್ಲಾಸ್‌ ರೂಮಲ್ಲಿ ಒಂಟಿಯಾಗಿ ನಿಂತಿದ್ದೂ ಹೌದು. ಮನೆಗೆ ಹೋಗಬೇಕಾದ ಕೆಲವೇ ದಿನಗಳಲ್ಲಿ ಎಲ್ಲರೂ ನಮ್ಮವರೆನಿಸಿದರು.

ಈಗ ಒಂದೇ ಕುಟುಂಬ ಬಿಟ್ಟು ಹೋಗಬೇಕಲ್ಲ ಅನ್ನೋ ಸಂಕಟ. ದಿನ ಬೇಗ ಮುಗಿದರೆ ಸಾಕು ಅಂದುಕೊಳ್ಳುತ್ತಿದ್ದ ನಾನು ಅಂದು ಇನ್ನೂ ಸ್ವಲ್ಪ ದಿನ ಕಾಲೇಜು ಇರಬಾರದಿತ್ತಾ ಎಂದು ಅನಿಸಿತು. ಒಂದು ಸಲ ನಾವು ಓದಿದ ಕಾಲೇಜು ಇದುವೆಯಾ? ಎಂಬ ಸಣ್ಣ ಅನುಮಾನ ಬರಲು ಶುರು ಆಯ್ತು. ಒಂದೇ ರೀತಿಯ ಸಂಭ್ರಮ ಸಡಗರ, ಎಲ್ಲೆಡೆ ವರ್ಣಮಯ ವಾತಾವರಣ.

ಯಾವುದೋ ಊರು, ಯಾವುದೋ ಕೇರಿ, ಭಾಷೆ-ಧರ್ಮ, ಬರುವ ದಾರಿ ಬೇರೆ ಬೇರೆಯಾದರು ಬಂದು ಸೇರುತ್ತಿದ್ದುದು ಮಾತ್ರ ಒಂದೇ ಜಾಗಕ್ಕೆ. ರಕ್ತ ಸಂಬಂಧಗಳು ಆಗದೆ ಇದ್ದರೂ ಅದಕ್ಕೆ ಮೀರಿದ ಸಂಬಂಧಗಳು ಒಂದಿಷ್ಟು

ಕೋಪ, ಮನಸ್ತಾಪ ಅದರ ಮಧ್ಯೆಯೂ ಪ್ರೀತಿ-ಕಾಳಜಿ. ಅದೆಷ್ಟೋ ಫ್ರೆಂಡ್ಸ್ ಇದ್ದರೂ ಸಹ ನಮ್ಮಲ್ಲೇ ಒಬ್ಬರು ಅಥವಾ ಇಬ್ಬರು ಸ್ಪೆಷಲ್‌ ಫ್ರೆಂಡ್ಸ್ ಅಂತ ಇರುತ್ತಿದ್ದರು.

Advertisement

ನನಗೆ ತಿಳಿಯದ ವಿಷಯವನ್ನು ಅವರು ತಿಳಿದುಕೊಂಡಿದ್ದರು.. ಕೊನೆ ಇಲ್ಲದಷ್ಟು ಮಾತು, ಹರಟೆ, ನಗು, ಸಂಬಂಧವೇ ಇಲ್ಲದ ವಿಷಯಕ್ಕೆ ಚರ್ಚೆಗಳು, ಕೆಲವರಂತೂ ಫೋನ್‌ ಒಳಗೆ ಹೋಗಿರುತ್ತಿದ್ದರೋ ಅಥವಾ ಅವರ ಒಳಗೆ ಫೋನ್‌ ಹೋಗಿರುತ್ತಿತ್ತೋ ತಿಳಿಯುತ್ತಿರಲಿಲ್ಲ.

