Advertisement

ಪುತ್ತೂರಿನಲ್ಲಿ ಪ್ರವಾಹ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ

12:53 AM Aug 17, 2019 | Team Udayavani |

ಪುತ್ತೂರು: ಭೀಕರ ಮಳೆಯಿಂದ ಉಂಟಾಗಿರುವ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ನೆರವಾಗುವ ನಿಟ್ಟಿನಲ್ಲಿ ತಾಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶುಕ್ರವಾರ ಪುತ್ತೂರು ನಗರದಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡಲಾಯಿತು.

Advertisement

ದೇಣಿಗೆ ಸಂಗ್ರಹ ಅಭಿಯಾನಕ್ಕೆ ದರ್ಬೆ ವೃತ್ತದ ಬಳಿ ಬೆಳಗ್ಗೆ ಚಾಲನೆ ನೀಡಲಾಯಿತು. ನಗರದ ಮುಖ್ಯ ರಸ್ತೆಯ ಅಂಗಡಿ ಮುಂಗಟ್ಟುಗಳು, ಉದ್ಯಮಗಳು, ಸಾರ್ವಜನಿಕರಲ್ಲಿ ದೇಣಿಗೆ ಸಂಗ್ರಹಿಸಲಾಯಿತು.

ಪ್ರೀತಿಯಿಂದ ನೀಡಿ
ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಮಾತನಾಡಿ, ಪ್ರವಾಹ ಹಾಗೂ ಪ್ರಾಕೃತಿಕ ವಿಕೋಪದಿಂದ ರಾಜ್ಯಾದ್ಯಂತ ನೊಂದವರು, ಬೆಂದವರು ನಮ್ಮಂತೆ ಇರುವವರು. ಅವರ ನೋವು ನಮ್ಮ ನೋವು ಕೂಡ ಎಂಬುದನ್ನು ಅರಿತುಕೊಂಡು ಇಚ್ಛಾನುಶಕ್ತಿ ಮತ್ತು ಪ್ರೀತಿಯಿಂದ ನೆರವು ನೀಡಬೇಕು ಎಂದು ವಿನಂತಿಸಿದರು.

ನಮ್ಮ ಜವಾಬ್ದಾರಿ
ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಎಲ್ಲವನ್ನೂ ಕಳೆದುಕೊಂಡು ಅನಾಥರಾದವರ ಕಣ್ಣೀರು ಒರೆಸಿ ಪುನರ್ವಸತಿ ಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿ. ನೆರವಾಗುವ ಮನಸ್ಥಿತಿ ನಮ್ಮದಾಗಬೇಕು. ಪೂರ್ಣ ಮನಸ್ಸಿನಿಂದ 1 ರೂ. ನೀಡಿದರೂ ಅಸಹಾಯಕರಿಗೆ ನೆರವಾಗುತ್ತದೆ. ಅದು ಮುಖ್ಯಮಂತ್ರಿ ಪರಿಹಾರ ನಿಧಿಯ ಮೂಲಕ ಸಂತ್ರಸ್ತರಿಗೆ ಸೇರುತ್ತದೆ ಎಂದು ಹೇಳಿದರು.

ತಿಂಗಳ ವೇತನ ಘೋಷಣೆ

Advertisement

ಶಾಸಕ ಸಂಜೀವ ಮಠಂದೂರು ಹಾಗೂ ದ.ಕ.ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ತಮ್ಮ ಒಂದು ತಿಂಗಳ ಸಂಬಳವನ್ನು ಸಂತ್ರಸ್ತರ ನಿಧಿಗೆ ನೀಡುವುದಾಗಿ ಘೋಷಿಸಿದರು. ಉದ್ಯಮಿ ವಾಮನ ಪೈ 5 ಸಾವಿರ ರೂ. ಚೆಕ್‌ ನೀಡಿ ಚಾಲನೆ ನೀಡಿದರು. ಒಂದು ನಿಮಿಷದಲ್ಲಿ ಸುಮಾರು 25 ಸಾವಿರ ರೂ. ಸಂಗ್ರಹವಾಯಿತು. ಸ್ವತಃ ಸಹಾಯಕ ಆಯುಕ್ತರು, ಶಾಸಕರು, ಜನಪ್ರತಿನಿಧಿಗಳು ದೇಣಿಗೆ ನೀಡಿ, ಅಂಗಡಿ ಮುಂಗಟ್ಟುಗಳಿಗೆ ತೆರಳಿ ದೇಣಿಗೆ ನೀಡಲು ವಿನಂತಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ರೋಟರಿ, ಜೆಸಿಐ, ಲಯನ್ಸ್‌ ಸಹಿತ ಸಂಘ ಸಂಸ್ಥೆಗಳ ಪದಾಧಿಕಾರಿಗಳು ದೇಣಿಗೆ ಸಂಗ್ರಹದಲ್ಲಿ ಪಾಲ್ಗೊಂಡರು.

ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ತಹಶೀಲ್ದಾರ್‌ ಅನಂತ ಶಂಕರ್‌, ತಾ.ಪಂ. ಇಒ ನವೀನ್‌ ಭಂಡಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಜೀವಂಧರ್‌ ಜೈನ್‌, ಗೋಪಾಲಕೃಷ್ಣ ಹೇರಳೆ, ಚಂದ್ರಶೇಖರ್‌ ಬಪ್ಪಳಿಗೆ, ರಾಮದಾಸ್‌ ಹಾರಾಡಿ, ಆರ್‌.ಸಿ. ನಾರಾಯಣ, ಜನಪ್ರತಿನಿಧಿಗಳು ಹಾಗೂ ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ, ಗೌರಿ ಬನ್ನೂರು, ಶಯನಾ ಜಯಾನಂದ, ಮಮತಾ ರಂಜನ್‌, ದೀಕ್ಷಾ ಪೈ, ರಾಜೇಶ್‌ ಬನ್ನೂರು, ಅಧಿಕಾರಿಗಳಾದ ಅರುಣ್‌ ಕುಮಾರ್‌, ಶ್ವೇತಾ ಕಿರಣ್‌, ರೇಖಾ, ಎಂ. ಮಾಮಚ್ಚನ್‌, ಪ್ರಮೋದ್‌ ಕುಮಾರ್‌ ಪಾಲ್ಗೊಂಡರು.

3.28 ಲಕ್ಷ ರೂ. ಸಂಗ್ರಹ
ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ನೆರವಾಗುವ ನಿಟ್ಟಿನಲ್ಲಿ ತಾಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶುಕ್ರವಾರ ಪುತ್ತೂರು ನಗರದಲ್ಲಿ ನಡೆಸಲಾದ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಅಭಿಯಾನದಲ್ಲಿ ಒಟ್ಟು 3,28,135 ರೂ. ಸಂಗ್ರಹವಾಗಿದೆ. ಒಟ್ಟು 1,45,130 ರೂ. ನಗದು ಹಾಗೂ 1,83,005 ರೂ. ಚೆಕ್‌ ಮೂಲಕ ಸಂಗ್ರಹವಾಗಿದೆ. ಸಂಗ್ರಹವಾದ ದೇಣಿಗೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು. ದೇಣಿಗೆ ನೀಡಿದ ಎಲ್ಲ ಸಾರ್ವಜನಿಕರಿಗೆ ಧನ್ಯವಾದ ಸಲ್ಲಿಸುವುದಾಗಿ ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next