Advertisement

Gangavalli Bridge ಕೂಡುರಸ್ತೆ ಕುಸಿತ; ವಾಹನ ಸವಾರರ ಪರದಾಟ

05:24 PM Jun 12, 2024 | Team Udayavani |

ಗೋಕರ್ಣ : ಮಳೆಗಾಲಕ್ಕೂ ಪೂರ್ವದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ಮಾಡಲು ಗಂಗಾವಳಿ ಸೇತುವೆಯಿಂದ ಮಂಜಗುಣಿ ಮತ್ತು ಗಂಗಾವಳಿಯಲ್ಲಿ ಕೂಡುರಸ್ತೆಗೆ ಮಣ್ಣನ್ನು ಹಾಕಲಾಗಿತ್ತು. ಆದರೆ ಅದು ಈಗ ಗಂಗಾವಳಿಯಲ್ಲಿ ಕುಸಿದಿದ್ದರಿಂದ ಈಗ ಹಾಕಲಾದ ಮಣ್ಣಿನಿಂದಾಗಿ ವಾಹನ ಸಂಚರಿಸಲು ಕಷ್ಟಪಡುವಂತಾಗಿದೆ.

Advertisement

ಈ ಹಿಂದೆ ಹಾಕಿದ ಮಣ್ಣು ಮಳೆಯ ನೀರಿಗೆ ಕುಸಿದಿದ್ದರಿಂದಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ನಂತರ ಗುತ್ತಿಗೆ ಕಂಪನಿಯವರು ಹಾಕಿದ ಮಣ್ಣಿನಿಂದಗಿ ಇನ್ನಷ್ಟು ಸಮಸ್ಯೆ ಉಂಟಾಗಿದೆ. ಕೆಂಪು ಮಣ್ಣಿನಿಂದಾಗಿ ಮಳೆಗೆ ಸಂಪೂರ್ಣ ಕೊಳಚೆಯಾಗಿದ್ದು, ದ್ವಿಚಕ್ರ ವಾಹನದವರು ಕೂಡ ಸಂಚರಿಸಲು ಭಯಪಡುವಂತಾಗಿದೆ. ಇನ್ನು ರಿಕ್ಷಾ, ಕಾರಿನವರು ಕೂಡ ಸಂಚರಿಸಲು ಭಯಪಡುತ್ತಾರೆ.

ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು, ದ್ವಿಚಕ್ರ ವಾಹನ ಹಾಗೇ ಇತರೆ ವಾಹನಗಳು ಸಂಚರಿಸುತ್ತವೆ. ಸೇತುವೆಗೆ ಹಾಕಿದ ಮಣ್ಣು ಕುಸಿದಿದ್ದರೂ ಕೂಡ ತಾಲೂಕಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ನಿಜಕ್ಕೂ ವಿಪರ್ಯಾಸ. ಗಂಗಾವಳಿ ಕೂಡುರಸ್ತೆಯು ಕುಮಟಾ ತಾಲೂಕಿಗೆ ಒಳಪಟ್ಟಿದ್ದು, ಇನ್ನುವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ. ಕಂಪನಿಯವರಿಂದ ಉತ್ತಮ ಗುಣಮಟ್ಟದ ಮಣ್ಣು ಹಾಕುವಂತೆ ತಾಕತ್ತು ಮಾಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 7 ವರ್ಷಗಳಿಂದ ಈ ಸೇತುವೆ ಕಾಮಗಾರಿ ನಡೆದಿದ್ದು, ಸೇತುವೆ ಪೂರ್ಣಗೊಂಡರೂ ಕೂಡ ಕೂಡು ರಸ್ತೆ ಸರಿಪಡಿಸಲು ಗುತ್ತಿಗೆ ಕಂಪನಿಯವರು ವಿಫಲರಾಗಿದ್ದಾರೆ. ಆದರೆ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಕೂಡ ಸ್ವಲ್ಪವೂ ಕಾಳಜಿ ವಹಿಸದಿರುವುದು ಸಹಜವಾಗಿಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಅಧಿಕಾರಿಗಳು ಇತ್ತ ಗಮನಹರಿಸುತ್ತಾರೋ ಎಂದು ಕಾದುನೋಡಬೇಕಿದೆ.

ಶಾಸಕರೇ ಅವಘಡ ತಪ್ಪಿಸಿ; ಸಾರ್ವಜನಿಕ ಆಗ್ರಹ
ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಸತತ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ಆದರೆ ಇವರು ಮನಸ್ಸು ಮಾಡಿದ್ದರೆ ಯಾವತ್ತಿಗೂ ಕಾಮಗಾರಿ ಪೂರ್ಣಗೊಳಿಸಬಹುದಿತ್ತು. ಆದರೆ ಕಳೆದ 7 ವರ್ಷಗಳಿಂದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದರೂ ಕೂಡ ಇದನ್ನು ಪೂರ್ಣಗೊಳಿಸಲು ಇನ್ನು ಸಾಧ್ಯವಾಗಿಲ್ಲ. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಸೇತುವೆ ಕೂಡುರಸ್ತೆಗೆ ಹಾಕಿದ ಮಣ್ಣು ಕುಸಿದಿದ್ದರೂ ಕೂಡ ಸ್ಥಳ ಪರಿಶೀಲನೆ ಮಾಡಿಲ್ಲ. ಅಧಿಕಾರಿಗಳನ್ನು ಕಳಿಸಿಲ್ಲ. ಇನ್ನಾದರೂ ಕ್ರಮ ಕೈಗೊಳ್ಳಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next