“ಎಲ್ಲಿದಿಯಾ ಇಷ್ಟೊತ್ತಿಗೆ ಬರ್ತೀಯ?, ಕ್ಲಾಸ್‌ ಗೆ ಬರಲ್ವಾ?, ಮೊದಲ ಕ್ಲಾಸ್‌ ಯಾರದು?, ಅಯ್ಯೋ ನಾನಂತು ಅವರ ಕ್ಲಾಸಿಗೆ ಬರಲ್ಲ, ಯಾವ ಕ್ಲಾಸ್‌ ಬಂಕ್‌ ಮಾಡೋಣ?, ಇವತ್ತು ಏನ್‌ ತಿಂಡಿ ತಿಂದೆ?’ ಎಂಬುದೆಲ್ಲ ಹೆಚ್ಚಾಗಿ ನಡೆಯುತ್ತಿದ್ದ ಸಂಭಾಷಣೆಗಳಲ್ಲಿ ಕೆಲವವು.

ಇನ್ನು ತರಗತಿ ಶುರುವಾಯಿತೆಂದರೆ ಇದ್ದಕ್ಕಿದ್ದ ಹಾಗೆ ಎಕ್ಸಾಮ್‌ ಕಣ್ಣ ಮುಂದೆ ಬಂದು ನಿಂತಿರುತ್ತಿತ್ತು. ಇವತ್ತು ಎಕ್ಸಾಮ್‌ ಅಂತ ಅನಿಸ್ತಾ ಇದ್ದಿದ್ದು, ಕ್ಲಾಸ್‌ ಗೆ ಬಂದು ಫ್ರೆಂಡ್ಸ್ ತಲೆ ಕೆಳಗೆ ಹಾಕೊಂಡು ಓದೋದನ್ನ ನೋಡಿದ ಮೇಲೆಯೇ. ಎಲ್ಲ ಓದಿದ್ರು ಏನು ಓದಿಲ್ಲ ಅನ್ನೋ ಫ್ರೆಂಡ್ಸ್, ಏನು ಓದಿಲ್ಲ ಅಂದ್ರು ತುಂಬಾ ಕೂಲ್‌ ಆಗಿರುವ ಫ್ರೆಂಡ್ಸ್, ಎಲ್ಲಿ ಮರೆತು ಹೋಗುತ್ತೋ ಅಂತ ತಲೆಬಿಸಿಯಲ್ಲಿ ಓಡಾಡುವ ಫ್ರೆಂಡ್ಸ್, ಅವರೆಲ್ಲರ ಮಧ್ಯೆ ಎಕ್ಸಾಮ್‌ ಗೂ ಟೆಂಕ್ಷನ್‌ ಗೂ ಅಂತಿಮ ಅವಧಿಯ ಕ್ಲಾಸ್‌ ನಲ್ಲಿ ಕುಳಿತು ಪಾಠ ಕೇಳುವುದಕ್ಕಿಂತ ಹೊರಗಡೆ ಕಲಿತಿದ್ದೆ ಜಾಸ್ತಿ.

ಸಿಲಬಸ್‌ ಕಷ್ಟ ಅಂತ ಲೆಕ್ಚರರ್ಸ್‌ ಇಷ್ಟ ಆಗ್ತಾ ಇರ್ಲಿಲ್ವೋ ಅಥವಾ ಲೆಕ್ಚರರ್ಸ್‌ ಇಷ್ಟ ಇಲ್ಲ ಅಂತ ಸಿಲಬಸ್‌ ಕಷ್ಟ ಆಯ್ತೋ ಗೊತ್ತೇ ಆಗಲಿಲ್ಲ. ಪ್ರತಿದಿನ ಬೈಕೊಂಡು ಒಂದಿಷ್ಟು ಶಾಪ ಹಾಕುತ್ತಿದ್ದ ಕೈಗಳು ಸುಮ್ಮನಾದವು, ಎಷ್ಟೋ ತರಲೆ ಮಾತಿಗೆ ಕಡಿಮೆ ಮಾರ್ಕ್ಸ್ ಅಂತೆಲ್ಲೊ ಕ್ಲಾಸ್‌ ಗೆ ಲೇಟ್‌ ಆಗಿ ಬಂದೆ ಅಂತಾನೂ ಒಂದಲ್ಲ ಒಂದು ದಿನಕ್ಕೆ ಬೈಗುಳದ ಮಾತು ಲೆಕ್ಚರರ್ಸ್‌ನಿಂದ ತಪ್ಪಿದ್ದಲ್ಲ.

