ಕನೇರಿ: ರಾಜ್ಯದಲ್ಲಿ ಪುಣ್ಯಕೋಟಿ ಯೋಜನೆಯಡಿ ಒಂದು ಹಸುವಿಗೆ 11,000 ರೂ.ನಂತೆ ದಾನಿಗಳಿಂದ ಸಂಗ್ರಹಿಸುತ್ತಿದ್ದು, 1 ಲಕ್ಷ ಹಸುಗಳನ್ನು ಪೋಷಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಹಾರಾಷ್ಟ್ರ ಕನೇರಿಮಠದಲ್ಲಿ ಸಹೃದಯಿ ಮಠಾಧೀಶರ ಒಕ್ಕೂಟದ ಸಂತ-ಭಕ್ತರ ಸಮಾವೇಶ ಹಾಗೂ ಕರ್ನಾಟಕ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ, ಗೋವುಗಳ ಸಗಣಿ-ಮೂತ್ರದ ಮೌಲ್ಯವರ್ಧನೆಯೊಂದಿಗೆ ಉತ್ಪನ್ನಗಳನ್ನು ತಯಾರಿಸುವ ಮೂಲಕ ಸರಕಾರ ಆರಂಭಿಸಿದ ಗೋಶಾಲೆಗಳು ಸ್ವಯಂ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತರು,ನೇಕಾರರು, ಆಟೋರಿಕ್ಷಾ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಸ್ಕಾಲರ್ ಶಿಪ್ ಯೋಜನೆ ಜಾರಿಗೊಳಿಸಲಾಗಿದ್ದು, 14 ಜನರಿಗೆ ಇದು ಪ್ರಯೋಜನಕಾರಿ ಆಗಿದೆ.ಕನೇರಿಮಠಕ್ಕೆ ಇದೇ ಮೊದಲಬಾರಿಗೆ ಭೇಟಿ ನೀಡಿದ್ದೇನೆ. ದೇಶದಲ್ಲಿಯೇ ಆದರ್ಶ ಮಠವಾಗಿದೆ. ಧಾರ್ಮಿಕ, ಆರ್ಥಿಕ, ಸಾಮಾಜಿಕ ಕ್ರಾಂತಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದೆ.ಕರ್ನಾಟಕದಲ್ಲಿ ಕನೇರಿಮಠದ ಆರಂಭಿಸಿದರೆ ರಾಜ್ಯ ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಸಿಎಂ ಭರವಸೆ ನೀಡಿದರು.
ಕನೇರಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ಕರ್ನಾಟಕ ಭವನಕ್ಕೆ ಸರಕಾರ ಈಗಾಗಲೇ 3 ಕೋಟಿ ರೂ.ಗಳ ಅನುದಾನ ಘೋಸಿಸಿದ್ದು, ಇನ್ನು 2 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ, ಅನೇಕ ಸಚಿವರು, ಮಹಾರಾಷ್ಟ್ರದ ಉನ್ನತ ಮತ್ತು ತಂತ್ರಜ್ಞಾನ ಸಚಿವ ಚಂದ್ರಕಾಂತ ದಾದಾ ಪಾಟೀಲ ಇದ್ದರು. ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ನಂತರ ಮುಖ್ಯಮಂತ್ರಿ ಯವರು, ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಮುರುಗೇಶ ನಿರಾಣಿ, ಶಂಕರ ಪಾಟೀಲ ಮುನೇನಕೊಪ್ಪ ಇನ್ನಿತರರೊಂದಿಗೆ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದರು.