ಮಂಗಳೂರು: ಬಿರುಸಿನ ಮಳೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷೆ ದೃಷ್ಟಿಯಿಂದ ರಜೆ ನೀಡಲಾಗುತ್ತಿದೆ. ಕಾಲೇಜುಗಳ ಆಡಳಿತ ಮಂಡಳಿಯವರು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರಿಗೆ ಸೂಚನೆ ನೀಡಿದರು.
ಪ್ರಾಕೃತಿಕ ವಿಕೋಪ ನಿರ್ವಹಣೆ ಯಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಹಮ್ಮಿಕೊ ಳ್ಳಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ವ್ಯವಸ್ಥೆಯ ಬಗ್ಗೆ ಮೊದಲು ಸಮೀಕ್ಷೆ ಮಾಡಬೇಕು. ಹಳ್ಳಿ, ಹಾಸ್ಟೆಲ್‌ನಿಂದ ಅಥವಾ ಇತರ ವ್ಯವಸ್ಥೆಗಳು ಸೇರಿದಂತೆ ಕಾಲೇಜಿಗೆ ಹೇಗೆ ಬರುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳಬೇಕು. ಜಿಲ್ಲಾಡಳಿತ ರಜೆ ಘೋಷಿಸಿದಾಗ ಕಡ್ಡಾಯವಾಗಿ ರಜೆ ನೀಡಲೇಬೇಕು. ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಅಧಿನಿಯಮದ ನಿಯಮಗಳನುಸಾರ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಡಳಿತ ಒಂದು ಬಾರಿ ಆದೇಶ ಹೊರಡಿಸಿದರೆ ಅದು ಅಧಿಕೃತ ಹಾಗೂ ಅಂತಿಮ. ಅದನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದರು.
ಮಂಗಳೂರು ಮನಪಾ ಪ್ರಭಾರ ಆಯುಕ್ತ ಪ್ರಶಾಂತ್ ಕುಮಾರ್ ಮಿಶ್ರ, ಎಡಿಸಿ ಕೃಷ್ಣಮೂರ್ತಿ, ಡಿಡಿಪಿಐ ಸುಧಾಕರ್, ಡಾ| ಎಂ.ಎಸ್. ಗುರುಪ್ರಸಾದ್, ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಮಂಜುನಾಥ್ ಸೇರಿದಂತೆ ವಿವಿಧ ಕಾಲೇಜಿನ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಮಳೆಯ ಕಾರಣಕ್ಕೆ ರಜೆ: ಸಾರ್ವತ್ರಿಕ ರಜೆಗೆ ಕತ್ತರಿ?
ಮಂಗಳೂರು: ಭಾರೀ ಮಳೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾ ದ್ಯಂತ ಶಾಲಾ ಕಾಲೇಜುಗಳಿಗೆ ನೀಡಿದ ರಜೆಯನ್ನು ಸಾರ್ವತ್ರಿಕ ರಜಾ ದಿನಗಳಲ್ಲಿ ಸರಿದೂಗಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.
ಸುಮಾರು 6 ದಿನ ರಜೆ ದೊರೆತಿದೆ. ಈ ಸಮಯದಲ್ಲಿ ಮುಗಿಯಬೇಕಿದ್ದ ಪಠ್ಯಗಳನ್ನು ಹೇಗೆ ಮುಗಿಸುವುದು ಎಂಬ ಬಗ್ಗೆ ಒಂದೆರಡು ದಿನದಲ್ಲಿ ಇಲಾಖಾ ಪ್ರಮುಖರ ಜತೆಗೆ ಚರ್ಚಿಸಿ ಸೂಚಿಸಲಾಗುವುದು ಎಂದು ಡಿಡಿಪಿಐ
ಸುಧಾಕರ್ ತಿಳಿಸಿದ್ದಾರೆ.