ಆದರೆ ಅಂದು ಮಾತ್ರ ಅವರ ಮುಖ ನೋಡುತ್ತಿದ್ದಂತೆ ಏನೋ ಆಗಾಧವಾದ ಪ್ರೀತಿ, ಗೌರವ. ಅಷ್ಟು ದಿನ ಬೈಯುತ್ತಾ ಇದ್ದ ಮಾತುಗಳು ನನ್ನ ಮುಂದಿನ ಜೀವನಕ್ಕೆ ಒಂದು ಅರ್ಥವನ್ನು ನೀಡುವ ಮೌಲ್ಯಗಳನ್ನು ತುಂಬುವಂತಿದ್ದವು.

ಒಂದು ಕಡೆ ಪ್ರೀತಿ ಕಾಳಜಿ ತುಂಟಾಟಿಕೆ ಮಿಸ್‌ ಮಾಡಿಕೊಂಡರೆ, ಇನ್ನೊಂದು ಕಡೆ ಆ ಬೈಗುಳಗಳು ಮಿಸ್‌ ಆಗುತ್ತಲ್ಲ ಎನ್ನುವ ಬೇಜಾರು. ನಾವು ಅವರ ಮನಸ್ಸಿಗೆ ಅದೆಷ್ಟು ನೋವು ಆಗೋ ರೀತಿ ನಡೆದುಕೊಂಡರೂ ಸಹ ಅವರು ಯಾವುದೇ ಮನಸ್ತಾಪ ಇಲ್ಲದೆ ನಗು ಮುಖದಿಂದ ಕೊನೆಗೆ ಹೇಳಿದ ಮಾತು ಅಂದ್ರೆ “ಎಲ್ಲರಿಗೂ ಒಳ್ಳೆಯದಾಗಲಿ ದೊಡ್ಡ ದೊಡ್ಡ ವ್ಯಕ್ತಿಗಳಾಗಿ’ ಅಂತ.

ಅಂತು ತರಲೆ ತಮಾಷೆ ನಡುವೆ ಡಿಗ್ರಿ ಜೀವನದ ದಿನಗಳು ಕಳೆದದ್ದು ತಿಳಿಯಲೇ ಇಲ್ಲ. ಅದಾಗಲೇ ಒಂದು ರೀತಿಯ ಜವಾಬ್ದಾರಿ ಹೆಗಲ ಮೇಲೇರಿದ ಅನುಭವ. ಏನು ಕಲಿತೆವು, ಮುಂದೆ ಏನು ಕಲಿಯಬೇಕು ಅನ್ನೋ ಭಯ ಕಾಡಲು ಶುರುವಾಯಿತು.

ಹೀಗೆ ಕೊನೆ ದಿನಗಳಲ್ಲಿ ಕ್ಯಾಂಪಸ್‌ ಕಟ್ಟೆಯಲ್ಲಿ ಚೀರಾಟ, ಹರಟೆ ನಿಧಾನವಾಗಿ ಮೌನ ತಾಳಿತು. ಇಂಟರ್ನಲ್‌ ಅಸೈನ್ಮೆಂಟ್ಸ್ ಮಧ್ಯೆ ನಮ್ಮೆಲ್ಲರ ತುಂಟಾಟಿಕೆ ಅಡಗಿ ಕೂತಿದ್ದವು. ಬೆಳಗಿನ ಜಾವದಲ್ಲಿ ಹಾಯ್‌ ಹೇಳುತ್ತಿದ್ದ ಕೈಗಳು ಜೆರಾಕ್ಸ್.. ನೋಟ್ಸ್.. ಹಿಡಿದು ಓದುತ್ತಿದ್ದವು. ‌

