Advertisement

ಪರಿಶಿಷ್ಟರ “ಗ್ಯಾರಂಟಿ”ಗೆ ಜಾತಿ ದಾಖಲೆ ಸಂಗ್ರಹ

09:27 PM Aug 04, 2023 | Team Udayavani |

ದಾವಣಗೆರೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಮೀಸಲಿರುವ ಅನುದಾನದಲ್ಲಿ ಒಂದಿಷ್ಟು ಭಾಗ ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಈಗ ಗ್ಯಾರಂಟಿ ಯೋಜನೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳನ್ನು ಗುರುತಿಸಲು ಜಾತಿ ಪ್ರಮಾಣ ಪತ್ರ ಸಂಗ್ರಹಕ್ಕೆ ಮುಂದಾಗಿದೆ.

Advertisement

ರಾಜ್ಯ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುವಲ್ಲಿ ಪಡಿತರ ಚೀಟಿ ಪ್ರಮುಖ ದಾಖಲೆ ಆಗಿರುವುದರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿ ಕುಟುಂಬದವರಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಗ್ಗೆ ಅಟಲ್‌ ಜನಸ್ನೇಹಿ ಕೇಂದ್ರದಿಂದ ಪಡೆದ ಜಾತಿ ಪ್ರಮಾಣ ಪತ್ರ ಸೀÌಕರಿಸಲಾಗುತ್ತಿದೆ. ಈ ಅಂಕಿ-ಅಂಶ ಹಾಗೂ ದಾಖಲೆಯೇ ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ, ಪಂಗಡದ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನ ಹಂಚಿಕೆಗೆ ಮೂಲಾಧಾರ ಆಗುವ ಸಾಧ್ಯತೆ ಇದೆ.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಈಗಾಗಲೇ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಪರಿತರ ಚೀಟಿ ಹಾಗೂ ಕುಟುಂಬ ಸದಸ್ಯರ ಸಂಖ್ಯೆಯ ಅಂಕಿ-ಅಂಶ ಇದೆಯಾದರೂ ಪ್ರಸಕ್ತ ಗ್ಯಾರಂಟಿ ಯೋಜನೆಗಳಿಗೆ ಅನುದಾನ ವಿನಿಯೋಗಿಸಲು ಅನುಕೂಲ ಆಗುವಂತೆ ನವೀಕೃತ ಅಂಕಿ-ಅಂಶ ಸಂಗ್ರಹಿಸಲು ಜಾತಿ ಪ್ರಮಾಣ ಪತ್ರದ ದಾಖಲೆ ಸಂಗ್ರಹಿಸಲಾಗುತ್ತಿದೆ.

ಈಗಲೇ ಶುರು ದಾಖಲೆ ಸಂಗ್ರಹ: ಪ್ರಸಕ್ತ ಆಗಸ್ಟ್‌ ತಿಂಗಳು ಪಡಿತರ ಆಹಾರಧಾನ್ಯ ಕೊಡುವಾಗ ಜಾತಿ ಪ್ರಮಾಣ ಪತ್ರದ ನಕಲು ಪ್ರತಿ ಹಾಗೂ ಪಡಿತರ ಚೀಟಿ ನಕಲು ಪ್ರತಿ ಪಡೆದುಕೊಳ್ಳಬೇಕೆಂದು ಆಹಾರ ಇಲಾಖೆ ಮೂಲಕ ಈಗಾಗಲೇ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ. ಹೀಗಾಗಿ ಈ ತಿಂಗಳ ಪಡಿತರ ಪಡೆಯುವಾಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳು ತಮ್ಮ ಜಾತಿ ಪ್ರಮಾಣ ಪತ್ರವನ್ನು ನ್ಯಾಯಬೆಲೆ ಅಂಗಡಿಗಳಿಗೆ ಸಲ್ಲಿಸಬೇಕಾಗಿದೆ.

