ಗಜೇಂದ್ರಗಡ: ಬಕ್ರೀದ್ ಆಚರಣೆ ನಿಮಿತ್ತ ಪಟ್ಟಣದ ಕುಷ್ಟಗಿ ರಸ್ತೆ ಬಳಿಯ ಈದ್ಗಾ ಮೈದಾನದಲ್ಲಿ ಮುಸಲ್ಮಾನ್ ಬಾಂಧವರು ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ ತಾಲೂಕು ಸೇರಿ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ವಿಶೇಷ ಪ್ರಾರ್ಥಿಸಿ, ಸಂತ್ರಸ್ತರ ನೆರವಾಗುವ ಉದ್ದೇಶದಿಂದ 26 ಸಾವಿರಕ್ಕೂ ಅಧಿಕ ಪರಿಹಾರ ನಿಧಿ ಸಂಗ್ರಹಿಸಿ ಮಾನವೀಯತೆ ಮೆರೆದರು.
ಈ ವೇಳೆ ಧರ್ಮಗುರು ಹಜರತ್ ಅಲ್ಲಮಾ ಮೌಲಾನ್ ಖುಷ್ತರ ನುರಾನಿ ಖುರಾನ್ ಧರ್ಮಗ್ರಂಥ ಕುರಾನ್ ಪಠಿಸಿದರು. ಮೌಲಾನ ಖಲೀಲಅಹ್ಮದ ಖಾಜಿ ಮಾತನಾಡಿ, ಹಲವಾರ ಜನರ ಬದುಕು ಬೀದಿಗೆ ಬಂದಿದೆ. ಅಂಥವರ ನೆರವಿಗೆ ಧಾವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಇದಕ್ಕೂ ಮುನ್ನ ಬೆಳಗ್ಗೆ ಟಕ್ಕೇದ ಮಸೀದಿ, ಮದೀನಾ ಮಸೀದಿ, ಒಂಟಿಯವರ ಮಸೀದಿ, ದರ್ಗಾ ಮಸೀದಿಯ ಎಲ್ಲ ಮುಸಲ್ಮಾನ ಬಂಧುಗಳು ಜುಮ್ಮಾ ಮಸೀದಿಯಿಂದ ಜೂಲುಸ್ ಮೂಲಕ ಸಾಮೂಹಿಕ ಮೆರಣಿಗೆಯಲ್ಲಿ ಅಲಾØಹನ ನಾಮಸ್ಮರಣೆ ಮಾಡುತ್ತಾ ಪ್ರಮುಖ ಮಾರ್ಗವಾಗಿ ಕುಷ್ಟಗಿ ರಸ್ತೆ ಬಳಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮೌಲಾನಾ ಯಾಸೀನ್ ಅಶ್ರಫಿ, ಮೌಲಾಲ ರಫಿಕ್ ಅಶ್ರಫಿ, ಅಂಜುಮನ್ ಇಸ್ಲಾಂ ಕಮಿಟಿ ಚೇರಮನ್ ಎಂ.ಬಿ. ಒಂಟಿ, ಫಕ್ರುಸಾಬ ಕಾತರಕಿ, ಮಾಸುಮಲಿ ಮದಗಾರ, ಮಕ್ತುಂಸಾಬ ಮುಧೋಳ, ರಾಜು ಸಾಂಗ್ಲಿಕಾರ, ಅನ್ವರಬಾಷಾ ಹಿರೇಕೊಪ್ಪ, ಇಸ್ಮಾಯಿಲಸಾಬ ನಾಲಬಂದ, ದಾವಲಸಾಬ ಕಳಕಾಪುರ, ಎ.ಡಿ. ಕೋಲಕಾರ, ಡಿ.ಜಿ. ಮೋಮಿನ್, ಎಸ್.ಎಂ. ಆರಗಿದ್ದಿ ಸೇರಿದಂತೆ ಸುತ್ತಲಿನ ಗ್ರಾಮದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಮಕ್ಕಳು, ವೃದ್ದರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.