Advertisement

ಸಿಗ್ನಲ್‌ ದೀಪ ಅಳವಡಿಸಲುಜನರಿಂದ ದೇಣಿಗೆ ಸಂಗ್ರಹ

12:27 PM Jul 02, 2018 | Team Udayavani |

ಕೆ.ಆರ್‌.ಪುರ: ಟಿನ್‌ ಫ್ಯಾಕ್ಟರಿ ಜಂಕ್ಷನ್‌! ಕೆ.ಆರ್‌.ಪುರ ಭಾಗದಲ್ಲಿರುವ ಐಟಿ ಕಂಪನಿಗಳು, ಕೈಗಾರಿಕೆಗಳಿಗೆ ಕೆಲಸಕ್ಕೆ ಬರುವ ಜನ ಈ ಜಂಕ್ಷನ್‌ ಹೆಸರು ಕೇಳಿದರೆ ನಿದ್ರೆಯಲ್ಲೂ ಎದ್ದು ಕೂರುತ್ತಾರೆ. ಕಾರಣ, ಟಿನ್‌ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಪ್ರತಿ ನಿತ್ಯ ಅವರು ಅನುಭವಿಸುವ ಟ್ರಾಫಿಕ್‌ ಜಾಮ್‌ನ ಯಮ ಯಾತನೆ.

Advertisement

ನಗರದ ಗಡಿ ಪ್ರದೇಶವಾಗಿರುವ ಕೆ.ಆರ್‌.ಪುರ ಭಾಗದಲ್ಲಿ ಐಟಿ ಕಂಪನಿಗಳ ಸಂಖ್ಯೆ ಹೆಚ್ಚಾದಂತೆ ಟ್ರಾಫಿಕ್‌… ಸಮಸ್ಯೆ
ಕೂಡ ವ್ಯಾಪಕ ವಾಗಿದೆ. ಹೀಗಾಗಿ “ಕೆ. ಆರ್‌. ಪುರ’ ಎಂದರೆ “ಟ್ರಾಫಿಕ್‌… ಜಾಮ್‌’ ಎಂಬ ಕುಖ್ಯಾತಿ ಅಂಟಿಕೊಂಡಿದೆ. ಅದರಲ್ಲೂ ಟಿನ್‌ ಫ್ಯಾಕ್ಟರಿ ಬಳಿ ಕೇವಲ ಒಂದು ಕಿ.ಮೀ ದೂರ ಕ್ರಮಿಸಲು ಸುಮಾರು 40ರಿಂದ 55 ನಿಮಿಷ ಸಮಯ ತಗುಲುತ್ತಿದೆ. ಈ ಟ್ರಾಫಿಕ್‌ ಜಾಮ್‌ನಿಂದ ಬೇಸತ್ತಿರುವ ಕೆಲ ಟೆಕ್ಕಿಗಳು, ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದು, ಹಣದಲ್ಲಿ ಸಿಗ್ನಲ್‌ದೀಪ ಅಳವಡಿಸಲು ನಿರ್ಧರಿಸಿದ್ದಾರೆ.
 
ಟ್ರಾಫಿಕ್‌ ಜಾಮ್‌ ಆಗುವುದೇಕೆ?: ಹೊರ ವರ್ತುಲ ರಸ್ತೆ, ರಾಷ್ಟ್ರೀಯ ಹೆದ್ದಾರಿಗಳು ಕೆ.ಆರ್‌.ಪುರದಲ್ಲಿ ಹಾದು
ಹೋಗುತ್ತವೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶದ
ವಾಹನಗಳು ಇದೇ ರಿಂಗ್‌ ರಸ್ತೆ ಮತ್ತು ಹೆದ್ದಾರಿಗಳ ಮೂಲಕ ಬೆಂಗಳೂರು ನಗರ ಪ್ರವೇಶಿಸುತ್ತವೆ. ಪ್ರತಿ ನಿತ್ಯ ಸುಮಾರು 5 ಲಕ್ಷಕ್ಕೂ ಅಧಿಕ ವಾಹನ ಗಳು ಈ ಮಾರ್ಗದಲ್ಲಿ ಸಂಚರಿಸುವುದರಿಂದ ಟಿನ್‌ ಪಾಕ್ಟರಿ ಜಂಕ್ಷನ್‌ ಬಳಿ ದಿನ ನಿತ್ಯ ಟ್ರಾಪಿಕ್‌ ಸಮಸ್ಯೆ ಉಂಟಾಗುತ್ತಿದೆ.

ಇದರೊಂದಿಗೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ತೂಗುಸೇತುವೆ, ವೈಟ್‌ ಫೀಲ್ಡ್‌ನಿಂದ ಬೈಯಪ್ಪನಹಳ್ಳಿ ನಡುವೆ ನಡೆಯುತ್ತಿರುವ ಎರಡನೇ ಹಂತದ ಮೆಟ್ರೋ ಕಾಮಗಾರಿಗಳೂ ಸಂಚಾರ ದಟ್ಟಣೆ ಹೆಚ್ಚಲು ಕಾರಣವಾಗಿವೆ. ಜತೆಗೆ ಕೃಷ್ಣರಾಜಪುರ ರೈಲು ನಿಲ್ದಾಣವಿದ್ದು, ಇಲ್ಲಿಗೆ ಬರುವ ಸಾವಿರಾರು ಪ್ರಯಾಣಿಕರು ಟಿನ್‌ ಫ್ಯಾಕ್ಟರಿ ಮೂಲಕವೇ ಸಾಗಬೇಕು.

ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಅಂತರಾಜ್ಯ ಸಾರಿಗೆ ಹಾಗೂ ಖಾಸಗಿ ಬಸ್‌ಗಳನ್ನು ಚಾಲಕರು ನಿಲ್ದಾಣದಲ್ಲಿ ನಿಲ್ಲಿಸದೆ, ಮುಖ್ಯ ರಸ್ತೆಯಲ್ಲೇ ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಇದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇನ್ನೊಂದೆಡೆ ಪಾದಚಾರಿಗಳು ಸ್ಕೈವಾಕ್‌ ಬಳಸದೆ, ರಸ್ತೆಯಲ್ಲೇ ನಡೆದು ಹೋಗುವುದು ಕೂಡ ದಟ್ಟಣೆ ತೀವ್ರತೆಗೆ ಪ್ರಮುಖ ಕಾರಣವಾಗಿದೆ.

ಪೀಕ್‌ ಹವರ್‌ಗಳಲ್ಲಿ ಸಂಚಾರ ದಟ್ಟಣೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಕನಿಷ್ಠ ಒಂದೂವರೆ ಕಿ.ಮೀ ವರೆಗೆ ವಾಹನಗಳು ಅಲುಗದೆ ನಿಂತಿರುತ್ತವೆ. 

Advertisement

ಟಿನ್‌ ಫ್ಯಾಕ್ಟರಿ ಮಾರ್ಗದಲ್ಲಿ ಅತಿಯಾದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ವಾಹನ ಸವಾರರು ಪ್ರತಿ ದಿನ ನರಕಯಾತನೆ ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ, ಆ ಹಣವನ್ನು ಪೊಲೀಸ್‌ ಇಲಾಖೆಗೆ ನೀಡಿ ಸಿಗ್ನಲ್‌ ದೀಪ ಅಳವಡಿಸಲು ಕೋರಲಾಗುವುದು.
 ರಾಜಿ ಕುಂಜುಮೆನ್‌, ಸಾಫ್ಟ್ವೇರ್‌ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next