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ (ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ) 34294 ಕೋಟಿ ರೂ. ವಿಶೇಷ ಅನುದಾನವನ್ನು 2023-24ನೇ ಸಾಲಿನ ಬಜೆಟ್‌ನಲ್ಲಿ ಕಾಯ್ದಿರಿಸಿದೆ. ಇದರಲ್ಲಿ 1144 ಕೋಟಿ ರೂ.ಗಳನ್ನು ವಿವಿಧ ಗ್ಯಾರಂಟಿ ಯೋಜನೆಗಳಿಗೆ ಬಳಸಲು ಮುಂದಾಗಿದೆ. ಎಸ್‌ಸಿಎಸ್‌ಪಿಯಲ್ಲಿ 7,570 ಕೋಟಿ ಹಾಗೂ ಟಿಎಸ್‌ಪಿಯಲ್ಲಿ 3430 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗಾಗಿಯೇ ಬಳಸಲಾಗುವುದು. ಇದನ್ನು ಬೇರೆಯವರಿಗೆ ಬಳಸುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಫಲಾನುಭವಿಗಳಿಂದ ಜಾತಿ ಪ್ರಮಾಣ ಪತ್ರ ಸಂಗ್ರಹಿಸುತ್ತಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ.

Advertisement

21.35 ಲಕ್ಷ ಎಸ್‌ಸಿ, ಎಸ್‌ಟಿ ಕಾರ್ಡ್‌ಗಳು
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಪ್ರಸ್ತುತ ಇರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 25,31,485 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಕ್ರಿಯ ಪಡಿತರ ಚೀಟಿಗಳಿವೆ. ಇವುಗಳಲ್ಲಿ ಅಂತ್ಯೋದಯ ಅನ್ನ ಪಡಿತರ ಚೀಟಿಗಳ ಸಂಖ್ಯೆ 3,95,748, ಆದ್ಯತಾ ಪಡಿತರ ಚೀಟಿ(ಬಿಪಿಎಲ್‌) 21,35,737 ಇವೆ. ಜಾತಿ ಅಂಕಿ-ಅಂಶ ಅಪ್‌ಡೇಟ್‌ ಮಾಡುವ ಮೊದಲು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

ಅದರ ಪ್ರತಿಯನ್ನು ಕಡತದಲ್ಲಿ ನಿರ್ವಹಿಸಬೇಕು. ಕುಟುಂಬ ತಂತ್ರಾಂಶದಿಂದ ಸ್ವೀಕರಿಸಿದ ಎಸ್‌ಟಿ, ಎಸ್‌ಟಿ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಫಲಾನುಭವಿಗಳಿಂದ ಸಮನ್ವಯ ಸಾಧಿಸಿ ಪಡಿತರ ಚೀಟಿಗಳಲ್ಲಿ ಎಸ್‌ಸಿ, ಎಸ್‌ಟಿ ವಿವರ ಅಪ್‌ಡೇಟ್‌ ಮಾಡಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರು ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪ.ಪಂಗಡದ ಫಲಾನುಭವಿಗಳ ಜಾತಿ ಪ್ರಮಾಣ ಪತ್ರ ಸಂಗ್ರಹಿಸಲು ಇಲಾಖೆ ಆಯುಕ್ತರು ಸೂಚಿಸಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಟುಂಬದವರಿಂದ ಜಾತಿ ಪ್ರಮಾಣ ಪತ್ರ ಸಂಗ್ರಹಿಸಲಾಗುತ್ತಿದೆ. ಆಗಸ್ಟ್‌ ತಿಂಗಳ ಪಡಿತರ ಕೊಡುವಾಗ ಜಾತಿ ಪ್ರಮಾಣ ಪತ್ರ ಪಡೆಯಲು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನಿರ್ದೇಶನ ನೀಡಲಾಗಿದೆ.
– ಸಿದ್ರಾಮ ಮಾರಿಹಾಳ, ಉಪನಿರ್ದೇಶಕರು, ಆಹಾರ ಇಲಾಖೆ

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next