ಬೆಂಗಳೂರಿನ ಇತಿಹಾಸ ಸಾರುವ ಶಾಸನ ಕಲ್ಲುಗಳ ಬಗ್ಗೆ ಹಿಂದೊಮ್ಮೆ ವಿಸ್ತಾರವಾಗಿ ಬರೆದಿದ್ದೆವು. ಈ ಕುರಿತು ಬೆಂಗಳೂರಿಗರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿರುವವರು ಉದಯ್‌ಕುಮಾರ್ ಮತ್ತು ವಿನಯ್‌ಕುಮಾರ್.
ಕನ್ನಡನಾಡಿನ ಹಿರಿಮೆಯನ್ನು ಸಾರುವ ಉದ್ದೇಶದಿಂದ ಹೇಗೆಲ್ಲಾ ಶಾಸನಕಲ್ಲುಗಳನ್ನು ಪುನರುಜ್ಜೀವಗೊಳಿಸಬಹುದು ಎನ್ನುವುದಕ್ಕೆ ಅವರ ಕಾರ್ಯ ಒಳ್ಳೆಯ ಉದಾಹರಣೆ. ಅತ್ಯಂತ ಹಳೆಯದು ಎನ್ನಲಾದ ಕ್ರಿ.ಶ 750 ಇಸವಿಯ ಹೆಬ್ಬಾಳದ ಶಾಸನದ ತದ್ರೂಪನ್ನು ಅತ್ಯಾಧುನಿಕ 3ಡಿ ಪ್ರಿಂಟಿಂಗ್ ಮತ್ತಿತರ ತಂತ್ರಜ್ಞಾನಗಳನ್ನು ಬಳಸಿ ಮರು ಸೃಷ್ಟಿಸಿದ್ದಾರೆ.
ಹಿತ್ತಾಳೆಯಲ್ಲಿ ಮಾಡಲ್ಪಟ್ಟಿರುವ ಈ ಶಾಸನ ಪ್ರತಿಯನ್ನು ಸಂಗ್ರಹಕಾರರು ಜತನದಿಂದ ಕಾಪಾಡಿಕೊಳ್ಳುವ (ಕಲೆಕ್ಟರ್ ಎಡಿಷನ್) ಮಾದರಿಯಲ್ಲಿ ರೂಪಿಸಲಾಗಿರುವುದು ವಿಶೇಷ. ಈ ಕೆಲಸದಲ್ಲಿ ಹೆರಿಟೇಜ್ ರಿವೈವಲ್ ಟ್ರಸ್ಟ್, ಆಲ್ಟೆಮ್ ಟೆಕ್ನಾಲಜೀಸ್, ಆರ್ಟೆಕ್ 3ಡಿ ಮತ್ತು ಟಾಟಾ ಎಲಿಕ್ಸಿ ಕಂಪನಿಯೂ ಕೈಜೋಡಿಸಿದೆ. ಇದು ಖರೀದಿಗೆ ಲಭ್ಯವಿದೆ.
ಹೆಬ್ಬಾಳ ಶಾಸನ ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಶಿಲಾಶಾಸನಗಳಲ್ಲೇ ಹಳೆಯದು. ಅದನ್ನು ಹೆಬ್ಬಾಳದಲ್ಲಿ ಪ್ರತಿಷ್ಠಾಪಿಸುವ ಕೆಲಸದಲ್ಲಿ ಉದಯ್ ಮತ್ತು ವಿನಯ್ ಅವರ ತಂಡ ಶ್ರಮಿಸುತ್ತಿದೆ. ಈ ಶಿಲಾಶಾಸನವನ್ನು ಇಡುವ ಸಲುವಾಗಿ ಕಲ್ಲಿನ ಮಂಟಪವನ್ನು ರೂಪಿಸಲಾಗಿದೆ. ಮಂಟಪವನ್ನು ಆರ್ಕಿಟೆಕ್ಟ್ ಯಶಸ್ವಿನಿ ಶರ್ಮಾವರು ವಿನ್ಯಾಸಗೊಳಿಸಿದ್ದು, ಶಿಲ್ಪಿ ಗಣೇಶ್ ಎಲ್. ಭಟ್ ಅವರ ಮಾರ್ಗದರ್ಶನದಲ್ಲಿ ಮಂಟಪ ಮೂಡಿ ಬರುತ್ತಿದೆ.
ಇದರ ವೈಶಿಷ್ಟ್ಯವೆಂದರೆ ಈ ಶಿಲಾಶಾಸನವನ್ನು ರೂಪಿಸಿದ ಗಂಗರ ವಾಸ್ತುಶೈಲಿಯಲ್ಲೇ ಮಂಟಪವನ್ನು ರೂಪಿಸಲಾಗಿದೆ. ಶಾಸನದ ಹಿತ್ತಾಳೆ ಪ್ರತಿ ಮತ್ತು ಮಂಟಪದ ಕೆಲಸದಲ್ಲಿ ಅನೇಕ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ನೆರವಾಗುತ್ತಿವೆ. ಈ ಕುರಿತು ಟೀಪಾಯ್ ಫಿಲಂಸ್‌ನವರು ನಿರ್ಮಿಸಿರುವ ಸಾಕ್ಷ್ಯಚಿತ್ರವೊಂದು ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಹೆಚ್ಚಿನ ಮಾಹಿತಿಗೆ: 9845204268