Advertisement
ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ ಸಿಕ್ಕಿ ವರ್ಷ ಕಳೆದಿದ್ದು, ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆಸ್ತಿ ಹೊಂದಿರುವ 42 ಅಧಿಕಾರಿಗಳನ್ನು ಬಂಧಿಸಲಾಗಿದೆ. ಆದರೆ ಭ್ರಷ್ಟರ ಕೋಟೆಗೆ ದೊಡ್ಡ ಸೈನ್ಯದೊಂದಿಗೆ ಲಗ್ಗೆ ಇಟ್ಟು ಭಾರೀ ಮೊತ್ತದ ಸಂಪತ್ತು ಬೆಳಕಿಗೆ ತರಲಷ್ಟೇ ಲೋಕಾಯುಕ್ತ ಸೀಮಿತವಾಗಿದೆ. ದಾಳಿಗೊಳಗಾದವರು ಅಕ್ರಮ ಎಸಗಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರ ಪತ್ತೆಹಚ್ಚಿ ದೋಷಾರೋಪಣ ಪಟ್ಟಿ ಸಲ್ಲಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಪರಿಣಾಮ ಡಿಎ ಕೇಸ್‌ನಲ್ಲಿ ಲೋಕಾಯುಕ್ತ ದಾಳಿಗೊಳಗಾದ ಒಬ್ಬ ಭ್ರಷ್ಟ ಅಧಿಕಾರಿಗಳಿಗೂ ಶಿಕ್ಷೆಯಾಗಿಲ್ಲ.
ಭಾರೀ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಪ್ರಕರಣಗಳಲ್ಲಿ ಸರಕಾರಿ ಅಧಿಕಾರಿಗಳ ಮೇಲಿನ ದಾಳಿಯ ಬಳಿಕ ದಾಳಿಗೊಳಗಾದ ವ್ಯಕ್ತಿಯ ಆದಾಯ ಮೂಲ, ಆಸ್ತಿ ವಿವರದಿಂದ ಹಿಡಿದು ವಿದ್ಯುತ್ ಬಿಲ್‌ವರೆಗಿನ ಸಣ್ಣಪುಟ್ಟ ದಾಖಲೆಗಳನ್ನೂ ಬಿಡದಂತೆ ಕಲೆ ಹಾಕಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸುವುದು ಕಡ್ಡಾಯವಾಗಿದೆ. ಈ ದಾಖಲೆ ಸಂಗ್ರಹಿಸಲು ಕನಿಷ್ಠ 2ರಿಂದ 3 ವರ್ಷ ಹಿಡಿಯುತ್ತದೆ. ಹೀಗಾಗಿ ಶೇ.80ರಷ್ಟು ಪ್ರಕರಣಗಳಲ್ಲಿ ಸಾಕ್ಷ್ಯ ಪತ್ತೆ ಹಚ್ಚುವುದೇ ಸವಾಲಾಗಿದೆ. ಇತರ ಪ್ರಕರಣಗಳಲ್ಲಿ ಇಷ್ಟು ದಾಖಲೆ ಸಂಗ್ರಹಿಸುವ ಅಗತ್ಯವಿರುವುದಿಲ್ಲ.
ಇನ್ನು ಲೋಕಾಯುಕ್ತದಲ್ಲಿರುವ ಪ್ರಮುಖ ಪ್ರಕರಣಗಳಲ್ಲಿ ಅಭಿಯೋಜನೆ ಮಂಜೂರಾತಿ ಸಿಗುವುದು ವಿಳಂಬವಾಗುತ್ತಿದೆ. ದಾಳಿಗೊಳಗಾದವರ ವೃತ್ತಿಗೆ ಸಂಬಂಧಿಸಿ ಯಾವುದೇ ವಿಚಾರಣೆ ನಡೆಸಬೇಕಾದರೂ ಸಕ್ಷಮ ಪ್ರಾಧಿಕಾರದಿಂದ ಲೋಕಾಯುಕ್ತ ಪೊಲೀಸರು ಕಡ್ಡಾಯವಾಗಿ ಅನುಮತಿ ಪಡೆಯಲೇ ಬೇಕು. ಮೇಲಧಿಕಾರಿಗಳು ಸುಲಭವಾಗಿ ತಮ್ಮ ಅಧೀನ ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡುವುದಿಲ್ಲ. ಕ್ಲಾಸ್-1 ಅಧಿಕಾರಿಗಳ ವಿಚಾರಣೆಗೆ ಸರಕಾರದಿಂದ ಅನುಮತಿ ಸಿಗುವುದೇ ವಿರಳ. ಹೀಗಾಗಿ ಲೋಕಾಯುಕ್ತ ಪೊಲೀಸರಿಗೆ ಸರಕಾರಿ ಅಧಿಕಾರಿಗಳ ವಿಚಾರಣೆ ನಡೆಸುವುದೇ ಹರಸಾಹಸವಾಗಿದೆ. ಭ್ರಷ್ಟಾಚಾರ ಎಸಗಿ ಸಿಕ್ಕಿಬಿದ್ದ ಬಹುತೇಕ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿ ತನಿಖೆಗೆ ತಡೆ ತಂದಿದ್ದಾರೆ. ಕೆಲವೊಮ್ಮೆ ದಾಳಿಗೊಳಗಾದವವರು ಪ್ರಭಾವಿ ರಾಜಕಾರಣಿಗಳ ಮೊರೆ ಹೋಗಿ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಾರೆ. ಸಾಕ್ಷ್ಯ ಸಿಗದಿದ್ದರೆ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸುತ್ತಾರೆ ಎಂಬ ಆರೋಪವೂ ಇದೆ.