ಪ್ರತಿದಿನವೂ ಹೊಸ ಹೊಸ ಬದಲಾವಣೆ, ಅಪರಿಚಿತರು ಪರಿಚಿತರಾದ ಸಂದರ್ಭ ಒಂದಿಷ್ಟು ಸಿಹಿ ಕನಸುಗಳ ಜತೆ ಒಂದಿಷ್ಟು ಕಹಿ ಘಟನೆಗಳನ್ನೂ ಮರೆತು ಮೂರು ವರ್ಷ ಮೂರು ದಿನಗಳಾಗಿ ಕಳೆದು ಹೋಯಿತು. ತುಂಟಾಟದ ಕೈಗಳು ತೋಳುಗಳ ಕೈ ಸೇರಿಸುತ್ತಿದ್ದವು. ಕಣ್ಣುಗಳಲ್ಲಿ ನೀರು ತುಂಬಿತ್ತು

ಇನ್ನುಳಿದಿದ್ದದ್ದು ನಮ್ಮ ಡಿಗ್ರಿ ಜೀವನದ ಕೊನೆಯ ಹಂತ ಫ‌ಲಿತಾಂಶ. ಈ ಫ‌ಲಿತಾಂಶ ಬರುವ ವೇಳೆಗೆ ನನ್ನ ಕೆಲವು ಫ್ರೆಂಡ್ಸ್ ತಮ್ಮ ವಿವಾಹ ಸಂಭ್ರಮದಲ್ಲಿದ್ದರು. ಇನ್ನು ಕೆಲವು ಫ್ರೆಂಡ್ಸ್ ಬೇರೆ ಕಡೆ ಹೋದರು. ಮತ್ತೂ ಕೆಲವು ಫ್ರೆಂಡ್ಸ್ ತಮ್ಮ ಊರಲ್ಲೇ ಉಳಿದುಕೊಂಡರು.

ಆದರೆ ನಾನು ನನ್ನ ಇಬ್ಬರು ಗೆಳತಿಯರೊಂದಿಗೆ ನಮ್ಮದೇ ಆಸೆಯಾಗಿದ್ದ ವಿಶ್ವವಿದ್ಯಾನಿಲಯಕ್ಕೆ ಹೋದೆವು. ನಮ್ಮ ಅಚ್ಚುಮೆಚ್ಚಿನ ಮೇಡಂನ ಆಶೀರ್ವಾದದೊಂದಿಗೆ ನಾವೆಲ್ಲರೂ ಮಾಧ್ಯಮ ಪ್ರಪಂಚಕ್ಕೆ ಹೇಳಿ ಮಾಡಿಸಿದ ವಿಶ್ವವಿದ್ಯಾನಿಲಯಕ್ಕೆ ಬಂದಿದ್ದೇವೆ. ಇಲ್ಲಿ ಒಳ್ಳೆಯ ಶಿಕ್ಷಣದೊಂದಿಗೆ ಜೀವನದ ಪ್ರಮುಖ ಘಟ್ಟವಾದ ಸ್ನಾತಕೋತ್ತರ ಪದವಿ ಜತೆ ಮುಂದೆ ಒಬ್ಬ ಉತ್ತಮ ವ್ಯಕ್ತಿಯಾಗಿ ಹೊರ ಹೋಗಬೇಕೆಂಬ ಆಸೆಯೊಂದಿಗೆ ಹೆಜ್ಜೆಗಳನ್ನಿಡುತ್ತಿದ್ದೇನೆ. ಈಗ ಇನ್ನೂ ಹೊಸ ಹೊಸ ಗೆಳೆಯರು. ಸ್ನಾತಕೋತ್ತರ ಜೀವನದ ಆರಂಭ ಶುರುವಾಗಿದೆ. ಇಲ್ಲಿಯೂ ಕೂಡ ಅದೆಷ್ಟೋ ವಿಚಾರಗಳನ್ನ ನಾನು ಕಲಿಯುತ್ತಿದ್ದೇನೆ. ಮುಂದೊಂದು ದಿನ ಹಿಂತಿರುಗಿ ನೋಡುವಾಗ ಈಗಿನ ದಿನಗಳನ್ನು ಮರುಕಳಿಸಲು ಸಾಧ್ಯವಿಲ್ಲ. ಆದರೆ ನೆನೆಯುತ್ತಾ ನಗಬಹುದು.

 ರಂಜಿತಾ ಎಚ್‌.ಕೆ.

ಹಾಸನ

Advertisement

Udayavani is now on Telegram. Click here to join our channel and stay updated with the latest news.

Next