Related Articles
ಲೋಕಾಯುಕ್ತ ಸಂಸ್ಥೆಗೆ ಹೆಚ್ಚುವರಿ ಸಿಬಂದಿ ನೀಡುವಂತೆ ಸರಕಾರಕ್ಕೆ ಪತ್ರ ಬರೆದು 6 ತಿಂಗಳುಗಳಾದರೂ ಪ್ರಯೋಜನವಾಗಿಲ್ಲ. ದೊಡ್ಡ ಮಟ್ಟದ ದಾಳಿ ನಡೆದಾಗ ಸಿಬಂದಿ ಕೊರತೆಯಿಂದ ದಾಖಲೆ ಕಲೆ ಹಾಕಲು ಸಮಸ್ಯೆಯಾಗುತ್ತಿದೆ. ಸೂಕ್ತ ಸಿಬಂದಿ ಬಲ ನೀಡಿದರೆ ಇನ್ನಷ್ಟು ಸಮರ್ಥವಾಗಿ ದಾಳಿ ನಡೆಸಿ ಅಕ್ರಮ ಪತ್ತೆ ಹಚ್ಚಬಹುದು ಎನ್ನುತ್ತಾರೆ ಲೋಕಾಯುಕ್ತ ಪೊಲೀಸರು.
Advertisement
ಮತ್ತೆ ಕಚೇರಿಗೆ ಹಾಜರ್ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಲೋಕಾಯುಕ್ತ ದಾಳಿಗೊಳಗಾಗಿ ಅಮಾನತುಗೊಂಡ 42 ಸರಕಾರಿ ಅಧಿಕಾರಿಗಳ ಪೈಕಿ ಕೆಲವರು ಮತ್ತೆ ಕೆಲಸಕ್ಕೆ ಹಾಜರಾಗಿ ಭ್ರಷ್ಟಾಚಾರ ನಡೆಸುತ್ತಿರುವ ಗಂಭೀರ ಆರೋಪವಿದೆ. ಸರಕಾರದ ಮೇಲಧಿಕಾರಿಗಳೇ ಇವರಿಗೆ ಶ್ರೀರಕ್ಷೆಯಾಗಿದ್ದಾರೆ ಎಂಬ ಆರೋಪವೂ ಇದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪ್ರಕರಣಗಳಲ್ಲಿ ತನಿಖೆ ನಡೆಸಿ ದಾಖಲೆ ಕಲೆ ಹಾಕಲು ಹೆಚ್ಚಿನ ಸಮಯ ಬೇಕಾಗುತ್ತದೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.
– ನ್ಯಾ| ಬಿ.ಎಸ್.ಪಾಟೀಲ್. ಲೋಕಾಯುಕ್ತ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವ ಪ್ರಕರಣಗಳಲ್ಲಿ ಬಲವಾದ ಸಾಕ್ಷ್ಯ ಸಂಗ್ರಹಿಸಿ ದೋಷಾರೋಪ ಪಟ್ಟಿ ಸಲ್ಲಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಬಹುತೇಕ ಪ್ರಮುಖ ಪ್ರಕರಣಗಳ ತನಿಖೆ ನಡೆಯುತ್ತಿದೆ.
– ಡಾ| ಎ.ಸುಬ್ರಹ್ಮಣ್ಯೇಶ್ವರ ರಾವ್, ಐಜಿಪಿ, ಲೋಕಾಯುಕ್ತ -ಅವಿನಾಶ ಮೂಡಂಬಿಕಾನ